ADVERTISEMENT

ಹಾವೇರಿ | ಐವರು ಬಾಲ ಗರ್ಭಿಣಿಯರ ಗರ್ಭಪಾತ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ * 13 ಬಾಲ ಗರ್ಭಿಣಿಯರು ಪತ್ತೆ; 6 ಬಾಲಕಿಯರದ್ದು ಹೆರಿಗೆ

ಸಂತೋಷ ಜಿಗಳಿಕೊಪ್ಪ
Published 12 ಆಗಸ್ಟ್ 2024, 5:27 IST
Last Updated 12 ಆಗಸ್ಟ್ 2024, 5:27 IST
<div class="paragraphs"><p> ಗರ್ಭಪಾತ ಪ್ರಕರಣ ( ಸಾಂಕೇತಿಕ ಚಿತ್ರ)</p></div>

ಗರ್ಭಪಾತ ಪ್ರಕರಣ ( ಸಾಂಕೇತಿಕ ಚಿತ್ರ)

   

ಹಾವೇರಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ತೆರೆಮರೆಯಲ್ಲಿ ಹೆಚ್ಚಾಗುತ್ತಿದ್ದು, 18 ವರ್ಷ ತುಂಬುವ ಮುನ್ನವೇ ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಇಂಥ ಬಾಲಕಿಯರು ನಾನಾ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಜನಿಸುವ ಮಕ್ಕಳು ಸಹ ತೀವ್ರ ಆರೋಗ್ಯ ತೊಂದರೆಯಿಂದ ಬಳಲುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ಬ್ಯಾಡಗಿ, ಹಿರೇಕೆರೂರು, ಹಾನಗಲ್, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಈ ಬಗ್ಗೆ ಕೆಲ ಪ್ರಕರಣಗಳು ಮಾತ್ರ ವರದಿಯಾಗುತ್ತಿದ್ದು, ಉಳಿದ ಪ್ರಕರಣಗಳನ್ನು ಸಂಬಂಧಿಕರೇ ಮುಚ್ಚಿ ಹಾಕುತ್ತಿದ್ದಾರೆ.

ADVERTISEMENT

18 ವರ್ಷ ತುಂಬುವ ಮುನ್ನವೇ ಹಲವು ಬಾಲಕಿಯರನ್ನು ಸಂಬಂಧಿಕರು ಹಾಗೂ ಪರಿಚಯಸ್ಥ ಹುಡುಗನ ಜೊತೆಯಲ್ಲಿ ಮದುವೆ ಮಾಡಲಾಗುತ್ತಿದೆ. ಪಾಲಕರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿಯೇ ಇಂಥ ವಿವಾಹಗಳು ನಡೆಯುತ್ತಿವೆ.

ಬಾಲ್ಯ ವಿವಾಹವಾದ ಬಾಲಕಿ, ಕೆಲ ತಿಂಗಳಿನಲ್ಲಿಯೇ ಗರ್ಭ ಧರಿಸುತ್ತಿದ್ದಾಳೆ. ಆರೋಗ್ಯ ಪರೀಕ್ಷೆಗೆಂದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ಹೋದಾಗಲೇ, ಬಾಲಕಿಯದ್ದು ಬಾಲ್ಯ ವಿವಾಹವೆಂಬುದು ಗೊತ್ತಾಗುತ್ತಿದೆ. ಇಂಥ ಪ್ರಕರಣಗಳನ್ನು ವೈದ್ಯರು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾಧಿಕಾರಿಯವರ ಗಮನಕ್ಕೆ ತರುತ್ತಿದ್ದಾರೆ. ಇಷ್ಟಾದರೂ ಕೆಲ ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಯಾವುದೇ ದೂರು ಸಹ ಸಲ್ಲಿಕೆಯಾಗುತ್ತಿಲ್ಲ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 13 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಎಲ್ಲರದ್ದೂ ಬಾಲ್ಯ ವಿವಾಹ ಎಂಬುದು ತನಿಖೆಯಿಂದ ಗೊತ್ತಾಗಿದೆ. ಇಂಥ ಕೆಲ ಪ್ರಕರಣಗಳಲ್ಲಿ ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯ್ದೆ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಪೋಷಕರು ಹಾಗೂ ಸಂಬಂಧಿಕರನ್ನು ಆರೋಪಿಯನ್ನಾಗಿ ಮಾಡಲಾಗಿದೆ.

ಹೈಕೋರ್ಟ್‌ ಆದೇಶದಂತೆ ಗರ್ಭಪಾತ: ‘ಜಿಲ್ಲೆಯಲ್ಲಿ ವರದಿಯಾಗಿರುವ 13 ಬಾಲ ಗರ್ಭಿಣಿಯರ ಪೈಕಿ ಐವರು ಬಾಲಕಿಯರ ಗರ್ಭಪಾತವಾಗಿದೆ. 6 ಬಾಲಕಿಯರದ್ದು ಹೆರಿಗೆಯಾಗಿದೆ. ಇಬ್ಬರು ಬಾಲಕಿಯರ ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ‘ಪ್ರಜಾವಾಣಿ’ಗೆ ತಿಳಿಸಿದರು.

‘20 ತಿಂಗಳಿಗಿಂತ ಕಡಿಮೆ ಅವಧಿಯ ಗರ್ಭಿಣಿಯಾಗಿದ್ದರೆ, ಕೆಲ ಷರತ್ತುಗಳ ಅನ್ವಯ ಸ್ವಯಂ ತೀರ್ಮಾನದಿಂದ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ. 20 ತಿಂಗಳಿನಿಂದ 24 ತಿಂಗಳು ಆಗಿದ್ದರೆ, ಜಿಲ್ಲಾ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ. 24 ತಿಂಗಳಿಗಿಂತ ಹೆಚ್ಚಿನ ಅವಧಿಯಾಗಿದ್ದರೆ, ಹೈಕೋರ್ಟ್ ಆದೇಶ ಕಡ್ಡಾಯವಾಗಿದೆ’ ಎಂದು ಹೇಳಿದರು.

