ಅಕ್ಕಿಆಲೂರ: ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ನೋಡುತ್ತಲೇ ಇದ್ದೇವೆ. ಮಹಿಳೆಯರ ಸುರಕ್ಷತೆ ಹಾಗೂ ಎಲ್ಲ ವರ್ಗದ ಬಂಧುಗಳ ಕಲ್ಯಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ, ಆಶೀರ್ವದಿಸುವಂತೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮನವಿ ಮಾಡಿದರು.
ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಬ್ಯಾಗವಾದಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಮತಯಾಚಿಸಿ ಅವರು ಮಾತನಾಡಿದರು. ನಾವು ಭೂಮಿಯನ್ನು ತಾಯಿಯಂತೆ ಕಾಣುತ್ತೇವೆ. ಜನಸಂಖ್ಯೆಯಲ್ಲಿ ಶೇ 50 ರಷ್ಟು ಇರುವ ಮಹಿಳೆಯರಿಗೆ ಈ ದೇಶ ಹಾಗೂ ರಾಜ್ಯದಲ್ಲಿ ಯಾವ ರೀತಿ ರಕ್ಷಣೆ ಸಿಗುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಬಿಜೆಪಿಗೆ ಮತ ಹಾಕಬೇಕಾ? ಎನ್ನುವುದನ್ನು ನೀವೇ ಯೋಚಿಸಿ ಎಂದರು.
ಶ್ರೀನಿವಾಸ್ ಮಾನೆ ಅವರಂಥ ಯುವ ನಾಯಕನನ್ನು ಕಾಂಗ್ರೆಸ್ ಹಾನಗಲ್ ಕ್ಷೇತ್ರದ ಜನರ ಮಡಿಲಿಗೆ ಹಾಕಿದೆ. ಕಳೆದ ಮೂರುವರೆ ವರ್ಷಗಳಲ್ಲಿ ತಮ್ಮ ನಾಯಕತ್ವ ಸಾಬೀತು ಪಡಿಸುವಲ್ಲಿ ಮಾನೆ ಯಶಸ್ವಿಯಾಗಿದ್ದಾರೆ. ಸಮಸ್ಯೆ, ಸವಾಲುಗಳ ಮಧ್ಯೆ ಹೋರಾಡಿ ಕ್ಷೇತ್ರದ ಜನರನ್ನು ರಕ್ಷಿಸಿದ್ದಾರೆ. ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದು, ಕ್ಷೇತ್ರದ ತುಂಬೆಲ್ಲ ಅವರ ಬಗೆಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು.
ಅಭ್ಯರ್ಥಿ ಶ್ರೀನಿವಾಸ್ ಮಾನೆ ಸೇರಿದಂತೆ ಇತರ ಪ್ರಮುಖ ನಾಯಕರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.