ADVERTISEMENT

ಸಿರಿಗೆರೆ ಶ್ರೀ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ

ಎಸ್‌.ಎಸ್‌.ಪಾಟೀಲ ಮನೆ ಸಮೀಪ ಪ್ರತಿಭಟನೆ: ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:22 IST
Last Updated 4 ಡಿಸೆಂಬರ್ 2021, 2:22 IST
ತರಳಬಾಳು ಸ್ವಾಮೀಜಿ ವಿರುದ್ಧ ದಾಖಲಿಸಿರುವ ಮೊಕದ್ದಮೆ ಹಿಂಪಡೆಯುವ ಕುರಿತು ಹಿರೇಕೆರೂರಿನಲ್ಲಿ ಸಮಾಜದ ಮುಖಂಡರು ಚರ್ಚೆ ನಡೆಸಿದರು
ತರಳಬಾಳು ಸ್ವಾಮೀಜಿ ವಿರುದ್ಧ ದಾಖಲಿಸಿರುವ ಮೊಕದ್ದಮೆ ಹಿಂಪಡೆಯುವ ಕುರಿತು ಹಿರೇಕೆರೂರಿನಲ್ಲಿ ಸಮಾಜದ ಮುಖಂಡರು ಚರ್ಚೆ ನಡೆಸಿದರು   

ಹಿರೇಕೆರೂರು: ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಣೆಬೆನ್ನೂರು ಹಾಗೂ ಹಾವೇರಿ ತಾಲ್ಲೂಕುಗಳ ಮಠದ ಭಕ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ಹಾಗೂ ತರಳಬಾಳು ಬೃಹನ್ಮಠದ ಪೀಠಾಧಿಪತಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ಎಸ್.ಎಸ್. ಪಾಟೀಲ ಅವರ ಇಲ್ಲಿನ ವಿದ್ಯಾನಗರದ ನಿವಾಸದ ಸಮೀಪ ಜಮಾಯಿಸಿದ ಭಕ್ತರು, ಮೊಕದ್ದಮೆ ಹಿಂಪಡೆಯುವಂತೆ ಪಾಟೀಲರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅವರ ಬೆಂಬಲಕ್ಕೆ ಸ್ಥಳೀಯರು ಬಂದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ADVERTISEMENT

ತರಳಬಾಳು ಬೃಹನ್ಮಠದ ಬೈಲಾ ತಿದ್ದುಪಡಿ ಮಾಡಿ ಶ್ರೀಮಠದ ಪೀಠಾಧಿಪತಿಗೆ ಸರ್ವಾಧಿಕಾರ ನೀಡಿದ್ದನ್ನು ಪ್ರಶ್ನಿಸಿ ಎಸ್.ಎಸ್. ಪಾಟೀಲ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇವರು, ಮಠದ ಕಾರ್ಯದರ್ಶಿಯಾಗಿದ್ದ ಸಿದ್ದಯ್ಯ ಎಂಬುವವರ ಪರವಾಗಿದ್ದಾರೆ ಎಂಬುದು ಸ್ವಾಮೀಜಿ ಪರವಿರುವ ಭಕ್ತರ ಆರೋಪ. ಸಿದ್ದಯ್ಯ ಅವರ ವಿರುದ್ಧ ಕೂಡ ಮಠದಿಂದ ಪ್ರಕರಣ ದಾಖಲಾಗಿದೆ. ‘ಸಮಾಜದ ಹಿತದೃಷ್ಟಿಯಿಂದ ಎರಡೂ ಪ್ರಕರಣಗಳನ್ನು ವಾಪಸ್‌ ಪಡೆಯಲು ನಮ್ಮ ಬೆಂಬಲವಿದೆ’ ಎಂದು ಪಾಟೀಲರ ಬೆಂಬಲಿಗರು ತಿಳಿಸಿದರು.

ಕೊನೆಗೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಉಭಯ ಬಣಗಳ ಮುಖಂಡರು ಚರ್ಚೆ ನಡೆಸಿದರು. ಬಳಿಕ ಎರಡೂ ಕಡೆಯಿಂದ ದಾಖಲಾಗಿರುವ ಮೊಕದ್ದಮೆ ವಾಪಸ್‌ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.