
‘ಪ್ರಜಾವಾಣಿ’ ಫೋನ್–ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಶಿವರಾಜ ವಿ. ಉಪ್ಪಿನ ಹಾಗೂ ಡಾ. ಪ್ರಮೋದ ಗೌಡ ಬಿ. ಪಾಟೀಲ
ಹಾವೇರಿ: ‘ಮಧುಮೇಹ, ಥೈರಾಯಿಡ್, ಹೃದಯ ಸಂಬಂಧಿ ಕಾಯಿಲೆ ಸೇರಿ ಯಾವುದೇ ಆರೋಗ್ಯ ಸಮಸ್ಯೆಯಿದ್ದರೂ ಹಲವು ತಿಂಗಳ ಮುನ್ನವೇ ಪತ್ತೆ ಮಾಡಬಹುದು. ಸಮಸ್ಯೆ ಏನು ಎಂಬುದನ್ನು ತಿಳಿದು ಚಿಕಿತ್ಸೆ ಪಡೆದರೆ ರೋಗವು ಬಹುಬೇಗನೇ ಗುಣವಾಗುತ್ತದೆ’ ಎಂದು ಡಾ. ಶಿವರಾಜ ವಿ. ಉಪ್ಪಿನ ಹಾಗೂ ಡಾ. ಪ್ರಮೋದ ಗೌಡ ಬಿ. ಪಾಟೀಲ ಹೇಳಿದರು.
‘ಪ್ರಜಾವಾಣಿ’ ವತಿಯಿಂದ ಶನಿವಾರ ಆಯೋಜಿಸಿದ್ದ ‘ಫೋನ್–ಇನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೀರಾಪೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೂ ಆಗಿರುವ ತುರ್ತು ಚಿಕಿತ್ಸಾ ವೈದ್ಯ ಡಾ.ಶಿವರಾಜ ವಿ. ಉಪ್ಪಿನ (ಎಂಬಿಬಿಎಸ್, ಎಂಇಎಂ (ಜಿಡಬ್ಲ್ಯುಯು, ಯುಎಸ್‌ಎ) ಹಾಗೂ ಡಾ.ಪ್ರಮೋದ ಗೌಡ ಬಿ. ಪಾಟೀಲ (ಎಂಬಿಬಿಎಸ್, ಎಂಡಿ–ಮೈಸೂರು ಎಂಎಂಸಿ, ಡಿಎನ್‌ಬಿ–ಜನರಲ್ ಮೆಡಿಷನ್) ಅವರು, ಆರೋಗ್ಯ ಸಮಸ್ಯೆಗಳ ಬಗ್ಗೆ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
‘ಬದಲಾದ ಜೀವನ ಕ್ರಮದಿಂದ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಜನರಲ್ಲಿ ಆರೋಗ್ಯದ ಅರಿವು ಕಡಿಮೆಯಿದೆ. ಯಾವುದೇ ಕಾಯಿಲೆ ಏಕಾಏಕಿ ಬರುವುದಿಲ್ಲ. ಹಲವು ತಿಂಗಳ ಮುಂಚೆಯೇ ಲಕ್ಷಣಗಳು ಗೋಚರಿಸುತ್ತವೆ. ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ಏನೆಲ್ಲ ಬದಲಾವಣೆ ಆಗಿದೆ ? ಎಂಬುದು ಪತ್ತೆಯಾದರೆ, ತಜ್ಞವೈದ್ಯರಿಂದ ಚಿಕಿತ್ಸೆ ಪಡೆದು ಕಾಯಿಲೆಯಿಂದ ಮುಕ್ತರಾಗಬಹುದು’ ಎಂದು ಹೇಳಿದರು.
‘ಹೃದಯಾಘಾತವನ್ನು ಆರು ತಿಂಗಳ ಮುಂಚೆಯೇ ಕಂಡುಹಿಡಿಯಲು ಟಿಎಂಟಿ ಪರೀಕ್ಷೆಯಿದೆ. ಈ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ, ಮುಂದಾಗುವ ಅನಾಹುತ ತಪ್ಪಿಸಬಹುದು. ಮಧುಮೇಹ ಬರುವ ದಿನವನ್ನು, ಹಲವು ತಿಂಗಳ ಮುಂಚೆಯೇ ಪತ್ತೆ ಮಾಡಬಹುದು. ಅದಕ್ಕೂ ಚಿಕಿತ್ಸೆ ಪಡೆಯಬಹುದು. ದೇಹದಲ್ಲಿ ಯಾವುದೇ ಲಕ್ಷಣ ಕಂಡುಬಂದರೂ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು’ ಎಂದರು.
