ADVERTISEMENT

ಅಹಿಂದ ವಿರೋಧಿ ಶಾಸಕ ಪ್ರಕಾಶ ಕೋಳಿವಾಡ: ಅರುಣಕುಮಾರ ವಾಗ್ದಾಳಿ

ಅಭಿವೃದ್ಧಿ ಕಾರ್ಯ ಮಾಡದೇ ಸುಳ್ಳು ಪ್ರಚಾರ: ಮಾಜಿ ಶಾಸಕ ಅರುಣಕುಮಾರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:20 IST
Last Updated 21 ಅಕ್ಟೋಬರ್ 2025, 2:20 IST
ಅರುಣಕುಮಾರ ಪೂಜಾರ, ಮಾಜಿ ಶಾಸಕ
ಅರುಣಕುಮಾರ ಪೂಜಾರ, ಮಾಜಿ ಶಾಸಕ   

ರಾಣೆಬೆನ್ನೂರು: ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಗೆ ಬಿಜೆಪಿ ಕಚೇರಿ ವಿಷಯವನ್ನು ಅಜೆಂಡಾದಲ್ಲಿ ತೆಗೆದುಕೊಳ್ಳದ ಕಾರಣ ನಮ್ಮ ಸದಸ್ಯರು ಒಂದಾಗಿ ಸಭೆ ಬಹಿಸ್ಕರಿಸಿದ್ದಾರೆ, ಹೊರತು ನಗರದ ಅಭಿವೃದ್ಧಿಗೆ ಅಥವಾ ನಗರದ ವಿವಿಧ ವೃತ್ತಗಳಿಗೆ ಧೀಮಂತ ನಾಯಕ ಬಾಬಾ ಸಾಹೇಬ ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾನ್‌ ನಾಯಕರ ಹೆಸರಿನ ನಾಮಕರಣ ಮಾಡುವುದಕ್ಕೆ ಅಲ್ಲ. ಇದಕ್ಕೆ ಈಗಲೂ ನಮ್ಮ ಸಹಕಾರ ಇದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಸ್ಪಷ್ಟಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ನಿಮಗೆ ನಾವೇ ಸಹಕಾರ ನೀಡಿದ್ದೇವೆ. ಈಗ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಿಂದ ನೋಟಿಸ್ ಕೊಡಿಸಿದ್ದರಿಂದ ಬೇಸರ ತಂದಿದೆ. ಬಿಜೆಪಿಗರು ಸಾಮಾನ್ಯಸಭೆಗೆ ಹಾಜರಾಗದೇ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ. ಇವರು ದಲಿತ ವಿರೋಧಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿಸಿದ್ದೀರಿ. ಅಹಿಂದ ಮತ ಪಡೆದು ಶಾಸಕರಾಗಿ ಎರಡು ಬಾರಿ ಅಂಬೇಡ್ಕರ್‌ ಜಯಂತಿಗೆ ತಾವು ಹಾಜರಾಗಿಲ್ಲ. ಹಾಗಾಗಿ ಶಾಸಕರೇ ಅಹಿಂದ ವಿರೋಧಿ ಆಗಿದ್ದಾರೆ ಎಂದು ಆರೋಪಿಸಿದರು.

‘ತಾಲ್ಲೂಕಿನ ಯಾವೊಬ್ಬ ಅಹಿಂದ ನಾಯಕರನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಿದ್ದೀರಿ, ಕ್ಷೇತ್ರದ ಶಾಸಕರಾಗಿ 2 ವರ್ಷ ಕಳೆದಿದೆ. ಏನೂ ಅಭಿವೃದ್ಧಿ ಮಾಡಿದ್ದೀರಿ ತೋರಿಸಿಕೊಡಿ. ನಮ್ಮ ಅವಧಿಯಲ್ಲಿ ತಾಲ್ಲೂಕಿನಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.

ADVERTISEMENT

‘ನಿರುದ್ಯೋಗ ಮುಕ್ತ ರಾಣೆಬೆನ್ನೂರು ಮಾಡುತ್ತೇನೆ ಎಂದು ಹೇಳಿ ಗೆದ್ದು ಬಂದು ಯುವಕರಿಗೆ ಮೋಸ ಮಾಡಿದ್ದೀರಿ, ಯುವಕರನ್ನು ಜೂಜಾಟ ದಂಧೆಗೆ ಹಚ್ಚಿ ಅವರನ್ನು ಬೀದಿ ಪಾಲು ಮಾಡಿದ್ದೀರಿ. ರಾಜಾರೋಷವಾಗಿ ನಡೆಯುವ ಜೂಜಾಟವನ್ನು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಬಂದ್‌ ಮಾಡಿಸಿದ್ದಾರೆ’ ಎಂದರು.

‘ನಾನು ಅಹಿಂದ ವಿರೋಧಿಯಾಗಿದ್ದರೆ ಕೆಲವೇ ಮತಗಳ ಅಂತರದಲ್ಲಿ ಸೋಲುತ್ತಿದ್ದಿಲ್ಲ. ದೊಡ್ಡ ಮಟ್ಟದಲ್ಲಿ ಸೋಲು ಅನುಭವಿಸಬೇಕಾಗಿತ್ತು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ಮಠಗಳನ್ನು ನೂರಾರು ಕೋಟಿಗಟ್ಟಲೇ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ನಮ್ಮ ಅವಧಿಯಲ್ಲಿ ಅತಿ ಹೆಚ್ಚು ಅನುದಾನವನ್ನು ಹಿಂದುಳಿದ ವರ್ಗಗಳಿಗೆ ನೀಡಿದ್ದೇನೆ. ಕುಮಾರಪಟ್ಟಣದಲ್ಲಿ ₹ 25 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ವೃತ್ತ ನಿರ್ಮಿಸಿದ್ದೇವೆ. ನಗರದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ₹ 1.5 ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದೇನೆ. ನಿಮಗೆ ಇದುವರೆಗೂ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ ಮಾಡಲು ಆಗಿಲ್ಲ’ ಎಂದರು.

