ADVERTISEMENT

ಅಗ್ನಿವೀರರ ನೇಮಕಕ್ಕೆ ಸಿದ್ಧತೆ ಕೈಗೊಳ್ಳಿ

ಸೆ.1ರಿಂದ 20ರವರೆಗೆ ಹಾವೇರಿ ನಗರದಲ್ಲಿ ಅಗ್ನಿಪಥ ನೇಮಕಾತಿ ರ‍್ಯಾಲಿ: ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 15:09 IST
Last Updated 30 ಜುಲೈ 2022, 15:09 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಶನಿವಾರ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವ ಸಿದ್ಧತಾ ಸಭೆ ನಡೆಯಿತು 
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಶನಿವಾರ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವ ಸಿದ್ಧತಾ ಸಭೆ ನಡೆಯಿತು    

ಹಾವೇರಿ: ಅಗ್ನಿಪಥ ಸೇನಾ ನೇಮಕಾತಿ ಯೋಜನೆಯಡಿ ಸೆಪ್ಟೆಂಬರ್ 1ರಿಂದ 20ರವರೆಗೆ ಹಾವೇರಿ ನಗರದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದ್ದು, ನೇಮಕಾತಿ ರ‍್ಯಾಲಿಗೆ ಅಗತ್ಯವಾದ ಮೂಲಸೌಕರ್ಯಗಳ ಸಿದ್ಧತೆಗೆ ವಿವಿಧ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಅಗ್ನಿಪಥ ನೇಮಕಾತಿ ರ‍್ಯಾಲಿ ಪೂರ್ವ ಸಿದ್ಧತೆ ಕುರಿತಂತೆ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ ಕುರಿತಂತೆ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ಸ್ಥಳ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ವಸತಿ ವ್ಯವಸ್ಥೆ, ಸ್ವಚ್ಛತಾ ವ್ಯವಸ್ಥೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಸೇನಾ ನೇಮಕಾತಿಗೆ ಅನುಗುಣವಾಗಿ ಜಿಲ್ಲಾ ಕ್ರೀಡಾಂಗಣ ಸಿದ್ಧಗೊಳಿಸುವ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಕೈಗೊಳ್ಳಬೇಕಾಗಿರುವುದರಿಂದ ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳ ಅವಶ್ಯ ಹಾಗೂ ಮಾರ್ಗದರ್ಶನದಂತೆ ವ್ಯವಸ್ಥೆ ಮಾಡಬೇಕು. ಯಾವುದೇ ಲೋಪವಾಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ವಸತಿ–ಊಟದ ವ್ಯವಸ್ಥೆ

ಸೇನಾ ನೇಮಕಾತಿ ಅಧಿಕಾರಿಗಳ ತಂಡಕ್ಕೆ ಖಾಸಗಿ ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕು. ಸೇನಾ ನೇಮಕಾತಿ ಸಿಬ್ಬಂದಿಗೆ ನಗರದ ಉತ್ತಮ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ವಿವಿಧ ಜಿಲ್ಲೆಗಳಿಂದ ಹಾವೇರಿಗೆ ಆಗಮಿಸುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆಯಾಗಿ ನಗರದ ವಿವಿಧ ಸಮುದಾಯ ಭವನಗಳನ್ನು ಗುರುತಿಸಿ ವ್ಯವಸ್ಥೆ ಮಾಡಬೇಕು. ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಗಾಗಿ ಫುಡ್‌ ಕೋರ್ಟ್‍ಗಳನ್ನು ಗುರುತಿಸಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಸೇನಾ ನೇಮಕಾತಿ ಅಧಿಕಾರಿಗಳು ನೀಡುವ ನೀಲನಕ್ಷೆಯಂತೆ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆಗೆ ವ್ಯವಸ್ಥೆ ಮಾಡಬೇಕು ಎಂದರು.

‘50 ಸಾವಿರ ಅಭ್ಯರ್ಥಿಗಳ ನಿರೀಕ್ಷೆ’

ಅಗ್ನಿಪಥ ನೇಮಕಾತಿ ವಿಭಾಗದ ಅಧಿಕಾರಿ ಸುನೀಲಕುಮಾರ ಮಾತನಾಡಿ, 50 ರಿಂದ 60ಸಾವಿರ ಅಭ್ಯರ್ಥಿಗಳು ಅಗ್ನಿವೀರರ ನೇಮಕಾತಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದಿನಕ್ಕೆ 2500 ರಿಂದ 3000 ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ದಾಖಲೆಗಳ ಪರಿಶೀಲನೆ ಸಹ ನಡೆಸಲಾಗುವುದು ಎಂದರು.

‘ಸಾರಿಗೆ ಸೌಲಭ್ಯ ಕಲ್ಪಿಸಿ’

ನೇಮಕಾತಿ ರ‍್ಯಾಲಿಯಲ್ಲಿ 11 ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. 20 ದಿನಗಳ ಕಾಲ ನಡೆಯುವ ನೇಮಕಾತಿ ರ‍್ಯಾಲಿಯಲ್ಲಿ ವಿವಿಧ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ವಿಶೇಷವಾಗಿ ಹುಬ್ಬಳ್ಳಿ ಮತ್ತು ದಾವಣಗೆರೆಯಿಂದ ಹಾವೇರಿಗೆ ಹೆಚ್ಚುವರಿ ಸಾರಿಗೆ ಸಂಪರ್ಕ ಕಲ್ಪಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಡಿಸಿಎಫ್‌ ಬಾಲಕೃಷ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಧಾರವಾಡ ವಿಭಾಗದ ಸೈನಿಕ ಪುನರ್ವಸತಿ ಹಾಗೂ ಕಲ್ಯಾಣಾಧಿಕಾರಿ ಲೋಲಾಕ್ಷ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.