ADVERTISEMENT

‘ತಂತ್ರಜ್ಞಾನ’ ಉದ್ಯಮಿ ರಾಘವೇಂದ್ರ

ಸಿ.ಸಿ.ಟಿ.ವಿ ಕ್ಯಾಮೆರಾ, ಜಿಪಿಎಸ್, ಲ್ಯಾನ್ ನೆಟ್‌ವರ್ಕ್ ಮತ್ತಿತರ ವ್ಯವಸ್ಥೆಗಳು

ಮಂಜುನಾಥ ರಾಠೋಡ
Published 5 ಏಪ್ರಿಲ್ 2019, 18:30 IST
Last Updated 5 ಏಪ್ರಿಲ್ 2019, 18:30 IST
ಗ್ರಾಹಕರಿಗೆ ಮಾಹಿತಿ ನೀಡುತ್ತಿರುವ ರಾಘವೇಂದ್ರ ಬಾಸೂರ
ಗ್ರಾಹಕರಿಗೆ ಮಾಹಿತಿ ನೀಡುತ್ತಿರುವ ರಾಘವೇಂದ್ರ ಬಾಸೂರ   

ಹಾವೇರಿ: ಮನೆ, ವಾಹನಗಳ ಮಾಹಿತಿಯನ್ನು ಅಂಗೈಯಲ್ಲೆ ಪಡೆಯುವ ತಂತ್ರಜ್ಞಾನವನ್ನೇ ಉದ್ಯಮವನ್ನಾಗಿಸಿಕೊಂಡ ಹಾವೇರಿಯ ರಾಘವೇಂದ್ರ ಬಾಸೂರ ಯಶಸ್ಸು ಕಂಡಿದ್ದಾರೆ.

ಅವರು, ‘ಕಂಪ್ಯೂಟರ್‌ ಸೈನ್ಸ್‌’ ಡಿಪ್ಲೊಮಾ ಹಾಗೂ ಇನ್‌ಫಾರ್ಮೇಶನ್ ಸೈನ್ಸ್‌ ಎಂಜಿನಿಯರಿಂಗ್ ಶಿಕ್ಷಣ ಪಡೆದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ತೊರೆದು, ಹಾವೇರಿಗೆ ಬಂದು ‘ಸಿಸೊಪ್ಸ್‌ ಟೆಕ್ನಾಲಜಿಸ್’ ಆರಂಭಿಸಿದ್ದು, 16 ಜನರಿಗೆ ಉದ್ಯೋಗ ನೀಡಿದ್ದಾರೆ.

‘ಸರ್ಕಾರಿ ಹಾಗೂ ಖಾಸಗಿ ಕಂ‍ಪೆನಿಗಳ ಕಚೇರಿಗಳು ಹಾಗೂ ಮನೆಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ವೈ–ಫೈ ಮೂಲಕ ಪ್ರತಿಕ್ಷಣದ ದೃಶ್ಯಾವಳಿ ವೀಕ್ಷಿಸಬಹುದಾದ ವ್ಯವಸ್ಥೆ, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮಾರಾಟ ಮತ್ತು ದುರಸ್ತಿ, ಲ್ಯಾನ್‌ ನೆಟ್‌ವರ್ಕ್‌‌, ವೈ–ಫೈ ಸಹಾಯ, ಯುಪಿಎಸ್‌, ಬಯೋಮೆಟ್ರಿಕ್‌, ವಾಹನಗಳಿಗೆ ಜಿಪಿಎಸ್‌ ಅಳವಡಿಸುತ್ತೇವೆ’ ಎಂದು ರಾಘವೇಂದ್ರ ಬಾಸೂರ ತಿಳಿಸಿದರು.

ADVERTISEMENT

ಮನೆಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಮೊದಲು ವೈರಿಂಗ್‌ ಮಾಡಬೇಕಾಗಿತ್ತು. ಅದರಿಂದ ಸಮಯ ಮತ್ತು ಶ್ರಮ ಹೆಚ್ಚು ವ್ಯಯವಾಗುತ್ತಿತ್ತು. ಈಚಿನ ತಂತ್ರಜ್ಞಾನದ ಬೆಳೆವಣಿಗೆಯಿಂದ ಕೆಲಸವು ಸುಲಭವಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ, ವೈ–ಫೈ, ಜಿಪಿಎಸ್‌ ಅಳವಡಿಕೆಗೆ ಸೆನ್ಸಾರ್‌ ರೂಪದ ಸಾಧನಗಳು ಇರುತ್ತವೆ. ಒಟ್ಟು ವ್ಯವಸ್ಥೆ ಅವುಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಎಂದು ವಿವರಿಸಿದರು.

