ADVERTISEMENT

ವಿಜಯನಗರ ಅರಸರ ಕಾಲದಲ್ಲಿ ಕುದುರೆ ಪಳಗಿಸುತ್ತಿದ್ದ ಗ್ರಾಮ ‘ರಾಹುತನಕಟ್ಟಿ’

ವಿಜಯನಗರ ಅರಸರ ಭೇಟಿಯ ಕುರುಹು: ದುರ್ಗಮ್ಮನ ಜಾತ್ರೆಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:30 IST
Last Updated 29 ಜನವರಿ 2022, 19:30 IST
ರಾಹುತನಕಟ್ಟಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ
ರಾಹುತನಕಟ್ಟಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ   

ರಾಣೆಬೆನ್ನೂರು:ವಿಜಯನಗರದ ಸಮ್ರಾಜ್ಯದ ಕಾಲಘಟ್ಟದಲ್ಲಿ ರಾಜ ಮಹಾರಾಜರು ಸೈನ್ಯದೊಂದಿಗೆ ಐರಾವತ ಕ್ಷೇತ್ರ ಐರಣಿ ಕೋಟೆಗೆ ಪ್ರವಾಸ ಮಾಡುವಾಗ ತಾಲ್ಲೂಕಿನ ರಾಹುತನಕಟ್ಟಿ ಗ್ರಾಮದ ಇರುವ ಶಿಬಾರ ಕಟ್ಟಿ, ಭರಮದೇವರಕಟ್ಟೆ, ಬೀರಪ್ಪನ ಕಟ್ಟೆಗಳ ಬಳಿ ರಾಜರು ಆನೆ ಅಂಬಾರಿ, ಸೈನಿಕರು ರಥಗಳನ್ನು ನಿಲ್ಲಿಸಿ ಕೆಲ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದರು.

ಇಲ್ಲಿ ಗಂಗನಾಯಕನ ಕಟ್ಟೆ ಮತ್ತು ಹೊಂಡದಕಟ್ಟಿ ಎರಡು ದೊಡ್ಡ ಕೆರೆಗಳಿದ್ದವು. ಗ್ರಾಮದ ಸಮೀಪದಲ್ಲಿಯೇ ವರ್ಷವಿಡೀ ಹಳ್ಳ ಹರಿಯುತ್ತಿತ್ತು.ಕುದುರೆ, ಆನೆ, ಒಂಟೆಗಳಿಗೆ ನೀರು ಕುಡಿಸಲು ಕಟ್ಟೆಯ ಸುತ್ತಲೂ ಕಟ್ಟುತ್ತಿದ್ದರು.

ಕುದುರೆ ಆಡಿಸುವ ರಾಹುತ ಮತ್ತು ಆನೆ ಪಳಗಿಸುವ ಮಾವುತ ಇಬ್ಬರೂ ಈ ಕೆರೆಯಲ್ಲಿ ಚೆನ್ನಾಗಿ ಆನೆ ಮತ್ತು ಕುದುರೆಗಳನ್ನು ಪಳಗಿಸುತ್ತಿದ್ದರು. ರಾಹುತ ತನ್ನ ಕೈಚಳಕದಿಂದ ಕುದುರೆಗಳನ್ನು ಆಡಿಸುತ್ತಿದ್ದನು. ಅದಕ್ಕೆ ‘ರಾಹುತನಕಟ್ಟಿ’ ಎಂದು ಹೆಸರು ಬಂದಿತು ಎಂಬ ಪ್ರತೀತಿ ಇದೆ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ವಿನಾಯಕ ಗುತ್ತೆಪ್ಪ ಗುಡಿಹಿಂದ್ಲವರ.

ADVERTISEMENT

ಸ್ವಾತಂತ್ರ್ಯಯೋಧ ದಿ.ಹನುಮಂತಪ್ಪ ತುಮ್ಮಿನಕಟ್ಟಿ ಇದೇ ಗ್ರಾಮದವರು. ಈ ಭಾಗದ ಜನರಿಗೆ ದೇಶದ ಸ್ವಾತಂತ್ರ್ಯದ ಪರಿಕಲ್ಪನೆ ತಂದು ಕೊಟ್ಟವರು.

‘ಉಳುವವನೇ ಭೂ ಒಡೆಯ’

ಶೃಂಗೇರಿ ಮಠದ ಜಮೀನನ್ನು ತಾಲ್ಲೂಕಿನ ಉದಗಟ್ಟಿ, ಹೀಲದಹಳ್ಳಿ, ರಾಹುತನಕಟ್ಟಿ, ಮೇಡ್ಲೇರಿ ಕೆಲ ಭಾಗಗಳ ರೈತರು ಉಳುಮೆ ಮಾಡುತ್ತಿದ್ದರು. ಶೃಂಗೇರಿ ಮಠದ ಶಾಖಾ ಮಠವಾದ ಉದಗಟ್ಟಿ ಗ್ರಾಮದಿಂದ ಜಮೀನಿನ ಚಂದಾ ವಸೂಲಿಗೆ ಕೂಡ ಬರುತ್ತಿದ್ದರು. ಕಾಲ ಕ್ರಮೇಣ ಸರ್ಕಾರ ‘ಉಳುವವನೇ ಭೂ ಒಡೆಯ’ ಕಾನೂನು ಜಾರಿಗೆ ತಂದ ಮೇಲೆ ರೈತರ ಹೆಸರಿನಲ್ಲಿ ಉಳಿದವು ಎನ್ನುತ್ತಾರೆ ಗ್ರಾಮಸ್ಥ ತಾನಾಜಿ ಹನುಮಂತಪ್ಪ ತುಮ್ಮಿನಕಟ್ಟಿ.

