ADVERTISEMENT

ಮಳೆ ಆರ್ಭಟ: ಹಿಂಗಾರು ಬೆಳೆ ಹಾನಿ

ರೈತರ ನಿರೀಕ್ಷೆ ನಿರಾಸೆ; ಸಂಕಷ್ಟದಲ್ಲಿ ಅನ್ನದಾತರ ಕುಟುಂಬಗಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 5:56 IST
Last Updated 26 ಅಕ್ಟೋಬರ್ 2025, 5:56 IST
ಶಿಗ್ಗಾವಿ ಪಟ್ಟಣದ ಜಮೀನಿನಲ್ಲಿ ಬೆಳೆದ ಹಿಂಗಾರು ಜೋಳದ ಬೆಳೆಯಲ್ಲಿ ನೀರು ನುಗ್ಗಿ ಹಾನಿಯಾಗಿದೆ
ಶಿಗ್ಗಾವಿ ಪಟ್ಟಣದ ಜಮೀನಿನಲ್ಲಿ ಬೆಳೆದ ಹಿಂಗಾರು ಜೋಳದ ಬೆಳೆಯಲ್ಲಿ ನೀರು ನುಗ್ಗಿ ಹಾನಿಯಾಗಿದೆ   

ಶಿಗ್ಗಾವಿ: ಮುಂಗಾರು ಮಳೆ ಸತತವಾಗಿ ಸುರಿದ ಹಿನ್ನೆಲೆಯಲ್ಲಿ ಬೆಳೆಗಳು ನೀರು ಪಾಲಾಗಿದ್ದು  ನಿರೀಕ್ಷೆಯಷ್ಟು ಬೆಳೆ ಬಾರದೆ ರೈತರಿಗೆ ಹಾನಿಯಾಗಿದೆ. ಈಗ ಹಿಂಗಾರು ಬೆಳೆಯೂ ಕೈಗೆ ಬಾರದಂತಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಚೆಗೆ ಸುರಿದ ಹಿಂಗಾರು ಮಳೆಯಿಂದ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಬೆಳೆಗಳು ಮೊಳಕೆಯೊಡೆದು ನೆಲಕಚ್ಚಿವೆ. ಮಳೆ ಆರ್ಭಟ ಹೆಚ್ಚಾಗಿದ್ದು, ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಬೆಳೆಗಳು ಜಲಾವೃತ್ತಗೊಂಡಿವೆ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಮಾಡಿರುವ ಸಾಲ ತೀರಿಸುವುದು ಹೇಗೆ, ಬದುಕು ನಡೆಸುವುದು ಹೇಗೆ ಎಂಬ ಚಿಂತೆ ಅನ್ನದಾತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ ಒಟ್ಟು 37.515 ಹೆಕ್ಟೇರ್ ಭೂಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, ಅದರಲ್ಲಿ 2.5 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ, ಇನ್ನುಳಿದ 35.15 ಸಾವಿರ ಹೆಕ್ಟೇರ್ ಭೂಪ್ರದೇಶ ಸಂಪೂರ್ಣ ಒಣ ಬೇಸಾಯ(ಮಳೆಯಾಶ್ರಿತ) ಒಳಗೊಂಡಿದೆ. ಹೀಗಾಗಿ ಮಳೆಯಾಶ್ರಿತ ಭೂಪ್ರದೇಶ ಹೊಂದಿರುವ ರೈತ ಸಮೂಹದ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗಿದೆ. ಮುಂಗಾರಿನ ಪ್ರಮುಖ ಬೆಳೆಗಳಾದ ಸೋಯಾಬಿನ್, ಶೇಂಗಾ, ಭತ್ತ, ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ಮಳೆಗೆ ಸಿಲುಕಿ ನಾಶವಾಗಿವೆ.

ADVERTISEMENT

ಮುಂಗಾರು ಹಾನಿಯಾದರೂ, ಹಿಂಗಾರು ಬೆಳೆ ಉತ್ತಮವಾಗಿ ಬರಬಹುದು ಎಂಬ ರೈತರ ಆಸೆಗೆ ನಿರಾಸೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಮುಂಗಾರು, ಹಿಂಗಾರು ಎರಡು ಬೆಳೆಗಳು ಮಳೆ ನೀರಿಗೆ ತುತ್ತಾಗಿವೆ. ಹಿಂಗಾರು ಬೆಳೆಗಳಾದ ಕಡಲೆ, ಗೋಧಿ, ಜೋಳ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳೂ ಹಾನಿಯಾಗಿವೆ. ಮಳೆ ಹಾನಿ, ಬೆಳೆ ವಿಮೆ ಪರಿಹಾರಧನ ವಿತರಿಸಬೇಕು ಎಂದು ರೈತರ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಸಿಗದಂತಾಗಿದೆ. ವರ್ಷ ವಿಡೀ ದುಡಿದರು ದುಡಿಮೆಗೆ ತಕ್ಕ ಫಲ ಸಿಗಲಿಲ್ಲ.  ಕುಟುಂಬದ ನಿರ್ವಹಣೆ ಕಷ್ಟವಾಗಿದೆ ಎಂದು ರೈತ ಮುಖಂಡ ದೇವೇಂದ್ರಪ್ಪ ಹಳವಳ್ಳಿ, ಮಾಲತೇಶ ಸಕ್ರಿ ಆತಂಕ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣ ಮುಂಗಾರು, ಹಿಂಗಾರು ಬೆಳೆ ಹಾನಿ, ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ಬಿತ್ತನೆ ಸಂದರ್ಭದಲ್ಲಿ ಹಾನಿ ಮತ್ತು ಬೆಳೆ ನಷ್ಟವನ್ನು ಸ್ಥಳಕ್ಕೆ ಬಂದು ಪರಿಶೀಲಿಸಿ, ಸಮೀಕ್ಷೆ ನಡೆಸಿ ಪರಿಹಾರ ಧನ ನೀಡಬೇಕು. ಸರ್ಕಾರವಿಶೇಷ ಪ್ಯಾಕೇಜ್ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಹಿರೇಮಲ್ಲೂರ ರೈತರಾದ ಶಂಕರಗೌಡ ಪಾಟೀಲ, ಮಂಜುನಾಥ ಕಂಕನವಾಡ ಆಗ್ರಹಿಸಿದರು.

‘ಸರ್ಕಾರಕ್ಕೆ ವರದಿ ಸಲ್ಲಿಕೆ’

ಮುಂಗಾರು ಬೆಳೆ ಹಾನಿ ಬೆಳೆ ವಿಮೆ ಸಮೀಕ್ಷೆ ನಡೆಸಿ ಪರಿಹಾರಧನ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಹಿಂಗಾರು ಹಾನಿ ಕಂಡು ಬಂದರೆ ತಕ್ಷಣ ಈ ಕುರಿತು ಸಮೀಕ್ಷೆ ನಡೆಸಿ  ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.