ರಟ್ಟೀಹಳ್ಳಿ: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕುಮಧ್ವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.
ರಟ್ಟೀಹಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲಿವಾಳ, ಚಪ್ಪರದಹಳ್ಳಿ ಗ್ರಾಮಗಳ ಮಧ್ಯೆ ಇರುವ ಸೇತುವೆ ಶುಕ್ರವಾರ ಮುಳಗಡೆಯಾಗಿದ್ದು, ಯಲಿವಾಳ, ಚಪ್ಪರದಹಳ್ಳಿ ಗ್ರಾಮಕ್ಕೆ ತೆರಳುವ ಏಕೈಕ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ತೋಟಗಂಟಿ ಹಾಗೂ ರಟ್ಟೀಹಳ್ಳಿ ಮಧ್ಯೆ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ನದಿಯ ನೀರು ಹರಿಯುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್ ಅಧಿಕಾರಿಗಳು ಸೇತುವೆ ಎರಡು ಕಡೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು, ವಾಹನ ಸವಾರರು ಸಂಚರಿಸದಂತೆ ಬಿಗಿ ಕ್ರಮಕೈಗೊಂಡಿದ್ದಾರೆ.
ಮಳೆಮಲ್ಲೇಶ್ವರ ದೇವಸ್ಥಾನದ ಹತ್ತಿರ ನದಿ ದಂಡೆಯಲ್ಲಿರುವ ಈಶ್ವರ ದೇವಸ್ಥಾನ ಹಾಗೂ ಮಾರುತಿ ದೇವಸ್ಥಾನಗಳು ಅರ್ಧಭಾಗ ಮುಳುಗಿವೆ. ನದಿ ದಂಡೆಯಲ್ಲಿರುವ ಜಮೀನುಗಳಲ್ಲಿನ ಬಾಳೆ, ಅಡಿಕೆ ತೋಟಗಳು ಅಕ್ಷರಶಃ ನದಿಯಲ್ಲಿ ನಿಂತಿವೆ. ವಿದ್ಯುತ್ ಕಂಬಗಳು ಅರ್ಧಕ್ಕೂ ಹೆಚ್ಚು ಭಾಗ ಮುಳಗಿದ ಸ್ಥಿತಿ ತಲುಪಿವೆ.
ಸಾರ್ವಜನಿಕರು, ವಿದ್ಯಾರ್ಥಿಗಳು, ನದಿ ಅಕ್ಕ-ಪಕ್ಕದ ನಿವಾಸಿಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಮಕ್ಕಳನ್ನು ನದಿಯ ಹತ್ತಿರ ಹೋಗದಂತೆ ಪೋಷಕರು ನಿಗಾ ವಹಿಸಿಬೇಕು. ನದಿ ಮತ್ತು ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರಿನ ಮಟ್ಟ ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿದ್ದು, ದನ, ಕರುಗಳು ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಲ್ಲೂಕು ದಂಡಾಧಿಕಾರಿ ಕೆ.ಗುರುಬಸವರಾಜ ತಿಳಿಸಿದ್ದಾರೆ.
ಸತತ ಮಳೆಗೆ ಮೈದುಂಬಿದ ಬೆಣ್ಣೆ ಹಳ್ಳ
ತಡಸ (ಶ್ಯಾಡಂಬಿ): ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮದ ಸುತ್ತ ಮುತ್ತಲಿನ ಕೆರೆ ಕಟ್ಟೆ ಹೊಂಡಗಳು ತುಂಬಿದ್ದು, ಶ್ಯಾಡಂಬಿ ಕುನ್ನೂರು ಮಾರ್ಗದಲ್ಲಿರುವ ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹೊಸೂರು ಗ್ರಾಮದ ಸಾಮಾನ್ಯ ತಿಪ್ಪೆ ಗುಂಡಿಯಿಂದ ಉಗಮವಾಗುವ ಬೆಣ್ಣೆ ಹಳ್ಳವು, ಹೊಸೂರು, ಎತ್ತಿನಹಳ್ಳಿ, ಶೀಲವಂತ ಸೋಮಪುರ, ಮಡ್ಲಿ, ಕುನ್ನೂರು, ಅಡವಿಸೋಮಪುರ, ಹೊನ್ನಾಪುರ, ಮಾರ್ಗವಾಗಿ ಧಾರವಾಡ ಜಿಲ್ಲೆಯ ಕುಂದಗೋಳ, ನವಲಗುಂದ, ನರಗುಂದ ಅಣ್ಣಿಗೇರಿ, ರೋಣ ತಾಲ್ಲೂಕಿನಲ್ಲಿ ಹರಿದು ಮಲಪ್ರಭಾ ನದಿ ಸೇರುತ್ತದೆ.
‘ಪ್ರತಿವರ್ಷವೂ ಬೆಣ್ಣೆ ಹಳ್ಳ ಅಪಾರ ಪ್ರಮಾಣದ ರೈತರ ಹೊಲ ಗದ್ದೆಗಳಿಗೆ ಹಾನಿ ಉಂಟು ಮಾಡುವ ಮಾಹಿತಿ ಅಧಿಕಾರಿಗಳಿಗೆ ಇದ್ದರು ಯಾವುದೇ ರೀತಿಯ ಬೃಹತ್ ಪ್ರಮಾಣದ ಯೋಜನೆ ಇಲ್ಲಿವರೆಗೂ ಅನುಷ್ಠಾನಗೊಂಡಿಲ್ಲ’ ಎಂದು ರೈತ ಪ್ರವೀಣ ಕರೆಪ್ನವರ್ ವಿಷಾದದಿಂದ ಹೇಳುತ್ತಾರೆ.