‘ಐದು ಗರ್ಭಪಾತ ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು ಸ್ವಯಂ ಹಾಗೂ ಸಮಿತಿ ತೀರ್ಮಾನದ ಮೂಲಕ ಆಗಿವೆ. ಒಂದು ಪ್ರಕರಣದಲ್ಲಿ ಮಾತ್ರ ಹೈಕೋರ್ಟ್ ಆದೇಶದನ್ವಯ ಗರ್ಭಪಾತ ಮಾಡಲಾಗಿದೆ’ ಎಂದು ತಿಳಿಸಿದರು.

ಜಾಗೃತಿ ಅಗತ್ಯ: ‘ಪ್ರತಿಯೊಬ್ಬ ಮಕ್ಕಳ ಹಕ್ಕು ರಕ್ಷಣೆಗಾಗಿ ಸರ್ಕಾರ ನಾನಾ ಕಾಯ್ದೆಗಳನ್ನು ರೂಪಿಸಿದೆ. ಸವಲತ್ತುಗಳನ್ನು ಒದಗಿಸುತ್ತಿದೆ. ಆದರೆ, ಕೆಲ ಪೋಷಕರು ಹಾಗೂ ಸಂಬಂಧಿಕರು ಸಣ್ಣ ವಯಸ್ಸಿನಲ್ಲಿ ಬಾಲಕಿಯರ ಮದುವೆ ಮಾಡುತ್ತಿದ್ದಾರೆ. ಇದರಿಂದ ಸಮಸ್ಯೆಗಳು ಉದ್ಭವಿಸಿ, ಮಕ್ಕಳ ಭವಿಷ್ಯವೇ ಹಾಳಾಗುತ್ತಿದೆ. ಬಾಲ್ಯ ವಿವಾಹದ ಬಗ್ಗೆ ಎಲ್ಲರೂ ಜಾಗೃತರಾಗಬೇಕಿದೆ’ ಎಂದು ಅನ್ನಪೂರ್ಣ ಸಂಗಳದ ಹೇಳಿದರು.

‘ಬಾಲ್ಯ ವಿವಾಹ ಕಂಡರೆ ಸಮೀಪದ ಠಾಣೆ ಅಥವಾ ಮಕ್ಕಳ ಸಹಾಯವಾಣಿ–1098 ಸಂಖ್ಯೆಗೆ ಮಾಹಿತಿ ನೀಡಬಹುದು. ಹೆಸರು ಗೋಪ್ಯವಾಗಿರಿಸಲಾಗುವುದು’ ಎಂದರು.

ಕಮರುತ್ತಿರುವ ಬಾಲಕಿಯರ ಶಿಕ್ಷಣದ ಕನಸು ಕೆಲವರ ಮೇಲೆ ಪೋಕ್ಸೊ ಪ್ರಕರಣ ಬಾಲ್ಯ ವಿವಾಹ ಕಂಡರೆ ಕರೆ ಮಾಡಿ– 1098

ತಾಲ್ಲೂಕು; ಬಾಲ ಗರ್ಭಿಣಿಯರ ಸಂಖ್ಯೆ ಹಾವೇರಿ;2 ಬ್ಯಾಡಗಿ;1 ಹಿರೇಕೆರೂರು;4 ಹಾನಗಲ್;0 ರಾಣೆಬೆನ್ನೂರು;4 ರಟ್ಟೀಹಳ್ಳಿ;0 ಸವಣೂರು;0 ಶಿಗ್ಗಾವಿ;1 (ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಮಾಹಿತಿ. ಒಂದು ಪ್ರಕರಣ ಎರಡು ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆದಿದ್ದು ವಿಚಾರಣೆ ನಡೆಯುತ್ತಿದೆ. ಪಟ್ಟಿಯಲ್ಲಿ ಸೇರಿಸಿಲ್ಲ)

‘ಆರ್‌ಸಿಎಚ್‌ ಜಾಲತಾಣದಲ್ಲಿ 176 ಪ್ರಕರಣ’ ‘ಗರ್ಭಿಣಿಯರ ಮಾಹಿತಿಯನ್ನು ಆರ್‌ಸಿಎಚ್ ಜಾಲತಾಣದಲ್ಲಿ ಕಾಲ ಕಾಲಕ್ಕೆ ಅಪ್‌ಲೋಡ್ ಮಾಡಲಾಗುತ್ತಿದೆ. ಈ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಏಪ್ರಿಲ್‌ ಮೇ ಹಾಗೂ ಜೂನ್‌ ತಿಂಗಳಿನಲ್ಲಿ 176 ಗರ್ಭಿಣಿ ಬಾಲಕಿಯರು ಪತ್ತೆಯಾಗಿದ್ದಾರೆ’ ಎಂದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ ಹೇಳಿದರು. ಬಾಲ ಗರ್ಭಿಣಿಯರ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಅವರು ‘176 ಪ್ರಕರಣಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲಾಗಿದೆ. ಇದರಲ್ಲಿ ಕೆಲವರ ವಯಸ್ಸು 18 ವರ್ಷ ದಾಟಿದೆ. ಹೀಗಾಗಿ ಸದ್ಯಕ್ಕೆ ನಿಖರ ಮಾಹಿತಿ ಲಭ್ಯವಿಲ್ಲ. 18 ವರ್ಷಕ್ಕಿಂತ ಕಡಿಮೆ ಇರುವವರು ಯಾರು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.