ADVERTISEMENT

ರಾಣೆಬೆನ್ನೂರು | ನಿರ್ವಹಣೆ ಇಲ್ಲದ ಶೌಚಾಲಯ: ಜನರ ಪರದಾಟ 

ಮುಕ್ತೇಶ ಕೂರಗುಂದಮಠ
Published 27 ಏಪ್ರಿಲ್ 2025, 6:04 IST
Last Updated 27 ಏಪ್ರಿಲ್ 2025, 6:04 IST
ರಾಣೆಬೆನ್ನೂರಿನ ಸಂಗಮ ವೃತ್ತದಲ್ಲಿರುವ  ಸಾರ್ವಜನಿಕ ಶೌಚಾಲಯದ ಗೋಡೆ ಶಿಥಿಲಗೊಂಡಿದೆ
ರಾಣೆಬೆನ್ನೂರಿನ ಸಂಗಮ ವೃತ್ತದಲ್ಲಿರುವ  ಸಾರ್ವಜನಿಕ ಶೌಚಾಲಯದ ಗೋಡೆ ಶಿಥಿಲಗೊಂಡಿದೆ   

ರಾಣೆಬೆನ್ನೂರು: ನಗರದ ಸಾರ್ವಜನಿಕ ಶೌಚಾಲಯಗಳು ಮೂಲಸೌಕರ್ಯ ಮತ್ತು ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಬರುವ ಮಹಿಳೆಯರು, ಮಕ್ಕಳು ಮತ್ತು ವಯೋವೃದ್ದರು ಪರದಾಡುವಂತಾಗಿದೆ.

ನಗರಕ್ಕೆ ಬೇರೆ ಜಿಲ್ಲೆ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಾರೆ. ಇಂಥವರ ಅನುಕೂಲಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಮಾಡಬೇಕಾದ ನಗರಸಭೆ ಅಧಿಕಾರಿಗಳು ಹೊಣೆಗಾರಿಕೆ ಮರೆತು ನಿರ್ಲಕ್ಷ ತೋರಿದ್ದಾರೆ.

ಸ್ವಾಮಿ ವಿವೇಕಾನಂದ ಮಳಿಗೆಯಲ್ಲಿರುವ ಶೌಚಾಲಯ ನಿರ್ವಹಣೆ ಇಲ್ಲದೇ, ಅನೇಕ ವರ್ಷಗಳಿಂದ ಅದರ ಬಾಗಿಲನ್ನು ಶಾಶ್ವತವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯ ಶೌಚಾಲಯವನ್ನೇ ಸಾರ್ವಜನಿಕರು ಬಳಸುವಂತಾಗಿದೆ.

ADVERTISEMENT

ಸಂಗಮ ವೃತ್ತ ಬಳಿಯ ನಗರಸಭೆ ಶೌಚಾಲಯ ಗಬ್ಬು ನಾರುತ್ತಿದೆ. ಶೌಚಾಲಯದ ಗೋಡೆಗಳು, ಮೆಟ್ಟಿಲು ಕಲ್ಲು ಕಿತ್ತಿದ್ದರಿಂದ ಶಿಥಿಲಗೊಂಡಿದೆ. ಮದ್ಯದ ಪೊಟ್ಟಣ, ಶೌಚಾಲಯದ ಒಳಗಡೆ ಎಲೆ–ಅಡಿಕೆ, ಗುಟ್ಕಾ ತಿಂದು ಉಗುಳಿದ್ದರಿಂದ ಕೆಟ್ಟ ವಾಸನೆ ಬೀರುತ್ತಿದೆ. ಜನತೆ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ರಂಗನಾಥ ನಗರ ರಸ್ತೆ: ಇಲ್ಲಿರುವ ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ಶೌಚಾಲಯ ಬಳಕೆಯಾಗದೇ ಹಾಳು ಬಿದ್ದಿವೆ. ಪುರುಷರ ಶೌಚಾಲಯಲಕ್ಕೆ ಬೀಗ ಜಡಿಯಲಾಗಿದೆ. ನಿರ್ವಹಣೆ ಇಲ್ಲದಿದ್ದಕ್ಕೆ ಆವರಣದಲ್ಲಿ ಕಸ, ಪ್ಲಾಸ್ಟಿಕ್‌, ರಟ್ಟು, ಖಾಲಿ ಬಾಟಲಿ ತಂದು ಹಾಕಿದ್ದಾರೆ. ಹಗಲಿನಲ್ಲಿ ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. 

