ADVERTISEMENT

ಶಿಗ್ಗಾವಿಯಿಂದ ಪೈಲೆಟ್ ಯೋಜನೆ ಜಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 13:54 IST
Last Updated 4 ಡಿಸೆಂಬರ್ 2022, 13:54 IST
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದ ವಾ.ಕ.ರ.ಸಾ. ಸಂಸ್ಥೆ ವಾಹನ ಚಾಲನಾ ಮತ್ತು ಮೆಕ್ಯಾನಿಕ್ ತರಬೇತಿ ಕೇಂದ್ರ ಕಾಮಗಾರಿ ಹಾಗೂ ₹8 ಕೋಟಿ ವೆಚ್ಚದಲ್ಲಿ ಶಿಗ್ಗಾವಿ ಬಸ್ ಘಟಕ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಇದ್ದಾರೆ
ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದ ವಾ.ಕ.ರ.ಸಾ. ಸಂಸ್ಥೆ ವಾಹನ ಚಾಲನಾ ಮತ್ತು ಮೆಕ್ಯಾನಿಕ್ ತರಬೇತಿ ಕೇಂದ್ರ ಕಾಮಗಾರಿ ಹಾಗೂ ₹8 ಕೋಟಿ ವೆಚ್ಚದಲ್ಲಿ ಶಿಗ್ಗಾವಿ ಬಸ್ ಘಟಕ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಇದ್ದಾರೆ   

ಹಾವೇರಿ: ‘ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ನೂತನ ಯೋಜನೆ ರೂಪಿಸಲಿದೆ. ಶಿಗ್ಗಾವಿ ತಾಲ್ಲೂಕಿನಲ್ಲಿ ಮೊದಲು ಪೈಲೆಟ್ ಯೋಜನೆ ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದ ವಾ.ಕ.ರ.ಸಾ. ಸಂಸ್ಥೆ ವಾಹನ ಚಾಲನಾ ಮತ್ತು ಮೆಕ್ಯಾನಿಕ್ ತರಬೇತಿ ಕೇಂದ್ರ ಕಾಮಗಾರಿ ಹಾಗೂ ₹8 ಕೋಟಿ ವೆಚ್ಚದಲ್ಲಿ ಶಿಗ್ಗಾವಿ ಬಸ್ ಘಟಕ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶಿಗ್ಗಾವಿ, ಸವಣೂರ, ಬಂಕಾಪೂರ ಸೇರಿದಂತೆ ಪ್ರತಿ ಗ್ರಾಮಗಳು ವೇಗವಾಗಿ ಬೆಳೆಯುತ್ತಿವೆ. ಶಾಲಾ ಮಕ್ಕಳ ಸಂಖ್ಯೆ, ವ್ಯಾಪಾರಸ್ಥರ ಸಂಖ್ಯೆ ಸೇರಿದಂತೆ ಸಾರಿಗೆ ಅಲಂಬಿತರ ಸಂಖ್ಯೆ ಹೆಚ್ಚಾಗಿತ್ತು. ಇಲ್ಲಿ ಡಿಪೋ ಆರಂಭಿಸಿದರೆ ಸಾರಿಗೆ ಅವಲಂಬಿತರಿಗೆ ಅನುಕೂಲವಾಗಲಿದೆ. ಬಸ್ ಕೊರತೆ ಇರುವುದಿಲ್ಲ. ಬಸ್‍ಗಳ ದುರಸ್ತಿ ಮಾಡಬಹುದು. ಜೊತೆಗೆ ವಾಹನ ಚಾಲನಾ ಮತ್ತು ಮೆಕ್ಯಾನಿಕ್ ತರಬೇತಿ ಕೇಂದ್ರ ಆರಂಭಿಸಿದ್ದರಿಂದ ಈ ಭಾಗದ ಯುವಕರಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಶಿಗ್ಗಾವಿ ತಾಲ್ಲೂಕಿನಲ್ಲಿ ₹30 ಕೋಟಿ ವೆಚ್ಚದಲ್ಲಿ ಐಟಿಐ ಕಾಲೇಜು ಆಧುನೀಕರಿಸಲಾಗಿದೆ, ಪಾಲಿಟೆಕ್ನಿಕ್, ಡಿಪ್ಲೊಮಾ ಕಾಲೇಜುಗಳಿವೆ. ಇದರಿಂದ ತಾಂತ್ರಿಕತೆಯಲ್ಲಿ ತರಬೇತಿ ಪಡೆಯಲು ಅನುಕೂಲವಾಗಲಿದೆ. ತಾಲ್ಲೂಕಿಗೆ ಜಿಟಿಸಿ ಕೇಂದ್ರಕ್ಕೆ ಮುಂದಿನ ತಿಂಗಳು ಅಡಿಗಲ್ಲು ಹಾಕಲಾಗುತ್ತದೆ. ತಾಲ್ಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ‘ಸ್ಕಿಲ್ ಡೆವಲಪ್‍ಮೆಂಟ್’ ಮಾಡುವುದು ನನ್ನ ಇಚ್ಛೆಯಾಗಿದೆ ಎಂದರು.

