ADVERTISEMENT

ನೀರಿನ ಘಟಕ ದುರಸ್ತಿಗೆ ಕ್ರಮವಹಿಸಿ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಅಧ್ಯಕ್ಷ ಏಕನಾಥ ಬಾನುವಳ್ಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 13:33 IST
Last Updated 12 ಜನವರಿ 2021, 13:33 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಒ ಮೊಹಮ್ಮದ್ ರೋಶನ್ ಮಾತನಾಡಿದರು. ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ, ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ ಇದ್ದಾರೆ 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಒ ಮೊಹಮ್ಮದ್ ರೋಶನ್ ಮಾತನಾಡಿದರು. ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ, ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ ಇದ್ದಾರೆ    

ಹಾವೇರಿ: ‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಶುದ್ಧ ನೀರಿನ ಘಟಕಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ, ಹಲವಾರು ಘಟಕಗಳು ಸ್ಥಗಿತಗೊಂಡಿರುವ ದೂರುಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಏಕನಾಥ ಬಾನುವಳ್ಳಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೊಸೈಟಿಗಳ ನಿರ್ವಹಣೆಯಲ್ಲಿರುವ 117 ಘಟಕಗಳ ನಿರ್ವಹಣೆಯನ್ನು ಸೊಸೈಟಿಗಳು ಮಾಡಬಹುದು ಇಲ್ಲವಾದಲ್ಲಿ ಮುಚ್ಚಳಿಕೆ ಪತ್ರ ಬರೆದು ಇಲಾಖೆಗೆ ಹಸ್ತಾಂತರಿಸಬಹುದು. ಈ ಕುರಿತು ಸೊಸೈಟಿಗಳಿಗೆ ಪತ್ರ ಬರೆಯಲು ತಿಳಿಸಿದರು.

32 ಘಟಕಗಳ ದುರಸ್ತಿ ಬಾಕಿ:ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಷನ್ ಮಾತನಾಡಿ, ‘ಜಿಲ್ಲೆಯಲ್ಲಿ 772 ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಮಾಹಿತಿ ನೀಡಲು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಘಟಕಗಳು ಹಲವಾರು ಕಾರಣಗಳಿಂದ ಸ್ಥಗಿತಗೊಂಡಿರಬಹುದು. ಸಮಸ್ಯೆಗಳ ಮಾಹಿತಿ ನೀಡಲು ಈಗಾಗಲೇ ಸಹಾಯವಾಣಿ ನೀಡಲಾಗಿದೆ. 32 ಘಟಕಗಳನ್ನು ಮಾತ್ರ ಸರಿಪಡಿಸಬೇಕಾಗಿದೆ’ ಎಂದರು.

ADVERTISEMENT

ಸೆನ್ಸಾರ್‌ ಅಳವಡಿಸಲು ಕ್ರಮ:‘ರಾಜ್ಯದಲ್ಲಿಯೇ ಜಿಲ್ಲೆಯ ಕುಡಿಯುವ ನೀರಿನ ಘಟಕಗಳ ಪರಿಸ್ಥಿತಿ ಚೆನ್ನಾಗಿದೆ. ಈಗಿರುವ ಸಮಸ್ಯೆಗಳ ನಿವಾರಣೆಗೆ ಸ್ವಲ್ಪ ಕಾಲಾವಕಾಶ ಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಒಂದು ಸೆನ್ಸಾರ್‌ ಅಳವಡಿಸಿದರೆ ದುರಸ್ತಿ ಬಗ್ಗೆ ಕೂಡಲೇ ಮಾಹಿತಿ ದೊರೆಯುತ್ತದೆ’ ಎಂದು ತಿಳಿಸಿದರು.

ಎಸಿಬಿ ತನಿಖೆಗೆ ಆಗ್ರಹ:ಭೂಸ್ವಾಧೀನ ಪರಿಹಾರ ಹಣ ರೈತರಿಗೆ ಜಮೆ ಕುರಿತು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಸತಿ ಗೃಹ ನಿರ್ಮಾಣ, ಅಕಾಲಿಕೆ ಮಳೆಯಿಂದ ಹಾಳಾದ ಜೋಳ, ಕಡ್ಲಿ, ಕುಸುಬಿ ಬೆಳೆ ಸಮೀಕ್ಷೆ, ಬೆಳೆಹಾನಿ ಇನ್‍ಫುಟ್ ಸಬ್ಸಿಡಿ ಹಣ ದುರುಪಯೋಗಪಡಿಸಿಕೊಂಡವರನ್ನು ಎಸಿಬಿಗೆ ತನಿಖೆಗೆ ಒಳಪಡಿಸಲು, ಜಿಲ್ಲಾ ಪಂಚಾಯಿತಿ ರಸ್ತೆಗಳಲ್ಲಿ ಹಾಗೂ ಪಿ.ಡಬ್ಲ್ಯೂ.ಡಿ ರಸ್ತೆ ಬದಿಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳಿಂದ ರಸ್ತೆಗಳಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಕುರಿತು ಸಭೆಯ ಗಮನ ಸೆಳೆದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ‘ಬೆಳೆಹಾನಿ ಪರಿಹಾರಧನ ದುರುಪಯೋಗಪಡಿಸಿಕೊಂಡವರ ವಿರುದ್ಧ ಎಸಿಬಿ ತನಿಖೆ ನಡೆದಿದೆ. ಎಷ್ಟು ಹಣ ಯಾವ ಖಾತೆಯಿಂದ ಯಾರಿಗೆ ಹೋಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಜಲಾನಯನ ಯೋಜನೆಗೆ ₹4.85 ಕೋಟಿ ಅನುದಾನ ಮಂಜೂರಾಗಿದೆ. ಚೆಕ್ ಡ್ಯಾಂ ನಿರ್ಮಾಣಕ್ಕೆ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಪಂಚಾಯಿತಿ 4010.07 ಕಿ.ಮೀ ರಸ್ತೆ, ಕ್ರೀಡಾ ಇಲಾಖೆ ಕಾಮಗಾರಿ ಬದಲಾವಣೆ, ರಾಣೆಬೆನ್ನೂರುನಲ್ಲಿ ಐ.ಟಿ.ಐ. ಕಾಲೇಜಿಗೆ 1.2 ಎಕರೆ ಜಾಗಕ್ಕೆ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಟಾಕನಗೌಡ ಪಾಟೀಲ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪೂರ, ಜಿ.ಪಂ. ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.