ADVERTISEMENT

ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡಿ ಆತ್ಮಹತ್ಯೆ ತಡೆಗೆ ಮುಂದಾಗಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 15:35 IST
Last Updated 23 ಅಕ್ಟೋಬರ್ 2021, 15:35 IST
ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ತಾಲ್ಲೂಕಿನ ಬಿಲ್ಲಳ್ಳಿ ಗ್ರಾಮದ ರೈತ ರೇವಣೆಪ್ಪ ಭೀಮಪ್ಪ ಕರಡೆ ಅವರ ಶವ ಇಟ್ಟು ಪ್ರತಿಭಟನೆ ಮಾಡಿದರು
ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ತಾಲ್ಲೂಕಿನ ಬಿಲ್ಲಳ್ಳಿ ಗ್ರಾಮದ ರೈತ ರೇವಣೆಪ್ಪ ಭೀಮಪ್ಪ ಕರಡೆ ಅವರ ಶವ ಇಟ್ಟು ಪ್ರತಿಭಟನೆ ಮಾಡಿದರು   

ರಾಣೆಬೆನ್ನೂರು: ಸರ್ಕಾರ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಶನಿವಾರ ತಾಲ್ಲೂಕಿನ ಬಿಲ್ಲಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ರೇವಣೆಪ್ಪ ಭೀಮಪ್ಪ ಕರಡೆ ಅವರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಇಟ್ಟು ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್ ಶಂಕರ್‌ ಜಿ.ಎಸ್‌ ಹಾಗೂ ಕೃಷಿ ಅಧಿಕಾರಿ ಶಿವಾನಂದ ಹಾವೇರಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಂಖಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಮತ್ತು ಲಾಕ್‌ಡೌನ್‌ನಿಂದ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಕೃಷಿಗೆ ಮಾಡಿದ ಸಾಲ ತೀರಿಸಲಾಗದೇ ಆತ್ಮ ಹತ್ಯೆ ದಾರಿ ಹಿಡಿದಿದ್ದಾರೆ. ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ ಅವರು ಇದೇ ಜಿಲ್ಲೆಯವರೇ ಆದರೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಘೋಷಣೆ ಮಾಡಿದ ₹10 ಸಾವಿರ ಪರಿಹಾರವನ್ನು ಇದುವರೆಗೂ ನೀಡಿಲ್ಲ’ ಎಂದು ದೂರಿದರು.

ಹಾನಗಲ್‌ ಹಾಗೂ ಸಿಂಧಗಿಯ ಉಪಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಮೋಜು ಮಸ್ತಿ ಮಾಡುತ್ತಿರುವುದು ನಾಚಿಕೇಡಿತನದ ಸಂಗತಿಯಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ರೈತರ ಸಾಲ ಮನ್ನಾ ಮಾಡಿ ರೈತ ಆತ್ಮಹತ್ಯೆ ಪ್ರಕರಣಕ್ಕೆ ಅಂತ್ಯ ಹಾಡಬೇಕೆಂದು ಮನವಿ ಮಾಡಿದರು.

ನಾಗರಾಜ ಕದರಮಂಡಲಗಿ, ಗಿರಿಯಪ್ಪ ರಾಮಣ್ಣನವರ, ಕುಮಾರ ಕೊಪ್ಪದ, ಶಿವನಗೌಡ ಸೊರಟೂರ, ಬಸವರಾಜ ಕೊಂಗಿ, ನಾಗರಾಜ ಸೂರ್ವೆ, ಹರಿಹರಗೌಡ ಪಾಟೀಲ, ಕುಮಾರ ಬತ್ತಿಕೊಪ್ಪ, ನಾಗರಾಜ ಬಿ, ಎಸ್‌.ಡೊಕ್ಕೇರ, ರುದ್ರಪ್ಪ, ಹನುಮಂತಪ್ಪ ತಳವಾರ, ಗಿರಿಯಪ್ಪ, ಎಂ.ಎನ್‌. ವಾಲೀಕಾರ, ಎಚ್‌.ಎಸ್‌. ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.