ADVERTISEMENT

ಶಿಗ್ಗಾವಿ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಭಾರತ ಬಂದ್‌ ಬೆಂಬಲಿಸಿ ರೈತರಿಂದ ಹೋರಾಟ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 15:55 IST
Last Updated 27 ಸೆಪ್ಟೆಂಬರ್ 2021, 15:55 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿದರು   

ಶಿಗ್ಗಾವಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ್ದ ಭಾರತ ಬಂದ್‌ ಕರೆಯನ್ನು ಬೆಂಬಲಿಸಿ ತಾಲ್ಲೂಕಿನ ಬಂಕಾಪುರ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸಲಿಂಗಪ್ಪ ನರಗುಂದ ಮಾತನಾಡಿ, ಸರ್ಕಾರಗಳು ರೈತರನ್ನು ಅವಲಂಬಿಸಿವೆ. ಆದರೆ ರೈತರು ಯಾವುದೇ ಸರ್ಕಾರಗಳನ್ನು ಅವಲಂಬಿಸಿಲ್ಲ. ಹೀಗಾಗಿ ಆಡಳಿತದಲ್ಲಿರುವ ಸರ್ಕಾರಗಳು ರೈತರ ನೆರವಿಗೆ ಬರುವುದು ಬಹುಮುಖ್ಯವಾಗಿದೆ. ರೈತರು ತಮ್ಮ ಬೇಡಿಕೆಗಳನ್ನು ಪ್ರತಿ ಬಾರಿ ಹೋರಾಡಿ ಈಡೇರಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರು ನಾಡಿನ ಬೆನ್ನೆಲುಬು ಎಂದು ಮಾತಿನಲ್ಲಿ ಹೇಳುವ ಬದಲಾಗಿ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದ ಆಗ್ರಹಿಸಿದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಗುಡಿಗೇರಿ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು. ರೈತರಿಗೆ ನೆರವಾಗುವ ರೈತಪರ ಕಾಯ್ದೆಗಳನ್ನು ಜಾರಿಗೆ ತರಬೇಕು. ಕೃಷಿ ಕ್ಷೇತ್ರ ಬೆಳವಣಿಗೆಯಾದರೆ ಮಾತ್ರ ಇತರ ಎಲ್ಲ ರಂಗಗಳು ಚೇತರಿಸಿಕೊಳ್ಳಲು ಸಾಧ್ಯವಿದೆ. ಆದರೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅದರಿಂದಾಗಿ ದೇಶದ ಅಭಿವೃದ್ದಿ ಕುಂಟಿತವಾಗುತ್ತಿದೆ. ಆಡಳಿತ ಸರ್ಕಾರಗಳು ಅವುಗಳ ಕುರಿತು ಅರಿಯಬೇಕಾಗಿದೆ. ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ADVERTISEMENT

ಬಂಕಾಪುರ ಟೋಲ್ ನಾಕಾದ ಮುಂದೆ ವಾಹನ ಸಂಚಾರ ತಡೆದು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ವಾಹನ ಚಾಲಕರು, ಪ್ರಯಾಣಿಕರು ಪರದಾಡಿದರು. ನಂತರ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿ ಬಿಡುಗಡೆ ಮಾಡಿದರು. ಹಾವೇರಿ ಎಸ್ಪಿ ಹನುಮಂತರಾಯ, ಡಿವೈಎಸ್‌ಪಿ ಕಲ್ಲೇಶಪ್ಪ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‌ಐ ಪರಶುರಾಮ ಕಟ್ಟಿಮನಿ ಬಂದೋಬಸ್ತ್‌ ಮಾಡಿದ್ದರು.

ರೈತ ಮುಖಂಡರಾದ ಶಂಕರಗೌಡ ಪಾಟೀಲ, ಮಂಜುನಾಥ ಹಾವೇರಿ, ನಾಗಪ್ಪ ಕೊಟನದ, ಶಬ್ಬೀರ್ ದೊಡ್ಡಮನಿ, ಪಂಚಯ್ಯ ಹಿರೇಮಠ, ಈರಣ್ಣ ಸುಣಗಾರ, ಪ್ರಭುಗೌಡ ಪಾಟೀಲ, ಆನಂದ ಕೆಳಗಿಮನಿ, ಚನ್ನಪ್ಪ ಮರಡೂರ, ಮಂಜು ಓಲೇಕಾರ ಸೇರಿದಂತೆ ರೈತ ಸಂಘದ ಸದಸ್ಯರು, ರೈತರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.