‘ಅಪಘಾತ, ಹೃದಯಾಘಾತ, ವಿಷಸೇವನೆ, ಹಾವು ಕಡಿತ... ಸೇರಿದಂತೆ ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗ ತಡಮಾಡದೇ ತ್ವರಿತವಾಗಿ ಆಸ್ಪತ್ರೆಗೆ ಹೋಗಬೇಕು. ಎಷ್ಟು ಬೇಗ ಆಸ್ಪತ್ರೆಗೆ ಹೋಗುತ್ತೆವೆಯೋ ಅಷ್ಟು ಬೇಗ ಚಿಕಿತ್ಸೆ ಸಿಗುತ್ತದೆ. ಪ್ರಾಣವೂ ಉಳಿಯುತ್ತದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗದಿದ್ದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.
‘ಇಂದು ಹಲವರು, ಗಳಿಕೆಯ ಹಿಂದೆ ಬಿದ್ದಿದ್ದಾರೆ. ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದುವೇ ಸರ್ವರೋಗಕ್ಕೆ ಕಾರಣವಾಗಿದೆ. ಮಿತವಾದ ಆಹಾರ, ವ್ಯಾಯಾಮ, ಒತ್ತಡ ರಹಿತ ಕೆಲಸ ಮಾಡಿದರೆ ಎಲ್ಲರ ಬದುಕು ಆರೋಗ್ಯಯುತವಾಗಿರುತ್ತದೆ’ ಎಂದು ಸಲಹೆ ನೀಡಿದರು.
ಶಂಕರ, ಹಿರೇಕೆರೂರು; ನನಗೆ ಮಧುಮೇಹ ಕಾಯಿಲೆಯಿದೆ. ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇನೆ. ಎರಡು ಬಾರಿ ಮಾತ್ರೆ ತೆಗೆದುಕೊಳ್ಳುತ್ತೇನೆ. ಆದರೂ ತಲೆ ಸುತ್ತು ಇದೆ. ಸುಸ್ತು ಹೆಚ್ಚಾಗಿದೆ.
ಮಧುಮೇಹ ಇದ್ದವರು ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮಿತವಾದ ಆಹಾರ ಸೇವಿಸಬೇಕು. ಮೂರು ಬಾರಿ ಹೊಟ್ಟೆ ತುಂಬುವಷ್ಟು ತಿನ್ನುವ ಬದಲು, ಆರು ಬಾರಿ ಸ್ವಲ್ಪ ಸ್ವಲ್ಪ ತಿನ್ನಬೇಕು. ಉಪವಾಸ ಮಾಡಬಾರದು. ಸಕ್ಕರೆ ಅಂಶ ಹೆಚ್ಚಿರುವ ಬಾಳೆಹಣ್ಣು, ಕಲ್ಲಂಗಡಿ ತಿನ್ನಬಾರದು. ತಿಂಗಳಿಗೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿ, ವೈದ್ಯರ ಸಲಹೆ ಪಾಲಿಸಬೇಕು
ಲತಾ, ಹಾವೇರಿ: ಮಧುಮೇಹ ಕಾಯಿಲೆಯಿದೆ. ಆಗಾಗ ತಲೆಸುತ್ತು ಬರುತ್ತದೆ. ಕೆಲಸ ಮಾಡುವಾಗ ಸುಸ್ತಾಗುತ್ತದೆ. ಚಿಕಿತ್ಸೆ ಏನು?
ನಿಮ್ಮ ಆಹಾರ ಪದ್ಧತಿ ಹಾಗೂ ಬದುಕಿನ ಕ್ರಮ ಬದಲಾಯಿಸಿಕೊಳ್ಳಿ. ಊಟದಲ್ಲಿ ಉಪ್ಪು ಹೆಚ್ಚು ತಿನ್ನಬೇಡಿ. ಕರಿದ ಪದಾರ್ಥ ತ್ಯಜಿಸಿ. ಮಾತ್ರೆ ತೆಗೆದುಕೊಂಡರೂ ತಲೆಸುತ್ತು ಇದೆ ಎಂದರೆ, ಅದಕ್ಕೆ ಮಧುಮೇಹವೊಂದೇ ಕಾರಣವಿರುವುದಿಲ್ಲ. ಮಿದುಳು ಸಮಸ್ಯೆ ಇರಬಹುದು. ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿ
ಸುನೀತಾ, ಬಂಕಾಪುರ: ಗಂಟಲಿನಲ್ಲಿ ನೋವಿದೆ. ಆಗಾಗ ಬೆವರು ಬರುತ್ತದೆ. ಇದು ಥೈರಾಯ್ಡ್ ಸಮಸ್ಯೆಯೇ?