ವಾಹನಗಳಿಗೆ ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಸಿದರೆ, ವೈ–ಫೈ ಸಂಪರ್ಕಿಸಿಕೊಂಡು ಅದರ ಸಂಚಾರದ ಮಾಹಿತಿಯನ್ನು ಆ್ಯಪ್‌ ಸಹಾಯದಿಂದ ಮೊಬೈಲ್ ಅಥವಾ ನಿಮ್ಮ ಕಚೇರಿಯ ಕಂಪ್ಯೂಟರ್‌ನಲ್ಲೇ ಪಡೆಯಬಹುದು. ಅಲ್ಲದೇ, ವಾಹನದ ವೇಗ, ತೈಲ ಪ್ರಮಾಣ, ಅಪಘಾತ ಸಂಭವಿಸಿದರೆ ಮಾಹಿತಿ ರವಾನೆ ಮಾಡುತ್ತದೆ. ಈ ತಂತ್ರಜ್ಞಾನವನ್ನು ಕೆಲವು ಶಾಲಾ ಬಸ್‌, ವಾಣಿಜ್ಯ ವಾಹನ, ಸರ್ಕಾರದ ಕೆಲವು ವಾಹನಗಳಿಗೆ ಅಳವಡಿಸಿಕೊಂಡು ಯಶಸ್ಸು ಕಂಡವರು ಹಲವರು ಇದ್ದಾರೆ. ಇದೇ ರೀತಿ ಸರ್ಕಾರಿ ವಾಹನಗಳಿಗೂ ತಂತ್ರಜ್ಞಾನ ಅಳಡಿಸಿದರೆ ಉಪಯೋಗ ಆಗಲಿದೆ ಎನ್ನುತ್ತಾರೆ ಅವರು.

ಈ ಬಾರಿ ಚುನಾವಣೆಯಲ್ಲಿ ಚೆಕ್‌ಪೊಸ್ಟ್‌ಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಕೆಲಸ ಸಿಕ್ಕಿದೆ. ಎಲ್ಲ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಒಂದೇ ಪರದೆಯಲ್ಲಿ ನೋಡುವಂತೆ ಮಾಡಲಾಗಿದೆ. ಅಲ್ಲದೇ, ಕ್ಯಾಮೆರಾ ಸೆರೆ ಹಿಡಿಯುವ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದಾಗಿದೆ. ಹೊಸ ತಂತ್ರಜ್ಞಾನದ ಪಿಟಿಝಡ್‌ ಕ್ಯಾಮೆರಾ ಅಳವಡಿಸಿದರೆ, ವೈ–ಫೈ ಹಾಗೂ ಆ‌್ಯಪ್‌ ಸಹಾಯದಿಂದ ಮನೆಯ ದೃಶ್ಯಾವಳಿಯನ್ನು ನೋಡಬಹುದು. ನೀವು ದೂರದ ಊರಿನಲ್ಲಿದ್ದರೂ ವೀಕ್ಷಿಸಬಹುದಾದ ತಂತ್ರಜ್ಞಾನಗಳು ಮಾರುಕಟ್ಟೆಗೆ ಬಂದಿವೆ ಎಂದು ರಾಘವೇಂದ್ರ ಹೇಳುತ್ತಾರೆ

ಈಚೆಗೆ ವಾಹನ ಕಳವು, ಇಂಧನ ಕದಿಯುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದಾಗಿ ಜನರು ತಮ್ಮ ವಾಹನದ ಕುರಿತು ಚಿಂತೆಯಲ್ಲಿ ಇರುತ್ತಾರೆ. ಅದಕ್ಕಾಗಿ ಉತ್ತಮ ಗುಣಮಟ್ಟದ ಜಿಪಿಎಸ್‌ ಅಳವಡಿಸಬಹುದು. ಇದಕ್ಕೆ ಒಂದು ವರ್ಷ ಅಂತರ್ಜಾಲ ಸೇವೆ ಉಚಿತವಾಗಿರುತ್ತದೆ ಎಂದು ತಿಳಿಸಿದರು.

ಈ ತಂತ್ರಜ್ಞಾನವನ್ನು ನಮ್ಮ ಹಾವೇರಿ ಹಾಗೂ ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಉದ್ದೇಶದಿಂದ ನಾವು ಹಾವೇರಿಯಲ್ಲಿ ಉದ್ಯಮ ಆರಂಭಿಸಿದ್ದೇವೆ. ಯುವಜನತೆ ಇತ್ತ ಚಿತ್ತ ಹರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.