ಹಾವೇರಿ: ಆನ್‌ಲೈನ್ ಮದ್ಯ ಮಾರಾಟ ನಿಷೇಧ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಲಾಕ್‌ಡೌನ್‌ನಿಂದ ಮದ್ಯ ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ನಷ್ಟದಲ್ಲಿರುವ ಉದ್ಯಮ ವಲಯಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕವನ್ನು ಕೈಬಿಡಬೇಕು. ಚಿಲ್ಲರೆ ಮದ್ಯ ಮಾರಾಟಗಾರರಿಗೆ ಮೊದಲಿನಂತೆ ಶೇ 20 ಲಾಭಾಂಶವನ್ನು ನೀಡಬೇಕು ಎಂದು ಮದ್ಯ ಮಾರಾಟಗಾರರು ಒತ್ತಾಯಿಸಿದರು.
ರಾಜ್ಯದಲ್ಲಿ ವಿವಿಧ ಪ್ರದೇಶದ ಸನ್ನದುಗಳಿಗೆ ವಿವಿಧ ರೀತಿಯ ಶುಲ್ಕಗಳಿವೆ. ಎಲ್ಲ ವಲಯದ ಸನ್ನದುಗಳಿಗೆ ಏಕರೂಪದ ಶುಲ್ಕ ವಿಧಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶದ ಬೀಡಾ ಅಂಗಡಿ, ಹೋಟೆಲ್, ದಿನಸಿ ಅಂಗಡಿ ಹಾಗಾ ಡಾಬಾಗಳಲ್ಲಿ ನಡೆಯುತ್ತಿರುವ ನಕಲಿ ಮದ್ಯ ಮಾರಾಟವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಅಬಕಾರಿ ಅಧಿಕಾರಿಗಳು ಲಂಚ ವಸೂಲಿ ಮಾಡುತ್ತಾ ಕಿರುಕುಳ ನೀಡುತ್ತಿದ್ದಾರೆ. ಅಬಕಾರಿ ಅಧಿಕಾರಿಗಳ ಬೇನಾಮಿ ಆಸ್ತಿಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಹಸ್ತಕ್ಷೇಪವನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಬಸವರಾಜ ಬೆಳವಡಿ, ಎಚ್.ಎಸ್.ಶೀಲವಂತ, ಆರ್.ನಾಗರಾಜ, ಕೆ.ಆರ್.ಬ್ಯಾಡಗಿ, ಎಸ್.ಅಮರೇಂದ್ರ, ಉಮೇಶ ಗೌಳಿ, ನಾಗರಾಜ ಕುಲಕರ್ಣಿ, ಸಿ.ಆರ್.ಕಲಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.