ADVERTISEMENT

ಒಂದೇ ಮತ: ನಾವೂ ಬರ್‍ತೀವೀ, ನೀವೂ ಬನ್ನಿ

ಮತದಾನಕ್ಕೆ ಮನವಿ ಮಾಡಿದ ಹೊಸ, ಶತಾಯುಷಿ, ಹಿರಿಯ, ಗಾಯಕ, ಸಾಮಾಜಿಕ ಕಾರ್ಯಕರ್ತೆಯರು

ಹರ್ಷವರ್ಧನ ಪಿ.ಆರ್.
Published 22 ಏಪ್ರಿಲ್ 2019, 20:00 IST
Last Updated 22 ಏಪ್ರಿಲ್ 2019, 20:00 IST
ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ
ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ   

ಹಾವೇರಿ: ನಮ್ಮೆಲ್ಲರಿಗೂ ದೇಶ ಒಂದೇ, ‘ಮತ’ ಒಂದೇ... ನಾವೂ ಬರ್‍ತೀವೀ, ನೀವೂ ತಪ್ಪದೇ ಬನ್ನಿ... ಎಂದು ಹೊಸ ಮತದಾರರಿಂದ ಹಿಡಿದು ಶತಾಯುಷಿಗಳ ತನಕ ಮನವಿ ಮಾಡಿದ್ದಾರೆ.ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಸಲುವಾಗಿ ಹಕ್ಕು ಚಲಾಯಿಸಿ ಎಂದು ಒತ್ತಾಯಿಸಿದ್ದಾರೆ.

‘ನಾನು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ನೀವೂ ಬಂದು ಮತ ಚಲಾಯಿಸಿ’ ಎಂದು ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯಾದ ಗಾಯಕ ಹನುಮಂತ ಲಮಾಣಿ ಮನವಿ ಮಾಡಿದ್ದಾರೆ.

‘ನಾನು, ಪ್ರತಿ ಬಾರಿ ಮತದಾನ ಮಾಡುತ್ತಿದ್ದೇನೆ. ಈ ಬಾರಿ ಚುನಾವಣಾ ಆಯೋಗವು ಅಂಗವಿಕಲರಿಗಾಗಿ ವಿಶೇಷ ಸವಲತ್ತು ಕಲ್ಪಿಸಿದೆ. ಎಲ್ಲರೂ ಬಂದು ಮತದಾನ ಮಾಡಬೇಕು’ ಎಂದು ಅಂಗವಿಕಲರ ರಾಯಭಾರಿ ಹಸೀನಾ ಹೆಡಿಯಾಲ ಮನವಿ ಮಾಡಿದ್ದಾರೆ.

ADVERTISEMENT

ಶತಾಯುಷಿ ಮತ:‘ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಅವರ ಪತ್ನಿ ಮೈಲಾರ ಸಿದ್ದಮ್ಮ ಅವರಿಗೆ ನಾನು ಮೊದಲ ಬಾರಿಗೆ ಮತ ಹಾಕಿದ್ದೆನು. ಅದೇ ಉತ್ಸಾಹದಲ್ಲಿ ಏ.23ಕ್ಕೂ ಬರುತ್ತೇನೆ. ನೀವೂ ಬನ್ನಿ’ ಎಂದು 1957ರಲ್ಲಿ ನಡೆದ ಹಾವೇರಿ ವಿಧಾನಸಭಾ ಕ್ಷೇತ್ರದ ಚೊಚ್ಚಲ ಚುನಾವಣೆಯಲ್ಲಿ ಮತ ಚಲಾಯಿಸಿದ್ದ ಶತಾಯುಷಿ, ನಿವೃತ್ತ ಮುಖ್ಯೋಪಾಧ್ಯಾಯ ಎಂ.ಬಿ. ಹಿರೇಮಠ ಕರೆ ನೀಡಿದ್ದಾರೆ.

‘1960ರ ದಶಕದ ಆಸುಪಾಸಿನಲ್ಲಿ ಪ್ರಚಾರಕ್ಕೆ ಬರುತ್ತಿದ್ದ ಅಭ್ಯರ್ಥಿಗಳಿಗೆ ನಾವೇ ನೀರು ಮತ್ತು ಬೆಲ್ಲ ನೀಡುತ್ತಿದ್ದೆವು. ಸ್ವಯಂ ಪ್ರೇರಣೆಯಿಂದ ಬಂದು, ದೇಶ, ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಮತ ಚಲಾಯಿಸುತ್ತಿದ್ದೆವು. ಇಂದಿಗೂ ನಾವೇ ಬರುತ್ತೇವೆ. ನೀವೂ ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ’ ಎಂದು ಮನವಿ ಮಾಡಿದ್ದಾರೆ.

‘ಮೊದಲು ಮತದಾನ ಮಾಡಲು 21 ವರ್ಷ ಆಗಬೇಕಿತ್ತು. ಆ ಬಳಿಕ 18 ವರ್ಷ ಮಾಡಿದರು. ಹೀಗಾಗಿ, ಯುವಜನತೆಗೆ ಅವಕಾಶ ಹೆಚ್ಚಿದೆ’ ಎಂದರು.

ಕಲಾವಿದರ ಮತ:ದೇಶದಕ್ಕೆ ಸ್ವಾತಂತ್ರ್ಯ ಅನೇಕ ಮಹಾತ್ಮರ ತ್ಯಾಗ, ಬಲಿದಾನದಿಂದ ಸಿಕ್ಕದೆ. ಆ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದ ಉಳಿವು ಇಂದು ಅವಶ್ಯವಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸೋಣ. ನಾನು 50 ವರ್ಷಗಳಿಂದ ಮತದಾನ ಮಾಡುತ್ತಿದ್ದೇನೆ. ನೀವೂ ಬನ್ನಿ ಎಂದು ಹಿರಿಯ ಕಲಾವಿದರಾದ ಟಿ.ಬಿ. ಸೊಲಬಕ್ಕನವರ ಕರೆ ನೀಡಿದ್ದಾರೆ.