ದುರ್ಗಮ್ಮನ ಜಾತ್ರೆ:ಆಂಜನೇಯ, ದುರ್ಗಮ್ಮ, ಹಿರೇಕೆರೂರು ದುರ್ಗಮ್ಮ, ಭರಮಪ್ಪ, ಬಸವಣ್ಣ, ಕುಂಕಲಮ್ಮ, ಗಾಳೆಮ್ಮ, ಮಾತಂಗೆಮ್ಮ, ಯಲ್ಲಮ್ಮ ಚೌಡಮ್ಮನ ದೇವಾಲಯಗಳು ಹಾಗೂ ಯುಗಾದಿ ಹಬ್ಬದಲ್ಲಿ ಆಂಜನೇಯ ದೇವರ ರಥೋತ್ಸವ, ಪ್ರತಿ ವರ್ಷ ದುರ್ಗಮ್ಮನ ಜಾತ್ರೆ ಮತ್ತು ಐದು ವರ್ಷಕ್ಕೊಮ್ಮೆ ಚೌಡೇಶ್ವರಿ ಮತ್ತು ದುರ್ಗಮ್ಮನ ಜಾತ್ರೆ ನಡೆಯುತ್ತದೆ.

ಮೂಲೆ ಸೇರಿದ ಕೈ ಮಗ್ಗಗಳು:ರಾಹುತನಕಟ್ಟಿ ಗ್ರಾಮದಲ್ಲಿಕುರುಬ ಜನಾಂಗದವರು ಹೆಚ್ಚಾಗಿದ್ದು, ಕೃಷಿಯೊಂದಿಗೆ ಕುರಿ ಸಾಕಾಣಿಕೆ ಉಪಕಸುಬಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಕಚ್ಚಾ ಉಣ್ಣೆಯನ್ನು ಖರೀದಿ ಮಾಡುತ್ತಿದ್ದರು. ಮಹಿಳೆಯರು ರಾಟೆಯಿಂದ ನೂಲು, ಕುಕ್ಕಡಿ ತೆಗೆಯುತ್ತಿದ್ದರು. ಪುರುಷರು ಕೈಮಗ್ಗದಿಂದ ಕಂಬಳಿ ನೇಯುತ್ತಿದ್ದರು.

‘ಈಗ ಹೊರ ರಾಜ್ಯದ ಪಾಣಿಪತ್‌ ಹಾಗೂ ಚಳ್ಳಕೆರೆ ಪವರ್‌ಲೂಮ್‌ನಿಂದ ತಯಾರಿಸಿದ ಮತ್ತು ಅತ್ಯಂತ ಕಡಿಮೆ ದರಕ್ಕೆ ಸಿಗುವ ಕಂಬಳಿಗಳ ಮಾರಾಟದ ಭರಾಟೆಯಿಂದ ಕೈ ಮಗ್ಗಗಳ ಪರಿಕರಗಳು, ರಾಟಿ ಎಲ್ಲ ಮೂಲೆ ಸೇರಿವೆ. ಈಗ ಸದ್ಯ ನಾಲ್ಕೈದು ಮನೆತನದವರು ಮಾತ್ರ ಕಂಬಳಿ ನೇಯ್ಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಮಂಜಪ್ಪ ಬಾಗಲದವರ.

‘ಸರ್ಕಾರ ಗ್ರಾಮೀಣ ಭಾಗದ ಯುವಕರಿಗೆ ಕಂಬಳಿ ನೇಯ್ಗೆಯ ಬಗ್ಗೆ ಹೊಸ ತಾಂತ್ರಿಕತೆ ಮತ್ತು ಕೌಶಲ ತರಬೇತಿ ನೀಡಬೇಕು. ಕಡಿಮೆ ದರದಲ್ಲಿ ಸಾಲ ಸೌಲಭ್ಯ ನೀಡಿ ಕಂಬಳಿ ನೇಯ್ಗೆಗೆ ಪ್ರೋತ್ಸಾಹ ನೀಡಬೇಕು’ ಎನ್ನುತ್ತಾರೆ ಯುವ ರೈತ ಮುಖಂಡ ದಿಳ್ಳೆಪ್ಪ ಕರಿಯಪ್ಪ ಕಂಬಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.