ADVERTISEMENT

ಸರ್ಕಾರ ರೈತರ ಸಮಸ್ಯೆಗೆ ಪರಿಹಾರ ನೀಡಲಿ: ರಾಮಣ್ಣ ಕೆಂಚಳ್ಳೇರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:06 IST
Last Updated 12 ಫೆಬ್ರುವರಿ 2026, 6:06 IST
ರಟ್ಟೀಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಸಭೆ ನಡೆಯಿತು 
ರಟ್ಟೀಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಸಭೆ ನಡೆಯಿತು    

ರಟ್ಟೀಹಳ್ಳಿ: ‘ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಜಿಲ್ಲಾ ಘಟಕ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಪ್ರಶ್ನಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತಮುಖಂಡರೊಂದಿಗೆ ಬುಧವಾರ ಸಭೆ ನಡೆಸಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಕಾರಣ ರೈತರ ಮಕ್ಕಳು ಕೃಷಿ ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶೇ 72ರಷ್ಟು ಇದ್ದ ಕೃಷಿಕರ ಸಂಖ್ಯೆ ಶೇ 46ಕ್ಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದರು.

ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ದುಬಾರಿ ವೆಚ್ಚದಲ್ಲಿ ಖರೀದಿಸಿ, ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯದಿದ್ದಾಗ ರೈತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಿದ್ದಾನೆ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳ ಬೆಳೆದಿದ್ದು, ಪ್ರತಿ ಕ್ವಿಂಟಲ್‌ಗೆ ₹1600ರಂತೆ ಮಾರಾಟ ಮಾಡಿ ರೈತರು ನೂರಾರು ಕೋಟಿ ಹಾನಿ ಅನುಭವಿಸಿದ್ದಾರೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸುತ್ತೇವೆ ಎಂದು ಸುಳ್ಳು ಹೇಳಿ ರೈತರಿಗೆ ಅನ್ಯಾಯ  ಮಾಡಿದೆ. ಹೀಗಿರುವಾಗ ಸರ್ಕಾರ ಹಾವೇರಿಯಲ್ಲಿ ಫೆ.14ರಂದು ಸಾಧನಾ ಸಮಾವೇಶ ಮಾಡುತ್ತಿದ್ದು, ಕಪ್ಪುಪಟ್ಟಿ ಪ್ರದರ್ಶನ ಮಾಡುತ್ತೇವೆ’ ಎಂದು ತಿಳಿಸಿದರು. 

ADVERTISEMENT

ಫೆ.13ರಂದು ನಂಜುಂಡಸ್ವಾಮಿ ಅವರ 90ನೇ ಜನ್ಮದಿನವನ್ನು ಬ್ಯಾಡಗಿ ಪಟ್ಟಣದ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ಆಚರಿಸಲಾಗುತ್ತದೆ. ಜಿಲ್ಲೆಯ ಎಲ್ಲ ತಾಲ್ಲೂಕು, ಗ್ರಾಮಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ರೈತ ಮುಖಂಡರಾದ ಬಸನಗೌಡ ಗಂಗಪ್ಪನವರ, ಶಂಭಣ್ಣ ಮುತ್ತಗಿ, ಮಲ್ಲನಗೌಡ ಮಾಳಗಿ, ಎ.ಆರ್. ಮಣಕೂರ, ಮಂಜನಗೌಡ ಸಣ್ಣಗೌಡ್ರ, ಚಂದ್ರಪ್ಪ ಅಂಗಡಿ, ಹಾಲಪ್ಪ ಮಡಿವಾಳರ ಸೇರಿದಂತೆ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.