ADVERTISEMENT

ಹಾನಗಲ್ | ಪೈಪ್‌ಲೈನ್ ಕಾಮಗಾರಿ ಸೃಷ್ಟಿಸಿದ ದುರವಸ್ಥೆ: ರಸ್ತೆಯಲ್ಲಿ ಅಪಘಾತ ನಿರಂತರ

ಮಾರುತಿ ಪೇಟಕರ
Published 2 ಜುಲೈ 2025, 5:22 IST
Last Updated 2 ಜುಲೈ 2025, 5:22 IST
ಹಾನಗಲ್‌ ತಾಲ್ಲೂಕಿನ ಮಂತಗಿ ರಸ್ತೆಯಲ್ಲಿ ಪೈಪ್‌ಲೈನ್‌ ಅಳವಡಿಕೆಗಾಗಿ ಅಗೆದ ಮಣ್ಣಿನಲ್ಲಿ ಸಿಲುಕಿದ ಟ್ರ್ಯಾಕ್ಟರ್‌
ಹಾನಗಲ್‌ ತಾಲ್ಲೂಕಿನ ಮಂತಗಿ ರಸ್ತೆಯಲ್ಲಿ ಪೈಪ್‌ಲೈನ್‌ ಅಳವಡಿಕೆಗಾಗಿ ಅಗೆದ ಮಣ್ಣಿನಲ್ಲಿ ಸಿಲುಕಿದ ಟ್ರ್ಯಾಕ್ಟರ್‌   

ಹಾನಗಲ್: ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಸೃಷ್ಠಿಸಿರುವ ಅವಾಂತರದಿಂದ ತಾಲ್ಲೂಕಿನ ಮಂತಗಿ ರಸ್ತೆಯಲ್ಲಿ ಸಂಚಾರ ದುರಸ್ತರವಾಗಿದ್ದು, ಇದರಿಂದ ನಿತ್ಯ ಸಣ್ಣಪುಟ್ಟ ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ. ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗುತ್ತಿದೆ.

ಮಳಗಿಯ ಧರ್ಮಾ ಜಲಾಶಯದಿಂದ ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಯೋಜನೆ ಅಡಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ನಡೆಯುತ್ತಿದ್ದು, ಹಾನಗಲ್‌ನ ಆನಿಕೆರೆ ಸಮೀಪದಿಂದ ಮಂತಗಿ ಗ್ರಾಮದ ತನಕ ರಸ್ತೆಯ ಒಂದು ಬದಿಯಲ್ಲಿ ಮಣ್ಣ ಅಗೆದು ಪೈಪ್‌ ಅಳವಡಿಸಲಾಗಿದೆ. ರಸ್ತೆಯ ಅಂಚಿಗೆ ಹೊಂದಿಕೊಂಡು ಮಣ್ಣು ಅಗೆದ ಕಾರಣ ಗುಂಡಿಗಳು ಈಗಲೂ ಬಾಯ್ತೆರೆದುಕೊಂಡಿವೆ.

ಪೈಪ್‌ ಮೇಲೆ ಹರಡಿರುವ ಮಣ್ಣು ಅಲ್ಲಲ್ಲಿ ಸಡಿಲಗೊಂಡು ಮಳೆಗೆ ರಾಡಿಯಾಗಿ ವಾಹನಗಳ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಕಿರಿದಾದ ಈ ಗ್ರಾಮೀಣ ರಸ್ತೆಯಲ್ಲಿ ಎದುರಿನಿಂದ ಬಂದ ವಾಹನಕ್ಕೆ ಸೈಡ್‌ ಕೊಡುವಾಗ ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಫಜೀತಿ ಆಗುತ್ತಿದೆ. ಇದು ಮಲೆನಾಡಿನ ಹಲವಾರು ಗ್ರಾಮಗಳ ಸಂಪರ್ಕದ ಪ್ರಮುಖ ಮಾರ್ಗವಾಗಿದೆ.

ADVERTISEMENT

ಕೆಲವು ದಿನಗಳಿಂದ ಈ ರಸ್ತೆಯಲ್ಲಿ ಬಸ್‌, ಕಾರು, ಟ್ರ್ಯಾಕ್ಟರ್‌ಗಳು ಪಲ್ಟಿಯಾಗಿವೆ. ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಅಡಿಕೆ ಸಸಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಮಣ್ಣಿನಲ್ಲಿ ಸಿಕ್ಕಿಕೊಂಡಿತ್ತು. ಜೆಸಿಬಿ ಬಳಸಿ ಟ್ರ್ಯಾಕ್ಟರ್‌ ಹೊರಗೆ ತೆಗೆಯಲಾಗಿದೆ.