ಖಾಸಗಿ ವಲಯಗಳು ಸ್ಕಿಲ್ ಡೆವಲಪ್‍ಮೆಂಟ್‍ಗೆ ಇಲ್ಲಿ ಬರಲು ಆಸಕ್ತಿ ವಹಿಸಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲಾಗುವುದು. ಶಿಗ್ಗಾವಿಗೆ ಜೆಸಿಬಿ ಕಂಪನಿಯ ತರಬೇತಿ ಕೇಂದ್ರ ತರುವ ಪ್ರಯತ್ನ ನಡೆಸಿದೆ. ಆಟೊಮೊಬೈಲ್ ಕ್ಷೇತ್ರದಲ್ಲಿ ಇನ್ನಷ್ಟು ಉದ್ಯಮಗಳನ್ನು ತರಲು ಪ್ರಯತ್ನ ನಡೆಸಲಾಗಿದ್ದು, ಸದ್ಯದಲ್ಲೇ ಫಲಪ್ರದವಾಗಲಿದೆ ಎಂದರು.

ಸಚಿವ ಶಿವರಾಮ ಹೆಬ್ಬಾರ್ ಅವರ ಎಥಲಾನ್ ಫ್ಯಾಕ್ಟರಿ ಡಿ.18ರಂದು ಆರಂಭವಾಗಲಿದೆ. ಇದರಿಂದ ಯುವಕರಿಗೆ ಕೆಲಸ ದೊರೆಯಲಿದೆ. ಜೊತೆಗೆ ಗೋವಿನಜೋಳ, ಭತ್ತ ಹಾಗೂ ಕಬ್ಬು ಬೆಳೆಯುವ ರೈತರಿಗೆ ಬಹಳ ಅನುಕೂಲವಾಗಲಿದೆ. ಟೆಕ್ಸ್‌ಟೈಲ್‌ ಪಾರ್ಕ್‍ನಿಂದ 5 ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಶಿಕ್ಷಣ, ಉದ್ಯೋಗ, ತಾಂತ್ರಿಕ ಸ್ಕಿಲ್ ಡೆವಲಪ್‍ಮೆಂಟ್ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡಲಾಗುವುದು. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌, ವಾ.ಕ.ರ.ಸಾ. ಸಂಸ್ಥೆ ಕೇಂದ್ರ ಕಚೇರಿ ಹುಬ್ಬಳ್ಳಿಯ ಉಪಾಧ್ಯಕ್ಷ ಡಾ.ಬಸವರಾಜ ಕೆಲಗಾರ, ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌. ಜಗದೀಶ, ಮುಖ್ಯ ಕಾಮಗಾರಿ ಎಂಜಿನಿಯರ್‌ ಪ್ರಕಾಶ ಕಬಾಡಿ ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.