ADVERTISEMENT

ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ಸ್ವಾಮೀಜಿ ಹೆಸರು: ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:16 IST
Last Updated 4 ಫೆಬ್ರುವರಿ 2026, 7:16 IST
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ   

ಹಾವೇರಿ: ‘ಜಿಲ್ಲೆಯ ಹಾನಗಲ್‌ ಪಟ್ಟಣದಲ್ಲಿರುವ ಕುಮಾರೇಶ್ವರ ವಿರಕ್ತಮಠದ ಪೀಠಾಧಿಪತಿಯೂ ಆಗಿರುವ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು, ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ತಮ್ಮ ಹೆಸರು ಸೇರಿಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ’ ಎಂದು ಹೊಸಳ್ಳಿ ಗ್ರಾಮದ ರವೀಂದ್ರ ಶಿವಮೂರ್ತೆಪ್ಪ ಚಿಕ್ಕೇರಿ ಅವರು ಆರೋಪಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ಸ್ವಾಮೀಜಿ ವಿರುದ್ಧ ಹಾನಗಲ್ ಠಾಣೆ ಪೊಲೀಸರಿಗೆ ದೂರು ನೀಡಿರುವ ಅವರು, ‘ಭಕ್ತರಿಂದ ಬಂದ ಕಾಣಿಕೆ ಹಾಗೂ ದೇಣಿಗೆ ರೂಪದಲ್ಲಿ ಬಂದ ಬೆಲೆಬಾಳುವ ವಸ್ತುಗಳನ್ನು ಸ್ವಾಮೀಜಿ ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ದೂರಿದ್ದಾರೆ.

‘ಹಾನಗಲ್ ಪಟ್ಟಣದಲ್ಲಿ 18ನೇ ಶತಮಾನದಲ್ಲಿ ಸದಾಶಿವ ಕುಮಾರ ಸ್ವಾಮಿ ಅವರು ವಿರಕ್ತಮಠ ಸ್ಥಾಪಿಸಿದ್ದಾರೆ. ಈ ಮಠವು ಹಲವು ಶಾಖಾ ಮಠದ ಜೊತೆ ಸ್ಥಿರಾಸ್ತಿಗಳನ್ನು ಹೊಂದಿದೆ. ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ–1950ರ ಅಡಿ ನೋಂದಣಿಯೂ ಆಗಿದೆ. ಹಾನಗಲ್‌ನ ಹಳೇ ಕೋಟೆ ಪ್ರದೇಶದ ಆಸ್ತಿ, ಪುರಸಭೆಯ ಆಸ್ತಿ, ಬೆಳಗಾಲಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿಗಳು ವಿರಕ್ತಮಠದ ಅಧೀನದಲ್ಲಿವೆ. ಇದೇ ಮಠಕ್ಕೆ 1985 ಜನವರಿ 31ರಂದು ಕುಮಾರ ಸ್ವಾಮಿ ಅವರನ್ನು ಪೀಠಾಧಿಪತಿಯಾಗಿ ನೇಮಿಸಲಾಗಿದೆ. ಇವರನ್ನು, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಗಿ 1986ರ ಏಪ್ರಿಲ್ 17ರಂದು ನೇಮಕ ಮಾಡಲಾಗಿದೆ’ ಎಂದು ರವೀಂದ್ರ ಚಿಕ್ಕೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಮಠದ ಸಂಪುಟ ಪತ್ರದ ಪ್ರಕಾರ, ಮಠಗಳ ಆಸ್ತಿಗಳಿಗೆ ಸಂಬಂಧಿಸಿ ವ್ಯವಹರಿಸಲು ಮಠಾಧೀಶರಿಗೆ ಕೆಲ ನಿಬಂಧನೆ ವಿಧಿಸಲಾಗಿದೆ. ಈ ನಿಬಂಧನೆ ಉಲ್ಲಂಘಿಸಿರುವ ಆರೋಪಿತ ಸ್ವಾಮೀಜಿ, ಮಠದ ಆಸ್ತಿಯಾದ ಜಮೀನುಗಳನ್ನು ಬಿನ್ ಶೇತ್ಕಿಯಾಗಿ ಪರಿವರ್ತನೆ ಮಾಡಿಕೊಂಡು ಮಾಲೀಕರ ಸಾಲಿನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. ಆರೋಪಿಯು ಕೇವಲ ಆಸ್ತಿಯ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವ ಅಧಿಕಾರವನ್ನು ಮಾತ್ರ ಹೊಂದಿದ್ದಾರೆ. ವಾರಸುದಾರಿಕೆ ಹೊಂದಿರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಬೆಳಗಾಲಪೇಟೆ ಗ್ರಾಮದ 2 ಎಕರೆ 38 ಗುಂಟೆಯನ್ನು ಗಂಗಾಧರ ಚನ್ನಬಸಪ್ಪ ಹುಗ್ಗಿಶೆಟ್ಟರ ಅವರೊಂದಿಗೆ ವ್ಯವಹಾರ ಮಾಡಿರುವ ಆರೋಪಿತ ಸ್ವಾಮೀಜಿ, ಅವರಿಂದ ₹ 4 ಲಕ್ಷ ಪಡೆದುಕೊಂಡಿದ್ದಾರೆ. ಆ ಹಣವನ್ನು ವಿರಕ್ತಮಠ ಟ್ರಸ್ಟ್‌ ಖಾತೆಗೆ ಜಮೆ ಮಾಡದೇ, ಸ್ವಂತಕ್ಕೆ ಉಪಯೋಗಿಸಿದ್ದಾರೆ. ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿರುವ ಜಾಗವನ್ನು ಕುಮಾರೇಶ್ವರ ಪತ್ತಿನ ಸಹಕಾರಿ ಸಂಘ ಹಾನಗಲ್ ಅವರಿಗೆ ₹ 12,08,795 ಹಣಕ್ಕೆ ಮಾರಿದ್ದಾರೆ. ಇನ್ನೂ ಮುಂತಾದ ಆಸ್ತಿಗಳನ್ನು ಮಾರಾಟ ಮಾಡಿದ್ದಲ್ಲದೇ, ಅದರಿಂದ ಬಂದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ’ ಎಂದು ರವೀಂದ್ರ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.