
ರಾಣೆಬೆನ್ನೂರು: ಬಲಿಷ್ಠ ಭಾರತ ಕಟ್ಟಬೇಕಾದರೆ ನುಡಿ, ಗುಡಿ ಪರಂಪರೆ ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಪರಂಪರೆಯನ್ನು ಬಿಟ್ಟುಹೋಗಬೇಕು ಎಂದು ಸಂಸ್ಕಾರ ಭಾರತೀ ದಕ್ಷಿಣ ಪ್ರಾಂತದ ಅಧ್ಯಕ್ಷ, ನಟ ಹಾಗೂ ವಾಗ್ಮಿ ಸುಚೇಂದ್ರ ಪ್ರಸಾದ್ ಹೇಳಿದರು.
ಇಲ್ಲಿನ ಆದಿಶಕ್ತಿ ದೇವಸ್ಥಾನದ ಆರವಣದಲ್ಲಿರುವ ಬಿ.ಕೆ.ಗುಪ್ತಾ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಪರಿವರ್ತನ ರಾಣೆಬೆನ್ನೂರು ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಕಿತ್ತೂರು ಚನ್ನಮ್ಮನ ವಿಜಯೋತ್ಸವ ದ್ವಿಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಚನ್ನಮ್ಮಾಜಿಯ ವಿಜಯ ಸಾಧಿಸಿದ ಲಭ್ಯವಿರುವ ದಾಖಲೆ ಇಟ್ಟುಕೊಂಡು ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎನ್ನುತ್ತೇವೆ. ಆದರೆ ಯುಗಾಂತರದಿಂದ ಕನ್ನಡವಿತ್ತು ಅನ್ನುವದಕ್ಕೆ ಸಾಕ್ಷಿ ಪುರಾವೆಗಳಿವೆ. ಸಂಸ್ಕೃತದಿಂದ ನೇರವಾಗಿ ಪದ ಜೋಡಣೆ ಕನ್ನಡಕ್ಕೆ ಮಾತ್ರ ಸಾಧ್ಯ ಎಂದರು.
ನಾವೇ ಮಾಡಿಕೊಂಡ ಸಂವಿಧಾನವನ್ನು ನಾವೆಷ್ಟರ ಮಟ್ಟಿಗೆ ಪಾಲನೆ ಮಾಡುತ್ತಿದೇವೆ. ನಮ್ಮ ಸಂವಿಧಾನದಲ್ಲಿ ಆಧುನಿಕ ಕೊಡುಗೆಯಿದೆ. ಚಾಲುಕ್ಯರು, ಇಮ್ಮಡಿ ಪುಲಕೇಶಿ, ಗಂಗರು, ರಾಷ್ಟ್ರಕೂಟರು, ಕದಂಬರು ಸಾಗರದಾಚೆ ಕನ್ನಡವನ್ನು ಕಂಪಿಸಿದ್ದಾರೆ. ನಮ್ಮ ದೊರೆಗಳ ಸಾಧನೆ ಅಪಾರವಾಗಿದೆ ಎಂದರು.
ಹರಿಹರದ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರು ಕಿತ್ತೂರು ಚನ್ನಮ್ಮಳ ಶೌರ್ಯ, ತ್ಯಾಗ, ಬಲಿದಾನ ಮತ್ತು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಕುರಿತು ತಿಳಿಸಿದರು. ನಂತರ ಭಾರತ ಸರ್ಕಾರ ಕಿತ್ತೂರು ಚನ್ನಮ್ಮನ ಹೆಸರಿನಲ್ಲಿ ₹ 100ರ ನಾಣ್ಯ ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ 13 ಕನ್ನಡಪರ ಸಂಘಟನೆಗಳ ಗಣ್ಯ ವ್ಯಕ್ತಿಗಳನ್ನು ಗೌರವಿಸಲಾಯಿತು.
ನಂತರ ಬೆಂಗಳೂರಿನ ರಂಗ ಬದುಕು ಟ್ರಸ್ಟ್‌ನ ತಂಡದಿಂದ ʻವೀರರಾಣಿ ಕಿತ್ತೂರು ಚನ್ನಮ್ಮʼ ಜೀವನಾಧಾರಿತ ನಾಟಕದ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು.
ಪರಿವರ್ತನ ರಾಣೆಬೆನ್ನೂರು ಸಂಯೋಜಕ ವೈದ್ಯ ಡಾ.ನಾರಾಯಣ ಪವಾರ, ಸಹ ಸಂಯೋಜಕ ಶಿವಾನಂದ ಸೊಂಡೂರ, ನಗರಸಭೆ ಮಾಜಿ ಸದಸ್ಯೆ ಮಂಜುಳಾ ಹತ್ತಿ, ಬಸವರಾಜ ಎನ್. ಪಾಟೀಲ, ಜಿ.ಜಿ. ಹೊಟ್ಟಿಗೌಡ್ರ, ಬಸವರಾಜ ಹುಲ್ಲತ್ತಿ, ಸುಮಾ ಉಪ್ಪಿನ, ವಸಂತಾ ಹುಲ್ಲತ್ತಿ, ಕೆ.ಎನ್.ಪಾಟೀಲ, ಶಿವಪ್ಪ ಗುರಿಕಾರ, ಸಂಜೀವರಡ್ಡಿ ಮದಗುಣಕಿ, ಜಗದೀಶ ಮಳೇಮಠ ಹಾಗೂ ಪರಿವರ್ತನ ತಂಡದ ಸದಸ್ಯರು, ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.