ಕೇವಲ ಗಂಟಲು ನೋವಿದೆ ಎಂಬ ಕಾರಣಕ್ಕೆ ಥೈರಾಯ್ಡ್ ಸಮಸ್ಯೆಯೆಂದು ಹೇಳಲಾಗದು. ಬೇಗ ಚಳಿ ಆಗುವುದು, ಬೇಗ ಬೆವರುವುದು, ಸುಸ್ತು ಸೇರಿದಂತೆ ಹಲವು ಲಕ್ಷಣಗಳಿದ್ದರೆ ಒಮ್ಮೆ ಥೈರಾಯ್ಡ್ ಪರೀಕ್ಷೆ ಮಾಡಿಸಿ. ವರದಿ ನೋಡಿ ಮುಂದುವರಿಯಿರಿ
ಮಲ್ಲೇಶಪ್ಪ, ಶಿಗ್ಗಾವಿ: ಎದೆ ಭಾಗದಲ್ಲಿ ಆಗಾಗ ಚುಚ್ಚಿದ ರೀತಿಯಾಗುತ್ತದೆ. ಇದಕ್ಕೆ ಕಾರಣವೇನು? ಪರಿಹಾವೇನು?
ಎದೆ ಚುಚ್ಚುತ್ತಿದೆ ಎಂದರೆ, ಅದಕ್ಕೆ ಹಲವು ಕಾರಣಗಳು ಇರಬಹುದು. ಎದೆ ಭಾಗದಲ್ಲಿರುವ ಹೃದಯದ ಸಮಸ್ಯೆಯೂ ಇರಬಹುದು. ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿ. ಇಸಿಜಿ ಮಾಡಿಸಿ. ನಂತರ, ಟಿಎಂಟಿ ಪರೀಕ್ಷೆ ಮಾಡಿಸಿ. ಈ ಪರೀಕ್ಷೆಗಳಿಂದ, ನಿಮ್ಮ ಹೃದಯ ಎಷ್ಟು ಆರೋಗ್ಯವಾಗಿದೆ? ಏನಾದರೂ ಸಮಸ್ಯೆಯಿದೆಯೇ? ಎಂಬುದು ಗೊತ್ತಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿದ್ದರೂ ತಿಳಿಯುತ್ತದೆ. ಇದು ಹೃದಯಕ್ಕೆ ಸಂಬಂಧಪಟ್ಟ ವಿಷಯ. ಮನೆಯಲ್ಲಿಯೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಬದಲು, ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಸಿದ್ದಪ್ಪ, ಬ್ಯಾಡಗಿ: ಹೃದಯ ಸಂಬಂಧಿ ಕಾಯಿಲೆ ಲಕ್ಷಣಗಳೇನು? ದಿಢೀರ್ ಹೃದಯಾಘಾತವಾದರೆ ಏನು ಮಾಡಬೇಕು?