ಪೈಪ್‌ಲೈನ್‌ ಅಳವಡಿಕೆಗಾಗಿ ಮಣ್ಣು ಅಗೆದ ಭಾಗದ ಕೃಷಿ ಜಮೀನುಗಳಿಗೆ ಯಾವುದೇ ವಾಹನ ಹೋಗದ ಸ್ಥಿತಿ ಇದೆ. ಹೀಗಾಗಿ ಈ ಭಾಗದ ನೂರಾರು ರೈತರಿಗೆ ತೊಂದರೆಯಾಗಿದೆ. ಬಿತ್ತನೆ ಸೇರಿದಂತೆ ಕೃಷಿ ಕೆಲಸಗಳನ್ನು ಕೈಗೊಳ್ಳದ ಪರಿಸ್ಥಿತಿ ಇದೆ ಎಂದು ಈ ಭಾಗದ ರೈತ ಶಿವಪ್ಪ ಕೌಲಾಪುರಿ ಹೇಳಿದ್ದಾರೆ.

’ನಾಲ್ಕು ಲಕ್ಷ ಅಡಿಕೆ ಸಸಿಗಳನ್ನು ಸಿದ್ಧಗೊಳಿಸಿ ಮಾರಾಟಕ್ಕೆ ಸಜ್ಜಾಗಿದ್ದೇವೆ. ಆದರೆ, ಇತ್ತ ವಾಹನಗಳು ಬರುತ್ತಿಲ್ಲ. ಇದು ಅಡಿಕೆ ಸಸಿಗಳು ಮಾರಾಟವಾಗುವ ಸೂಕ್ತ ಸಮಯ. ರಸ್ತೆಯ ಅವಾಂತರ ಗಮನಿಸಿ ಸಸಿ ಕೊಳ್ಳುವ ರೈತರು ಇತ್ತ ಬರುತ್ತಿಲ್ಲ’ ಎಂದು ಇಲ್ಲಿನ ರೈತ ಮುತ್ತಣ್ಣ ಪೂಜಾರ ಅಸಹಾಯಕತೆ ತೋಡಿಕೊಂಡಿದ್ದಾರೆ.

’ಮುತ್ತಣ್ಣನ ತೋಟದಲ್ಲಿ ಉತ್ತಮ ತಳಿಯ ಅಡಿಕೆ ಸಸಿ ಸಿಗುತ್ತದೆ ಎಂದು ಇಲ್ಲಿಗೆ ಬಂದು 700 ಸಸಿ ಹೇರಿಕೊಂಡು ಹೋಗುವಾಗ ನಮ್ಮ ಟ್ರ್ಯಾಕ್ಟರ್‌ ಮಣ್ಣಿನಲ್ಲಿ ಸಿಲುಕೊಂಡಿತು. ಸಸಿಗಳನ್ನು ಬೇರೆ ವಾಹನಕ್ಕೆ ಹೇರಿಕೊಂಡು ಬರುವಷ್ಟರಲ್ಲಿ ಸುಸ್ತಾಗಿ ಹೋಯಿತು’ ಎಂದು ಹಾವೇರಿ ತಾಲ್ಲೂಕು ರಾಮಾಪೂರ ಗ್ರಾಮದ ರೈತ ಪುಟ್ಟಪ್ಪ ಮಲಕಣ್ಣನವರ ಹೇಳಿದರು.

’ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಜವಾಬ್ದಾರಿಯಲ್ಲಿ ₹38 ಕೋಟಿ ವೆಚ್ಚದಲ್ಲಿ ಹಾನಗಲ್ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. 18 ಕಿ.ಮೀ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಭಾಗವಾಗಿ ಸದ್ಯ 5 ಕಿ.ಮೀ ತನಕ ಪೈಪ್‌ ಹಾಕಲಾಗಿದೆ. ಮಂತಗಿ ರಸ್ತೆಯಲ್ಲಿನ ಸಂಚಾರದ ದುರವಸ್ಥೆಯ ಬಗ್ಗೆ ದೂರುಗಳು ಬಂದಿವೆ. ಮಳೆ ಬಿಡುವು ನೀಡುತ್ತಿದ್ದಂತೆ ತಗ್ಗು, ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ ತಿಳಿಸಿದ್ದಾರೆ.

ಪೈಪ್‌ಲೈನ್‌ ಅಳವಡಿಕೆಗಾಗಿ ಮಣ್ಣು ಅಗೆದ ಭಾಗದ ಕೃಷಿ ಜಮೀನುಗಳಿಗೆ ಯಾವುದೇ ವಾಹನ ಹೋಗದ ಸ್ಥಿತಿ ಇದೆ.
–ಶಿವಪ್ಪ, ಕೌಲಾಪುರಿರೈತ
ರಸ್ತೆಗೆ ಹೊಂದಿಕೊಂಡ ಮಣ್ಣು ಅಗೆದ ಕಾರಣ ಅಪಘಾತಗಳು ಸಂಭವಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.