ADVERTISEMENT

ಪ್ರಸವಪೂರ್ವ ಲಿಂಗಪತ್ತೆ: ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 13:24 IST
Last Updated 20 ನವೆಂಬರ್ 2020, 13:24 IST
ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ ಪ್ರಸವ ಪೂರ್ವ ಲಿಂಗಪತ್ತೆ ಕುರಿತಂತೆ ಗಂಭೀರವಾಗಿ ಪರಿಗಣಿಸಿ ತೀವ್ರ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಸವ ಪೂರ್ವ ಮತ್ತು ಪ್ರಸವದ ನಂತರ ಭ್ರೂಣ ಲಿಂಗಪತ್ತೆ ಕಾಯ್ದೆ 1994ರ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಾಯಿತ ಖಾಸಗಿ ಆಸ್ಪತ್ರೆಗಳು ಸ್ಕ್ಯಾನಿಂಗ್ ಕುರಿತಂತೆ ನಿಯಮಿತವಾಗಿ ವರದಿ ಸಲ್ಲಿಸಬೇಕು. ವರದಿ ಸಲ್ಲಿಸದ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಿ ಎಂದು ಸೂಚನೆ ನೀಡಿದರು.

ADVERTISEMENT

ಸರ್ಕಾರಿ, ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಅಥವಾ ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣಹತ್ಯೆಗಾಗಿ ಸ್ಕ್ಯಾನಿಂಗ್ ಮಾಡುವ ವೈದ್ಯರಿಗೆ ಪಿಸಿ ಆ್ಯಂಡ್ ಪಿ.ಎನ್.ಡಿ.ಟಿ. ಅಡಿಯಲ್ಲಿ ನೋಂದಣಿ ಪ್ರಮಾಣಪತ್ರ ನೀಡಲಾಗುತ್ತದೆ. ಈ ನೋಂದಣಿ ಪತ್ರ ನವೀಕರಣ ಕಾರ್ಯ ವಿಳಂಬವಾಗುತ್ತಿವೆ ಎಂಬ ದೂರುಗಳಿವೆ. ಸಮರ್ಪಕ ದಾಖಲೆ ಹಾಗೂ ಯಾವುದೇ ದೂರುಗಳು ಇಲ್ಲದಿದ್ದರೆ ತಕ್ಷಣವೇ ನವೀಕರಣ ಮಾಡಿ ವಿಳಂಬ ಮಾಡಬೇಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.

‘ಜಿಲ್ಲೆಯಲ್ಲಿ ಆಸ್ಪತ್ರೆ ಹೆರಿಗೆಗಳಿಗೆ ಹೆಚ್ಚು ಒತ್ತು ನೀಡಬೇಕು. ಗರ್ಭಪಾತಕ್ಕೆ ಹಳ್ಳಿ ವೈದ್ಯರ ಔಷಧ ನೀಡುವಿಕೆಯ ಪ್ರಕರಣಗಳನ್ನು ಪತ್ತೆ ಮಾಡಬೇಕು, ವೈದ್ಯರ ಪ್ರಮಾಣಪತ್ರಗಳ ನೈಜತೆ ಕುರಿತಂತೆ ಪರಿಶೀಲನೆ ಮಾಡಬೇಕು. ಹೆಣ್ಣು ಭ್ರೂಣ ಹತ್ಯೆಯ ತಡೆಯ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಿಳಿಸಿದರು.

ಸಿಬ್ಬಂದಿ ನೇಮಕಕ್ಕೆ ಮನವಿ

ಜಿಲ್ಲೆಯಲ್ಲಿ ಎಂಟು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ 55 ಖಾಸಗಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಪರವಾನಗಿ ನೀಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಸ್ಕ್ಯಾನಿಂಗ್ ಸೆಂಟರ್‌ಗಳು ಇರುವುದಿಲ್ಲ. ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಮಾಹಿತಿಯನ್ನು ಅಪ್‍ಲೋಡ್ ಮಾಡಲು ಸಿಬ್ಬಂದಿ ಕೊರತೆ ಇದ್ದು, ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದುಡಾ.ದೇವರಾಜ ಮನವಿ ಮಾಡಿಕೊಂಡರು.

ಸಭೆಯಲ್ಲಿ ಸಮಿತಿಯ ಸದಸ್ಯರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಸ್ತ್ರೀರೋಗ ತಜ್ಞೆ ಡಾ.ತ್ರಿವೇಣಿ ಹೆಗ್ಗೇರಿ, ಚಿಕ್ಕ ಮಕ್ಕಳ ತಜ್ಞರಾದ ಡಾ.ವಿಲಾಸ ಹಿರೇಗೌಡ್ರ, ವಕೀಲರಾದ ಎಂ.ವಿ.ಕುಂಠೆ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ವೈದ್ಯಾಧಿಕಾರಿಗಳಾದ ಡಾ.ಜಯಾನಂದ, ಡಾ.ನೀಲೇಶ್, ಡಾ.ಪ್ರಭಾಕರ ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.