ADVERTISEMENT

ಹಾವೇರಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಗರಿ

ಸಂಘ–ಸಂಸ್ಥೆ ವಿಭಾಗದಲ್ಲಿ ಅಗಡಿ ತೋಟಕ್ಕೆ ಒಲಿದ ಪ್ರಶಸ್ತಿ: ಶಿಗ್ಗಾವಿ ತಾಲ್ಲೂಕಿಗೆ ಹೆಚ್ಚಿನ ಆದ್ಯತೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 16:24 IST
Last Updated 30 ಅಕ್ಟೋಬರ್ 2022, 16:24 IST
ಶಿಗ್ಗಾವಿ ತಾಲ್ಲೂಕು ಅಗಡಿ ತೋಟದಲ್ಲಿ ಪ್ರವಾಸಿಗರ ಮನರಂಜನೆಯ ಕ್ಷಣ 
ಶಿಗ್ಗಾವಿ ತಾಲ್ಲೂಕು ಅಗಡಿ ತೋಟದಲ್ಲಿ ಪ್ರವಾಸಿಗರ ಮನರಂಜನೆಯ ಕ್ಷಣ    

ಹಾವೇರಿ: ‘ಏಲಕ್ಕಿ ಕಂಪಿನ ನಾಡು’ ಹಾವೇರಿ ಜಿಲ್ಲೆಗೆ 2022ನೇ ಸಾಲಿನಲ್ಲಿ ಒಟ್ಟು ಮೂರು ರಾಜ್ಯೋತ್ಸವ ಪ್ರಶಸ್ತಿಗಳು ದೊರೆತಿರುವುದು ಜಿಲ್ಲೆಯ ಜನರಿಗೆ ಹೆಚ್ಚು ಸಂತಸ ತಂದಿದೆ.

‘ಸಮಾಜ ಸೇವೆ’ ವಿಭಾಗದಲ್ಲಿ ಶಿಗ್ಗಾವಿ ಮೂಲದ ಪ್ರಸ್ತುತ ಹಾವೇರಿ ನಗರದ ನಿವಾಸಿ ಎಂ.ಎಸ್‌.ಕೋರಿಶೆಟ್ಟರ್‌, ‘ರಂಗಭೂಮಿ’ ಕ್ಷೇತ್ರದಲ್ಲಿ ಶಿಗ್ಗಾವಿಯ ಶ್ರೀಶೈಲ ಹುದ್ದಾರ,‘ವೀರಗಾಸೆ’ ವಿಭಾಗದಲ್ಲಿ ರಟ್ಟೀಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪ ಗ್ರಾಮದ ಮಹೇಶ್ವರಗೌಡ ಲಿಂಗದಹಳ್ಳಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ರಾಜ್ಯದ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ–2022 ಅನ್ನು ನೀಡಿದ್ದು, ಸಂಘ–ಸಂಸ್ಥೆ ವಿಭಾಗದಲ್ಲಿ ಶಿಗ್ಗಾವಿ ತಾಲ್ಲೂಕಿನ ಅಗಡಿ ತೋಟಕ್ಕೆ ಪ್ರಶಸ್ತಿ ದೊರೆತಿದೆ.

ADVERTISEMENT

ಅಗಡಿ ತೋಟಕ್ಕೆ ರಾಜ್ಯ ಪ್ರಶಸ್ತಿ

‌ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ಜಯದೇವ ಅಗಡಿಯವರು ನಿರ್ಮಿಸಿದ ಅಗಡಿ ತೋಟವು ಕೃಷಿ ಸಂಪತ್ತಿನ ಗಣಿಯಾಗಿದ್ದು, ಮನರಂಜನೆ ಜೊತೆಗೆ ಗ್ರಾಮೀಣ ಜದುಕಿನ ಸಂಸ್ಕೃತಿ ಪಸರಿಸುವ, ಕೃಷಿ ಕಾಯಕದ ಮಹತ್ವ ಸಾರುವ ಪ್ರಾಕೃತಿಕ ಪ್ರವಾಸಿಗರ ನೆಚ್ಚಿನ ತಾಣವಾಗಿ ಬೆಳೆದು ನಿಂತಿದೆ.

ತೋಟದ ಮಾಲೀಕರಾದ ಜಯದೇವ ಯಲ್ಲಪ್ಪ ಅಗಡಿ ಅವರು 1959ರಲ್ಲಿ ಜನಿಸಿದ್ದು, ಎಂ.ಕಾಂ ಸಾತ್ನಕೋತರ ಪದವಿ ಪಡೆದಿದ್ದಾರೆ. ಕೃಷಿ, ತೋಟಗಾರಿಕೆ, ಅರಣ್ಯ ಕೃಷಿ, ಜೈವಿಕ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಗ್ರಾಮೀಣ ಕೃಷಿ ಪ್ರವಾಸಿ ತಾಣ ಹಾಗೂ ಅತ್ಯಮೂಲ್ಯ ಔಷಧಿ ಸಸ್ಯಗಳ ಸಂರಕ್ಷಣೆ ಮಾಡುತ್ತಿದ್ದಾರೆ.

ಜಯದೇವ ಅಗಡಿ ಅವರು ‘ಕೃಷಿ ಪಂಡಿತ’ ಪ್ರಶಸ್ತಿ, ‘ಕೃಷಿ ರತ್ನ’ ಪ್ರಶಸ್ತಿ, ಜಿಲ್ಲಾ ಮಟ್ಟದ ‘ರಾಜ್ಯೋತ್ಸವ’ ಪ್ರಶಸ್ತಿ, ಅಂತರರಾಷ್ಟ್ರೀಯ ಬಸವ ರತ್ನ’ ಪ್ರಶಸ್ತಿ 2014-15, ಬಾಗಲಕೋಟೆಯ ತೋಟಗಾರಿಕೆ ಕೃಷಿ ವಿಶ್ವವಿದ್ಯಾಲಯದಿಂದ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ –ಸನ್ಮಾನಗಳಿಗೆ ಭಾಜನರಾಗಿದ್ದಾರೆ.

‘ಪ್ರವಾಸೋದ್ಯಮ ಬೆಳವಣಿಗೆಯಿಂದ ದೇಶದ ನಕ್ಷೆಯಲ್ಲಿ ಶಿಗ್ಗಾವಿ ಕ್ಷೇತ್ರ ಗುರುತಿಸಲು ಸಾಧ್ಯವಾಗುತ್ತಿದೆ. ಗ್ರಾಮೀಣ ಸೊಗಡನ್ನು ಪ್ರದರ್ಶಿಸುವ ಮೂಲಕ ಜನರಿಗೆ, ಪ್ರವಾಸಿಗರಿಗೆ ಮನರಂಜನೆ ನೀಡಲಾಗುತ್ತಿದೆ. ಅಂತಹ ತೋಟವನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹರ್ಷ ತಂದಿದೆ’ ಎಂದು ಜಯದೇವ ಅಗತಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.