‘ಬೆಣ್ಣೆ ಹಳ್ಳ ಅತಿಯಾದ ಹೊಳಿನಿಂದ ತುಂಬಿದ್ದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೊಳೆತ್ತುವ ಕಾರ್ಯ ಮಾಡದೇ ಇರುವುದರಿಂದ ನೀರು ವ್ಯರ್ಥ್ಯವಾಗಿ ಹರಿದು ಹೋಗುತ್ತದೆ. ಬೇಸಿಗೆಯಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ, ದನಕರುಗಳಿಗೆ ನೀರಿನ ತೊಂದರೆ ಆಗುತ್ತಿದ್ದು, ಮುಂದಿನ ಬೇಸಿಗೆಯಲ್ಲಾದರೂ ಬೆಣ್ಣಿಹಳ್ಳಕ್ಕೆ ಪುನಶ್ಚೇತನ ಕಾರ್ಯ ನಡೆಯಲಿ’ ಎಂದು ಕರ್ನಾಟಕ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವರುಣ ಗೌಡ ಪಾಟೀಲ್ ಆಗ್ರಹಿಸಿದರು.
ಸಮಗ್ರ ರೀತಿಯಲ್ಲಿ ಬೆಣ್ಣೆ ಹಳ್ಳ ಕಾಮಗಾರಿ ಆದರೆ ಸುತ್ತ ಮುತ್ತಲಿನ ಸಾವಿರಾರು ರೈತರು ಬೇಸಿಗೆಯಲ್ಲಿ ನೀರಾವರಿ ಕೃಷಿ ಮಾಡಲು ಅನುಕೂಲವಾಗುತ್ತದೆ, ಧುಂಡಶಿ ಹೋಬಳಿಯ ದೊಡ್ಡ ಮಟ್ಟದ ನೀರಾವರಿ ಯೋಜನೆ ಇದಾಗಿದ್ದು, ಸರ್ಕಾರ ಅನುಷ್ಠಾನ ಮಾಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ರೈತ ರುದ್ರಪ್ಪ ಕಾಳಿ ದೂರಿದರು.
ಜಮೀನಿಗೆ ನುಗ್ಗಿದ ವರದೆ
ಗುತ್ತಲ: ಸಮೀಪದ ಬೆಳವಗಿ ಗ್ರಾಮದ ಹತ್ತಿರ ವರದಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಬೆಳವಗಿ ಗ್ರಾಮದ ಹತ್ತಿರ ವರದಾ ನದಿಯ ಅಡ್ಡಲಾಗಿ ಕಟ್ಟಿರುವ ಸೇತುವೆಗೆ ನೀರು ಅಪ್ಪಳಿಸುತ್ತಿದೆ. ಈಗಾಗಲೇ ವರದಾ ನದಿಯ ದಡದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಬ್ಬು ಶೇಂಗಾ ಗೋವಿನಜೋಳ ಸೇರಿದಂತೆ ಇನ್ನೂ ಹಲವಾರು ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತಿದ ಬೆಳೆ ನೀರಿನಲ್ಲಿ ಸಂಪೂರ್ಣ ಮುಳುಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಮಳೆಗೆ 12 ಮನೆ ನೆಲಸಮ
ರಟ್ಟೀಹಳ್ಳಿ: ನಿರಂತರ ಮಳೆಯಿಂದಾಗಿ ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 12 ಮನೆಗಳು ನೆಲಕಚ್ಚಿವೆ. ತಾಲ್ಲೂಕಿನ ಸಣ್ಣಗುಬ್ಬಿ ಗ್ರಾಮದಲ್ಲಿ 3 ಮನೆಗಳು ಮಕರಿ ಮೇದೂರು ಖಂಡೇಬಾಗೂರು ಹುಲ್ಲತ್ತಿ ಗಂಗಾಯಿಕೊಪ್ಪ ಲಿಂಗದೇವರಕೊಪ್ಪ ತಿಪ್ಪಾಯಿಕೊಪ್ಪ ಮಳಗಿ ಮಾಸೂರು ಗ್ರಾಮಗಳಲ್ಲಿ ತಲಾ 1 ಮನೆಗಳು ಬಿದ್ದಿವೆ. ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಶಾಲಾ ಕೊಠಡಿಯ ಗೋಡೆ ಬಿದ್ದಿದೆ. ತರಗತಿ ನಡೆಯುವ ಸಮಯವಾಗಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಆದರೆ ಆದೃಷ್ಟವಶಾತ್ ಮಳೆಯಿಂದ ನೆನೆದು ಗೋಡೆ ರಾತ್ರಿ ಬಿದ್ದಿರುವುದರಿಂದ ಯಾವುದೇ ತೊಂದರೆಯಾಗಿರುವುದಿಲ್ಲ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಆಡಳಿತಾಧಿಕಾರಿಗಳು ಪಿಡಿಒ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.