ADVERTISEMENT

ಹಾವೇರಿ: ಆದಾಯ ತೆರಿಗೆಯಿಂದ ಆರ್ಥಿಕ ದಿವಾಳಿ

ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:52 IST
Last Updated 9 ಜನವರಿ 2020, 14:52 IST
ಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಹಾವೇರಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು
ಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಹಾವೇರಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು   

ಹಾವೇರಿ: ‘ಕೇಂದ್ರ ಸರ್ಕಾರಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆಯಿಂದ ಮುಕ್ತಗೊಳಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವತಿಯಿಂದ ಗುರುವಾರ ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮುರುಘಾಮಠದಿಂದ ಮೈಲಾರ ಮಹಾದೇವಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಹಾಮಂಡಳದ ನಿರ್ದೇಶಕ ಡಾ.ಸಂಜಯ ಹೊಸಮಠ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳಿಂದ ಸಮಾಜದ ಕಡೆಯ ವ್ಯಕ್ತಿಗೂ ಆರ್ಥಿಕ ಸಹಾಯ ದೊರಕುತ್ತಿದೆ. ಆದರೆ, ಕೇಂದ್ರ ಸರ್ಕಾರ ಸಹಕಾರ ಸಂಘಗಳ ಮೇಲೆ ಆದಾಯ ತೆರಿಗೆ ವಿಧಿಸುತ್ತಿದ್ದು, ಇದರಿಂದ ಸಂಘ ನಡೆಸುವುದು ಕಷ್ಟವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಹಲವಾರು ಸಂಘಗಳು ಆದಾಯ ತೆರಿಗೆಯಿಂದ ನಷ್ಟಕ್ಕೆ ಸಿಲುಕಿ ಆರ್ಥಿಕ ದಿವಾಳಿಯಾಗುತ್ತಿವೆ. ಅನೇಕ ಸಂಘಗಳು ಮುಚ್ಚಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

‘ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಸಹಕಾರ ಕ್ಷೇತ್ರ ತತ್ತರಿಸಿ ಹೋಗಿದೆ.ರಾಜ್ಯದಲ್ಲಿ ಶತಮಾನದ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವನ್ನು ಉಳಿಸುವುದಕ್ಕೆ ಕೇಂದ್ರ ಸರ್ಕಾರ ಸಹಕರಿಸಬೇಕು. ಈ ಕ್ಷೇತ್ರವನ್ನು ಸ್ವತಂತ್ರ ಹಾಗೂ ಸದೃಢವಾಗಿ ಬೆಳೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸುತ್ತೇವೆ. ನಮ್ಮ ಮನವಿಗೆ ಸ್ಪಂದಿಸದೆ ಇದ್ದರೇ, ನಂತರ ‘ಬೆಂಗಳೂರು ಚಲೋ’ ಆನಂತರ ‘ದೆಹಲಿ ಚಲೋ’ ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಬಿ.ಬೆಳವಡಿ, ವ್ಯವಸ್ಥಾಪಕ ಶಂಕರಅಗಸನಹಳ್ಳಿ, ಮಹೇಶ್ವರ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಅಧ್ಯಕ್ಷ ಎಸ್‌.ಎನ್‌. ಹಿರೇಮಠ, ಪಿ.ಎನ್‌.ಶಿವಣ್ಣನವರ, ಬಸಣ್ಣ ಸಂಶಿ, ತಮ್ಮಣ್ಣ ಕೆಂಚರೆಡ್ಡಿ, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.