ರಾಣೆಬೆನ್ನೂರಿನ ರಂಗನಾಥ ರಸ್ತೆಯ ಬಳಿಯ ಪುರುಷ ಮತ್ತು ಮಹಿಳೆಯರ ಶೌಚಾಲಯದ ಆವರಣದಲ್ಲಿ ಕಸ ತುಂಬಿದೆ

ಶೌಚಾಲಯವಿಲ್ಲದ ರಸ್ತೆಗಳು: ದೊಡ್ಡಪೇಟೆ ತರಕಾರಿ ಮಾರುಕಟ್ಟೆ, ರೈಲ್ವೆ ನಿಲ್ದಾಣ, ಎಂ.ಜಿ. ರಸ್ತೆ, ದೊಡ್ಡಪೇಟೆ ಮುಖ್ಯ ರಸ್ತೆ, ಹುಣಸೀಕಟ್ಟಿ ರಸ್ತೆಯಿಂದ ಉರ್ದು ಹೈಸ್ಕೂಲ್‌ವರೆಗೆ, ಗುತ್ತಲ ಬಸ್‌ ನಿಲ್ದಾಣ ವೃತ್ತ, ಹಲಗೇರಿ ವೃತ್ತ ಡಾ. ಪುನೀತ್‌ರಾಜ್‌ಕುಮಾರ್‌ ವೃತ್ತ, ಬೈಪಾಸ್‌ ರಸ್ತೆಯಿಂದ ಹಲಗೇರಿ ವೃತ್ತದವರೆಗೆ, ಹಳೇ ಪಿ.ಬಿ.ರಸ್ತೆಯ ಮಾಗೋಡ ವೃತ್ತದಿಂದ ಸಿದ್ದೇಶ್ವರನಗರದ ವೃತ್ತದವರೆಗೆ, ಸರ್ಕಾರಿ ಪದವಿ ಕಾಲೇಜಿನಿಂದ ಬಸ್‌ ನಿಲ್ದಾಣದವರೆಗೆ ಶೌಚಾಲಯಗಳೇ ಇಲ್ಲ. ಇದರಿಂದ ಈ ರಸ್ತೆಗಳಲ್ಲಿ ಸಂಚರಿಸುವ ಜನರು, ಮೂತ್ರ ವಿಸರ್ಜನೆಗೆ ಪರದಾಡುತ್ತಿದ್ದಾರೆ.

ರಾಣೆಬೆನ್ನೂರಿನ ಚತುರ್ಮುಖಿ ದೇವಸ್ಥಾನದ ಎಡಿಬಿ ಬ್ಯಾಂಕ್‌ ಎದುರಿಗಿನ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲವಾಗಿದೆ

ಬೆರಳಿಣಿಕೆಯಲ್ಲಿ ಇರುವ ಶೌಚಾಲಯಗಳು, ನೀರು ಮತ್ತು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ನಗರಕ್ಕೆ ಬಂದ ಎಲ್ಲರಿಗೂ ಬಸ್‌ ನಿಲ್ದಾಣದ ಶೌಚಾಲಯವೇ ಗತಿಯಾಗಿದೆ. ಪುರುಷರು ರಸ್ತೆ ಬದಿ, ಖಾಲಿ ನಿವೇಶನ, ಪಾಳು ಬಿದ್ದ ಕಟ್ಟಡ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮಹಿಳೆಯರು ಪಾಡು ಹೇಳತೀರದಾಗಿದೆ. 

ರಾಣೆಬೆನ್ನೂರಿನ ಶಂಕರ್‌ ಚಿತ್ರಮಂದಿರದ ಸಮೀಪದ ಶೌಚಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ
ರಾಣೆಬೆನ್ನೂರಿನ ವಿವಿಧೆಡೆ ಶೌಚಾಲಯ ನಿರ್ಮಿಸಲಾಗಿದ್ದು ಅದರ ಬಾಗಿಲು ಹಾಕಲಾಗಿದೆ. ಬಾಗಿಲು ತೆರೆದು ಬಳಕೆಗೆ ಮುಕ್ತಗೊಳಿಸಬೇಕು
ಗಣೇಶ ಕೆ. ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.