ಎದೆ ಭಾಗದಲ್ಲಿ ಎರಡ್ಮೂರು ಕೆ.ಜಿ. ಭಾರ ಎನಿಸುವಷ್ಟು ನೋವು. ಬೆವರು, ಸುಸ್ತು, ಎದೆ ಬಿಗಿತ... ಸೇರಿದಂತೆ ಹಲವು ಲಕ್ಷಣಗಳು ಇರಬಹುದು. ಮಧುಮೇಹ ಹಾಗೂ ರಕ್ತದೊತ್ತಡ ಇರುವವರಲ್ಲಿ ಹೃದಯ ಕಾಯಿಲೆ ಪ್ರಮಾಣ ಹೆಚ್ದು. ಯಾವುದೇ ಲಕ್ಷಣ ಕಂಡುಬಂದರೆ, ಕೂಡಲೇ ಆಸ್ಪತ್ರೆಗೆ ಹೋಗುವುದು ಒಳ್ಳೆಯದು. ಹೃದಯಾಘಾತವಾದಾಗ ಜನರ ಪ್ರಾಣ ಉಳಿಸಲು 90 ನಿಮಿಷಗಳ ಒಳಗಾಗಿ ಚಿಕಿತ್ಸೆ ನೀಡಬೇಕು. ಎಷ್ಟು ಬೇಗ ಆಸ್ಪತ್ರೆಗೆ ಹೋಗುತ್ತೆವೆಯೋ ಅಷ್ಟು ಒಳ್ಳೆಯದು. ಎದೆ ನೋವು ಇರುವವರು ಹೆಚ್ಚು ಒತ್ತಡದಲ್ಲಿ ಇರಬಾರದು. ನಡೆದುಕೊಂಡು ಮೆಟ್ಟಿಲು ಇಳಿಯುವುದು ಹತ್ತುವುದು ಮಾಡಬಾರದು. ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯವಾಗಿ ಆಸ್ಪತ್ರೆಗೆ ಬರಬೇಕು. ಆಕಸ್ಮಾತ್ ಧೈರ್ಯ ಕಳೆದುಕೊಂಡರೆ ರಕ್ತ ಸಂಚಲನ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ.
ಜಗದೀಶ, ರಾಣೆಬೆನ್ನೂರು: ನನ್ನ ಸಹೋದರನಿಗೆ ಮಧುಮೇಹವಿದೆ. ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆ ಮಾಡಿಸಬಹುದೆ ?
ಮಧುಮೇಹವು ನಿಯಂತ್ರಣದಲ್ಲಿದ್ದರೆ ಮೂಲವ್ಯಾಧಿ ಶಸ್ತ್ರಚಿಕಿತ್ಸೆ ಮಾಡಿಸಬಹುದು. ಮಧುಮೇಹದಿಂದಾಗಿ ನರಗಳ ಶಕ್ತಿ ಕ್ಷೀಣಿಸುತ್ತದೆ. ತಜ್ಞ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ
(ನಿರ್ವಹಣೆ: ಸಂತೋಷ ಜಿಗಳಿಕೊಪ್ಪ, ಅಮಿತ್ ಪಿ. ಶೆಟ್, ಮಾಲತೇಶ ಇಚ್ಚಂಗಿ)
‘ತುರ್ತು ಚಿಕಿತ್ಸೆಗೆಂದು 16 ಬೆಡ್’
‘ಅಪಘಾತ ವಿಷ ಸೇವನೆ ಹಾವು ಕಡಿತ ಹೃದಯಾಘಾತ... ಸೇರಿದಂತೆ ಎಲ್ಲ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಉದ್ದೇಶದಿಂದ ವೀರಾಪೂರ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 16 ಬೆಡ್‌ಗಳ ತುರ್ತು ಚಿಕಿತ್ಸಾ ವಿಭಾಗವನ್ನು ಆರಂಭಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರೂ ಆಗಿರುವ ತುರ್ತು ಚಿಕಿತ್ಸೆ ವೈದ್ಯ ಡಾ. ಶಿವರಾಜ ಉಪ್ಪಿನ ಹೇಳಿದರು. ‘ತುರ್ತು ಚಿಕಿತ್ಸೆಗೆಂದೇ 16 ಬೆಡ್‌ಗಳ ಪ್ರತ್ಯೇಕ ವಿಭಾಗ ತೆರೆಯುತ್ತಿರುವ ಮೊದಲ ಆಸ್ಪತ್ರೆ ನಮ್ಮದಾಗಿದೆ. ಇದರ ಜೊತೆಯಲ್ಲಿಯೇ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡಲು ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಮನೆ ಕಚೇರಿ ಅಪಘಾತದ ಸ್ಥಳ... ಹೀಗೆ ಯಾವುದೇ ಸ್ಥಳದಲ್ಲಾದರೂ ಆರೋಗ್ಯದ ತುರ್ತು ಪರಿಸ್ಥಿತಿ ಎದುರಾದರೆ ಆಂಬುಲೆನ್ಸ್ ಹೋಗಲಿದೆ. ಸ್ಥಳದಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿ ನಂತರ ರೋಗಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮುಂದುವರಿಸಲಿದ್ದಾರೆ. ಈ ಎರಡೂ ಹೊಸ ಸೇವೆಗಳು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿವೆ’ ಎಂದು ತಿಳಿಸಿದರು.