‘ಒಬಿಸಿ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ 4 ವಸತಿ ನಿಲಯಗಳಿಗೆ ಮಂಜೂರು ಮಾಡಿಸಿದ್ದೇನೆ. ನಗರದಲ್ಲಿ ಸಂಗೋಳ್ಳಿ ರಾಯಣ್ಣ ಮೂರ್ತಿ ನಿರ್ಮಾಣ, ಮೇಡ್ಲೇರಿಯಲ್ಲಿ ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆಗೆ ದಲಿತ ಮುಖಂಡರ ಸಹಾಯ, ಸಹಕಾರ ನೀಡಿದ್ದೇನೆ. ಈಗ ಹೇಳಿ ಯಾರು ಅಹಿಂದ ವಿರೋಧಿಗಳು’ ಎಂದು ತಿರುಗೇಟು ನೀಡಿದರು.

ನಗರಸಭೆ ಸದಸ್ಯ ಪ್ರಕಾಶ ಪೂಜಾರ ಮಾತನಾಡಿ, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡುವಾಗ ಎಲ್ಲರೂ ಒಂದಾಗಿದ್ದೇವೆ. ನಮ್ಮ ಪಕ್ಷದ ಕಚೇರಿ ವಿಷಯ ಅಜೆಂಡಾದಲ್ಲಿ ತೆಗೆದುಕೊಂಡರೆ ಈಗಲೂ ಸಭೆಗೆ ಹೋಗುತ್ತೇವೆ. ಅಭಿವೃದ್ಧಿಗೆ, ಮಹಾನ್ ನಾಯಕರ ಹೆಸರು ಇಡಲು ನಮ್ಮ ತಕರಾರು ಇಲ್ಲ. ಹಿಂದೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಲು ಮಾಜಿ ಶಾಸಕ ದಿ.ಜಿ.ಶಿವಣ್ಣ ಅವರು ಮುಂಬೈಗೆ ಹೋಗಿ ₹ 11 ಲಕ್ಷ ಅಡ್ವಾನ್ಸ್ ಕೊಟ್ಟ ಬಂದಿದ್ದರು. ಆಗ ಅವರ ಅವಧಿ ಮುಗಿತು. ಮುಂದೆ ಬಂದ ಶಾಸಕರು ಅದರ ಬಗ್ಗೆ ಯೋಚನೆ ಮಾಡಲಿಲ್ಲ ಎಂದರು.

ನಗರಸಭೆ ಉಪಾಧ್ಯಕ್ಷ ನಾಗೇಂದ್ರಸಾ ಪವಾರ ಮಾತನಾಡಿ, ‘ಕಾಂಗ್ರೆಸ್‌ ಆಡಳಿತದ ಅಧ್ಯಕ್ಷರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವೇ ಇಲ್ಲ. ಹಿಂಬಾಲಕರೇ ಅಧಿಕಾರ ನಡೆಸುತ್ತಾರೆ. ಚುನಾವಣೆ ಮುಗಿದ ಮೇಲೆ ಇದುವರೆಗೂ ಯಾವುದೇ ವಿಷಯದ ಬಗ್ಗೆ ನಮ್ಮ ಬಳಿ ವಿಚಾರಿಸಿಲ್ಲ’ ಎಂದರು.

ನಗರಸಭೆ ಸದಸ್ಯ ನಿಂಗರಾಜ್ ಕೋಡಿಹಳ್ಳಿ ಮಾತನಾಡಿ, ‘ಅಪ್ಪ ಮತ್ತು ಮಗ ಶಾಸಕರಾದರೂ ಇದುವರೆಗೂ ತಮ್ಮ 50 ವರ್ಷದ ಅವಧಿಯಲ್ಲಿ ಅಹಿಂದ ಸದಸ್ಯರನ್ನು ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಿಲ್ಲ. ತಾಲ್ಲೂಕಿಗೆ ಹೊಸ ಕೈಗಾರಿಕೆ ತಂದು ಉದ್ಯೋಗ ಕೊಡುವುದನ್ನು ಬಿಟ್ಟು, ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ಉದ್ಯೋಗ ಮೇಳ ಮಾಡಿದ್ದೀರಿ. ಕೈಗಾರಿಕೆ ತಂದು ತೋರಿಸಿ. ಇರುವ ಹನುಮನಮಟ್ಟಿ ಮಿಲ್‌ ಬಂದ್‌ ಮಾಡಿದ್ದೀರಿ’ ಎಂದು ದೂರಿದರು.

ವೈದ್ಯ ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಭಾರತಿ ಜಂಬಿಗಿ, ಚೋಳಪ್ಪ ಕಸವಾಳ, ಪ್ರಕಾಶ ಬುರಡೀಕಟ್ಟಿ, ಸಿದ್ದು ಚಿಕ್ಕಬಿದರಿ, ಮಂಜುನಾಥ ಕಾಟಿ, ಶೇಷಗಿರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.