ADVERTISEMENT

ವಿದ್ಯುತ್ ಖಾಸಗೀಕರಣಕ್ಕೆ ವಿರೋಧ

ರೈತ ಸಂಘದಿಂದ ಪ್ರತಿಭಟನೆ: ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:51 IST
Last Updated 7 ಆಗಸ್ಟ್ 2021, 2:51 IST
ಕೃಷಿಗೆ ಮಾರಕವಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘದ ಪದಾಧಿಕಾರಿಗಳು ರಾಣೆಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು
ಕೃಷಿಗೆ ಮಾರಕವಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘದ ಪದಾಧಿಕಾರಿಗಳು ರಾಣೆಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು   

ರಾಣೆಬೆನ್ನೂರು: ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಪ್ರಸ್ತಾವ ಕೈಬಿಡಬೇಕು. ಕೃಷಿಗೆ ಮಾರಕವಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಕಾಯ್ದೆ ಕೈಬಿಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ರಾಣೆಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಜ್ಯ ಘಟಕದ ಸಂಚಾಲಕ ರವೀಂದ್ರಗೌಡ ಎಫ್‌. ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿವೆ. ಕೊರೊನಾದ ಪರಿಣಾಮ ಎರಡು ವರ್ಷಗಳಿಂದ ನಷ್ಟ ಅನುಭವಿಸಿದ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ತೀವ್ರ ತೊಂದರೆಗೀಡಾಗಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎಂದರು.

ದೆಹಲಿ ಗಡಿ ಭಾಗದಲ್ಲಿ ಮಳೆ, ಚಳಿ ಗಾಳಿ ಲೆಕ್ಕಿಸದೆ ಸತತ 8 ತಿಂಗಳಿಂದ ಕೃಷಿ ಕಾನೂನು ಗಳನ್ನ ವಿರೋಧಿಸಿ ರೈತರು ಸತ್ಯಾಗ್ರಹ ನೆಡಸುತಿದ್ದಾರೆ. ಅನೇಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕಾಟಾಚಾರಕ್ಕೆ ರೈತರ ಸಭೆ ನಡೆಸಿದೆ ಎಂದು ದೂರಿದರು.

ADVERTISEMENT

ರೈತರಿಗೆ ಮಾರಕವಾಗಿರುವ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ರೈತರ ಒತ್ತಾಯವಾಗಿದೆ. ವಿದ್ಯುತ್ ಖಾಸಗೀಕರಣದಿಂದ ದೊಡ್ಡ ವಿಪತ್ತು ಎದುರಾಗುವ ಲಕ್ಷಣಗಳಿವೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದರಿಂದ ಪಂಪ್‌ಸೆಟ್ ಬಳಕೆದಾರನ ಒಕ್ಕಲೆಬ್ಬಿಸುವ ಹುನ್ನಾರ ನೆಡದಿದೆ.‌ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಕೆಯಿಂದ ಬೇಸತ್ತ ಜನರು ಕೇಂದ್ರ, ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಕಾನೂನಾತ್ಮಕ ಬದಲಾವಣೆ ತರಬೇಕಾಗಿದೆ. ಹಾವೇರಿ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ಇದ್ದರೂ ಸರ್ಕಾರ ಜಾಣ ಕುರುಡನಂತೆ ವರ್ತಿಸುತ್ತಿದೆ. ಕಳೆದ 5 ವರ್ಷದಿಂದ ಸಮಪರ್ಕವಾಗಿ ಬೆಳೆ ವಿಮೆ, ಬೆಳೆ ಪರಿಹಾರ ವಿತರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಪಾಟೀಲ ಆರೋಪಿಸಿದರು. ಹರಿಹರಗೌಡ ಪಾಟೀಲ, ಬಸವರಾಜ ಕೊಂಗಿ, ಸುರೇಶಪ್ಪ ಗರಡೀಮನಿ, ವೀರೇಶ್, ಎಸ್‌.ಡಿ. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.