ಅಪಘಾತ: ಅವೈಜ್ಞಾನಿಕ ಕ್ರಮದಿಂದ ಸಾವು ಹೆಚ್ಚಳ
‘ಇತ್ತೀಚಿನ ದಿನಗಳಲ್ಲಿ ಅಪಘಾತಗಳಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಪಘಾತದ ಸ್ಥಳದಲ್ಲೇ ಮೃತಪಡುವವರು ಕಡಿಮೆ. ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಕರೆದೊಯ್ಯುವಾಗ ಜನರು ಅವೈಜ್ಞಾನಿಕ ಕ್ರಮ ಅನುಸರಿಸುತ್ತಿರುವುದರಿಂದ ಶೇ 90ರಷ್ಟು ಗಾಯಾಳುಗಳು ಸಾಯುತ್ತಿದ್ದಾರೆ’ ಎಂದು ತುರ್ತು ಚಿಕಿತ್ಸೆ ವೈದ್ಯೆ ಡಾ. ಶಿವರಾಜ ಉಪ್ಪಿನ ಹೇಳಿದರು. ‘ಅಪಘಾತದ ಸಂದರ್ಭದಲ್ಲಿ ಗಾಯಾಳುವಿನ ತಲೆ ಕತ್ತು ಹಾಗೂ ಬೆನ್ನುಹುರಿಗೆ ಹೊಡೆತ ಬಿದ್ದಿರುತ್ತದೆ. ಇಂಥ ಗಾಯಾಳುಗಳನ್ನು ಕೈ–ಕಾಲು ಹಿಡಿದು ಅವೈಜ್ಞಾನಿಕವಾಗಿ ಮೇಲಕ್ಕೆ ಎತ್ತಿ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಇದರಿಂದಾಗಿ ತಲೆ ಕತ್ತು ಹಾಗೂ ಬೆನ್ನುಹುರಿಗೆ ಮತ್ತಷ್ಟು ಒತ್ತಡ ಬೀಳುತ್ತದೆ. ಮಾರ್ಗಮಧ್ಯೆ ಅಥವಾ ಆಸ್ಪತ್ರೆಯಲ್ಲಿ ಗಾಯಾಳು ಮೃತಪಡುತ್ತಾರೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವುದು ಹೇಗೆ ? ಎಂಬುದರ ಬಗ್ಗೆ ಜನರಲ್ಲಿ ಅರಿವಿರಬೇಕು. ಅಂದಾಗ ಮಾತ್ರ ಹಲವು ಜನರ ಪ್ರಾಣ ಉಳಿಸಬಹುದು’ ಎಂದು ಅವರು ಸಲಹೆ ನೀಡಿದರು. ‘ಶಾಲೆ–ಕಾಲೇಜು ಸಂಘ–ಸಂಸ್ಥೆಗಳ ಮಟ್ಟದಲ್ಲಿ ವೀರಾಪೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಲಕ ಜನರಿಗೆ ತರಬೇತಿ ನೀಡಲು ಯೋಚಿಸಿದ್ದೇವೆ. ಜನರಲ್ಲಿ ಅರಿವು ಹೆಚ್ಚಾದರೆ ಸಾವುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದರು.
ಎಲ್ಲ ಹಾವುಗಳು ವಿಷಕಾರಿಯಲ್ಲ
‘ಹಾವೇರಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಜನರು ಭಯಪಡುವ ಅಗತ್ಯವಿಲ್ಲ. ಹಾವುಗಳ ಕಡಿತಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ’ ಎಂದು ಡಾ. ಶಿವರಾಜ ಉಪ್ಪಿನ ಹೇಳಿದರು. ‘ಬಹುತೇಕ ಹಾವುಗಳು ವಿಷಕಾರಿಯಲ್ಲ. ಕೆಲ ಹಾವುಗಳಲ್ಲಿ ಮಾತ್ರ ವಿಷವಿರುತ್ತದೆ. ಹಾವು ಕಡಿದ ಕೂಡಲೇ ಭಯದಿಂದಲೇ ಹಲವು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಹೆದರುವ ಅವಶ್ಯತೆ ಇಲ್ಲ. ಹಾವು ಕಡಿದ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಬೇಕು. ಅದನ್ನು ಬಿಟ್ಟು ನಾಟಿ ವೈದ್ಯರ ಬಳಿ ಹೋಗಿ ಸಮಯ ವ್ಯರ್ಥ ಮಾಡಬಾರದು’ ಎಂದರು.