ಮೊದಲ ಮತ:‘ನಾನು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದೇನೆ. ನಿಜಕ್ಕೂ ತುಂಬಾ ತುಂಬಾ ಸಂತೋಷವೆನಿಸುತ್ತಿದೆ. ಕರ್ತವ್ಯಗಳನ್ನು ಪಾಲನೆ ಮಾಡಿದರೆ, ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯ. ನೀವೂ ಬನ್ನಿ’ ಎಂದು ವಿದ್ಯಾನಗರದ ಹೊಸ ಮತದಾರರಾದ ಭೂಮಿಕಾ ಪೇಟಕರ ಮನವಿ ಮಾಡಿದ್ದಾರೆ.

‘ನಾನು ನನ್ನ ಮನೆ ಮತ್ತು ಅಕ್ಕಪಕ್ಕದ ಮತದಾರರನ್ನು ಕರೆದುಕೊಂಡು ಮತಗಟ್ಟೆಗೆ ಹೋಗುತ್ತಿದ್ದೇನೆ. ಇದು ನನ್ನ ಮೊದಲ ಮತದಾನದ ಸಂಭ್ರಮ. ನೀವೂ ಬನ್ನಿ. ಮತದಾನದ ಸಂಭ್ರಮದಲ್ಲಿ ಪಾಲ್ಗೊಳ್ಳೋಣ. ದೇಶದ ಭವಿಷ್ಯ ಬರೆಯೋಣ’ ಎಂದು ವಿನಂತಿಸಿದ್ದಾರೆ.

ವಿದೇಶದಿಂದ ಬಂದು ಮತ:ಮತದಾನಕ್ಕೆ ಮಹತ್ವ ನೀಡುವ ಪ್ರಜ್ಞಾವಂತ ನಾಗರಿಕರ ಪೈಕಿ ವಿದ್ಯಾನಗರದ ದಾಕ್ಷಾಯಿಣಿ ಗಾಣಿಗೇರ ಅವರೂ ಮಾದರಿಯಾಗಿದ್ದಾರೆ. ದುಬೈಯಲ್ಲಿ ತಮ್ಮ ಮಗಳು–ಅಳಿಯನ ಜೊತೆಗಿದ್ದ ಅವರು, ಮತದಾನಕ್ಕೋಸ್ಕರ ಏ.22ರಂದು ಬೆಳಿಗ್ಗೆ ಹಾವೇರಿಗೆ ಬಂದಿದ್ದಾರೆ.

‘ನಾನು ಎಲ್ಲೇ ಇದ್ದರೂ, ಮತದಾನಕ್ಕೆ ಬಂದೇ ಬರುತ್ತೇನೆ’ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅವರಂತೆ ಹಲವರು ತಮ್ಮ ಕರ್ತವ್ಯ ಪಾಲನೆಗಾಗಿ ಬಂದಿದ್ದಾರೆ.

ನಿವೃತ್ತ ಪ್ರಾಧ್ಯಾಪಕರಾದ ಬ್ಯಾಡಗಿಯ ಪ್ರೇಮಾನಂದ ಲಕ್ಕಣ್ಣನವರ, ಶಿಗ್ಗಾವಿಯ ಎಸ್.ವಿ. ದೇಶಪಾಂಡೆ ಮತ್ತಿತರರು ಈಗಾಗಲೇ ಸಜ್ಜಾಗಿದ್ದಾರೆ. ‘ಕಟ್ಟುತ್ತೇವಾ ನಾವು ಕಟ್ಟೇ ಕಟ್ಟುತ್ತೇವಾ...’ ಎಂದು ಹಾಡಿನ ಮೂಲಕ ಕರೆ ನೀಡಿದ್ದ ಸಾಹಿತಿ ಸತೀಶ ಕುಲಕರ್ಣಿ ಕಡ್ಡಾಯ ಮತದಾನ ಮಾಡಿ ಎಂದಿದ್ದಾರೆ. ಹಿರಿಯರ ಉತ್ಸಾಹವು ಕಿರಿಯರಿಗೆ ಸ್ಫೂರ್ತಿ ತುಂಬಬೇಕಾಗಿದೆ. ನೀವೂ ಬನ್ನಿ.

ಪೆಟ್ರೋಲ್: ಒಂದು ರೂಪಾಯಿ ಉಚಿತ:ಮತದಾನ ಮಾಡಿ, ತಮ್ಮ ಕೈ ಬೆರಳಿನಲ್ಲಿ ಶಾಹಿ ತೋರಿಸುವ ಮತದಾರರಿಗೆ ಏ.23ರಂದು ಬೆಳಿಗ್ಗೆ 8ರಿಂದ ಸಂಜೆ 7 ಗಂಟೆ ತನಕ ಪ್ರತಿ ಲೀಟರ್‌ಗೆ ₹1 ರಿಯಾಯಿತಿ ನೀಡುವುದಾಗಿ ನಗರದ ಕಾಗಿನಲೆ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್‌ನ ಡಾ.ಶಿ.ಮೂ.ಶ ಪೇಟ್ರೋಲ್‌ ಬಂಕ್ ಮಾಲೀಕರಾದ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದ್ದಾರೆ.

ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡೋಣ ಎಂಬ ಜಾಗೃತಿಗಾಗಿ ನಾವು ಈ ರಿಯಾಯಿತಿ ಇಟ್ಟಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಅಲ್ಲದೇ, ನಮ್ಮ ರಿಯಾಯಿತಿಯನ್ನೂ ಪಡೆಯಿರಿ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.