‘₹2000ಕ್ಕೆ 25 ತರಹದ ಪರೀಕ್ಷೆ’
‘ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿ ಪಡೆದು ಶಸ್ತ್ರಚಿಕಿತ್ಸೆಗಳಲ್ಲಿ ನುರಿತ ವೈದ್ಯರಾದ ಡಾ. ಬಸವರಾಜ ಜಿ. ವೀರಾಪೂರ ಹಾಗೂ ಡಾ. ಉಷಾ ಬಿ. ವೀರಾಪೂರ ದಂಪತಿ ಕಟ್ಟಿರುವ ಈ ಆಸ್ಪತ್ರೆ ಬಡವರು ಮಧ್ಯಮವರ್ಗದವರು ಹಾಗೂ ಶ್ರೀಮಂತರು ಎಲ್ಲ ವರ್ಗದವರಿಗೂ ಕೈಗೆಟಕುವ ದರದಲ್ಲಿ ಸೇವೆ ಒದಗಿಸುತ್ತಿದೆ. ಕೇವಲ ₹2000 ದರದಲ್ಲಿ 25 ತರಹದ ಪರೀಕ್ಷೆ ಮಾಡಲು ‘ಮಾಸ್ಟರ್ ಟೆಸ್ಟ್’ ಯೋಜನೆ ರೂಪಿಸಲಾಗಿದೆ’ ಎಂದು ಡಾ. ಶಿವರಾಜ ಉಪ್ಪಿನ ಹೇಳಿದರು. ‘ಇಸಿಜಿ ಟಿಎಂಟಿ ಕಿಡ್ನಿ ಲೀವರ್ ಥೈರಾಯ್ಡ್ ಸೇರಿದಂತೆ ದೇಹದ ಮಹ್ವತ್ವದ ಭಾಗಗಳ ಪರೀಕ್ಷೆ ನಡೆಸಲಾಗುವುದು. ದೇಹದಲ್ಲಿ ಏನಾದರೂ ಬದಲಾವಣೆ ಇದ್ದರೆ ಪರೀಕ್ಷೆಯಿಂದ ಗೊತ್ತಾಗಲಿದೆ. ಇದೇ ಪರೀಕ್ಷೆ ವರದಿ ಆಧರಿಸಿ ಚಿಕಿತ್ಸೆ ಪಡೆಯಲು ಜನರಿಗೆ ಅನುಕೂಲವಾಗಲಿದೆ’ ಎಂದರು.
ಆಸ್ಪತ್ರೆಯ ವಿಳಾಸ
ವೀರಾಪೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಗುತ್ತಲ ರಸ್ತೆ ಹಳೇ ಪಿ.ಬಿ.ರಸ್ತೆ ಕೆ.ಇ.ಬಿ ಸಮುದಾಯ ಭವನ ಎದುರು ಹಾವೇರಿ ಸಂಪರ್ಕ: 9164115801 9920611448 08375–232456
ಜಿಲ್ಲೆಯಾದ್ಯಂತ ಆಸ್ಪತ್ರೆ ಸೇವೆ
* ವೀರಾಪೂರ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್ ಬ್ಯಾಡಗಿ ಮತ್ತು ಹಾವೇರಿ
* ಯುನಿಟಿ ಪಾಲಿ ಕ್ಲಿನಿಕ್ ಮತ್ತು ಸ್ಕ್ಯಾನ್ ಸೆಂಟರ್ ಹಾವೇರಿ
* ಸವಣೂರು ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್
* ವೀರಾಪೂರ ಮಾಳೋದೆ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್ ಹಾನಗಲ್–ಅಕ್ಕಿಆಲೂರು
* ಬಂಕಾಪುರ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಬಂಕಾಪುರ
* ಸಾಯಿ ಹಾಸ್ಪಿಟಲ್ ಗುತ್ತಲ ಮತ್ತು ಹಾವೇರಿ
* ಸಾಯಿ ಹಾಸ್ಪಿಟಲ್ ಹೊಳಲು
* ಸಾಯಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.