
ರಾಣೆಬೆನ್ನೂರು: ನಗರದ ಹುಣಸೀಕಟ್ಟಿ ಮುಖ್ಯರಸ್ತೆ ಬಳಿ ₹ 10.50 ಕೋಟಿ ವೆಚ್ಚದಲ್ಲಿ 4 ಎಕರೆ 33 ಗುಂಟೆ ಜಾಗದಲ್ಲಿ ನಿರ್ಮಿಸಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಕಚೇರಿ ಕಟ್ಟಡ ಉದ್ಘಾಟನೆಯಾದರೂ, ಕಾನೂನುಬದ್ಧವಾಗಿ ಹಸ್ತಾಂತರವಾಗದೇ ಬಾಗಿಲು ಬಂದ್ ಆಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ (ವಾಕರಸಾಸಂ) ಎಆರ್‌ಟಿಒ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿಯೇ ಅತ್ಯಂತ ಅತ್ಯಾಧುನಿಕ ಎಆರ್‌ಟಿಒ ಕಚೇರಿ ಇದಾಗಿದೆ. ಆದರೆ, ಉದ್ಘಾಟನೆ ಬಳಿಕವೂ ಹಸ್ತಾಂತರ ಪ್ರಕ್ರಿಯೆ ನಡೆಯದಿರುವುದು ಕಟ್ಟಡದ ಆರಂಭಕ್ಕೆ ಸಮಸ್ಯೆಯಾಗಿದೆ.
ಹೊಸ ಕಟ್ಟಡದಲ್ಲಿ ದ್ವಿಚಕ್ರ ವಾಹನ ಹಾಗೂ ಲಘುವಾಹನ ಪರವಾನಗಿ ಪಡೆಯಲು ಹಾಗೂ ಇತರೆ ಕೆಲಸಕ್ಕಾಗಿ ಜನರು ಉತ್ಸುಕರಾಗಿದ್ದಾರೆ. ಆದರೆ, ವಾಕರಸಾಸಂ ಇದುವರೆಗೂ ಕಟ್ಟಡ ಹಸ್ತಾಂತರ ಮಾಡದಿದ್ದರಿಂದ ತಾತ್ಕಾಲಿಕವಾಗಿ ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯು, ಶಿದ್ದೇಶ್ವರನಗರದ ಬಳ್ಳಾರಿ ಅವರ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಲದಿನ ಬಿಟ್ಟು ನೂತನ ಕಟ್ಟಡದಲ್ಲಿ ಕಾರ್ಯಾರಂಭವಾಗಲಿದೆ ಎಂಬುದಾಗಿ ಸಿಬ್ಬಂದಿ ತಿಳಿಸಿದ್ದರು. ಆದರೆ, ಇದುವರೆಗೂ ಕಟ್ಟಡದ ಬಾಗಿಲು ತೆರದಿಲ್ಲ
ಮಾಜಿ ಶಾಸಕ ಕೆ.ಬಿ.ಕೋಳಿವಾಡ ಅವರು ಶಾಸಕರಾಗಿದ್ದಾಗ 2018ರಲ್ಲಿ ರಾಣೆಬೆನ್ನೂರಿನ ಎಆರ್‌ಟಿಒ ಕಚೇರಿ ಆರಂಭವಾಗಿತ್ತು. ರಾಣೆಬೆನ್ನೂರು ಸೇರಿದಂತೆ ಹಿರೆೇತಕೆರೂರು, ಬ್ಯಾಡಗಿ, ರಟ್ಟೀಹಳ್ಳಿ ತಾಲ್ಲೂಕು ಈ ಕಚೇರಿ ವ್ಯಾಪ್ತಿಗೆ ಸೇರಿವೆ.
ಎಆರ್‌ಟಿಒ ಕಚೇರಿ ಕಟ್ಟಟದ ಬಳಿ ದ್ವಿಚಕ್ರವಾಹನ, ಲಘುವಾಹನ ಮತ್ತು ಬಾರಿ ವಾಹನಗಳ ಅತ್ಯಾಧುನಿಕ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳಿವೆ. ಈ ಸ್ಥಳವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಿದ್ದರು. ಆದರೆ, ಈ ಕಟ್ಟಡ ಇದುವರೆಗೂ ಬಾಗಿಲು ತೆರಿಲ್ಲ. ಕಚೇರಿಯ ಒಳಗಡೆಯ ಕುರ್ಚಿ, ಟೇಬಲ್, ಅಲ್ಮೇರಾಗಳು ದೂಳು ತಿನ್ನುತ್ತಿವೆ
ಕಚೇರಿ ಆವರಣದಲ್ಲಿ ಉದ್ಯಾನ, ದ್ವಿಚಕ್ರವಾಹನ ಮತ್ತು ಲಘುವಾಹನ ತಪಾಸಣೆ ಕೊಠಡಿ, ಬಾರಿ ವಾಹನಗಳ ಸ್ವಯಂ ಚಾಲನೆ ಪಥಗಳು, ಹೈಟೆಕ್ ಶೌಚಾಲಯ, ಸಂಗ್ರಹ ಕೊಠಡಿಗಳನ್ನು ನಿರ್ಮಿಸಲಾಗಿದೆ.
ರಾಣೆಬೆನ್ನೂರು ಎಆರ್‌ಟಿಒ ಕಚೇರಿಯಲ್ಲಿ ತಿಂಗಳಿಗೆ ಸುಮಾರು ಎರಡೂವರೆ ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. 2000ಕ್ಕೂ ಹೆಚ್ಚು ಮಂದಿ ಚಾಲನಾ ಪರವಾನಗಿ ಪಡೆಯುತ್ತಿದ್ದಾರೆ. ತಿಂಗಳಿಗೆ ಅಂದಾಜು ₹ 2.5 ಕೋಟಿಯಿಂದ ₹ 3 ಕೋಟಿ ಆದಾಯ ಸಂಗ್ರಹವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ರಾಣೆಬೆನ್ನೂರಿನ ಎಆರ್‌ಟಿಒ ಕಚೇರಿಯನ್ನು ವಿಭಾಗೀಯ ಪ್ರಾದೇಶಿಕ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕಟ್ಟಡ ಹಸ್ತಾಂತರವಾಗದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಪ್ರಕಾಶ ಕೋಳಿವಾಡ, ‘ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರಿಗೆ ತ್ವರಿತ ಸಾರಿಗೆ ಸೇವೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಕಟ್ಟಡ ನಿರ್ಮಿಸಲಾಗಿದೆ. ಎಆರ್‌ಟಿಒ ಕಟ್ಟಡ ಹಸ್ತಾಂತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸ್ಥಳೀಯ ನಿವಾಸಿಯೊಬ್ಬರು, ‘ಹುಣಸೀಕಟ್ಟಿ ಮುಖ್ಯ ರಸ್ತೆಯಿಂದ ಕಚೇರಿಗೆ ಹೋಗುವ ರಸ್ತೆಯನ್ನು ಕೆಂಪು ಮಿಶ್ರಿತ ಗೊರ್ಚು ಹಾಕಿ ಕಚ್ಚಾ ರಸ್ತೆ ಮಾಡಲಾಗಿದೆ. ಈ ರಸ್ತೆಯನ್ನು ದುರಸ್ತಿ ಮಾಡಿ, ಸುಸಜ್ಜಿತ ರಸ್ತೆ ಮಾಡಬೇಕು. ಕಚೇರಿಗೆ ಹೋಗಿಬರಲು ಬಸ್ಸಿನ ವ್ಯವಸ್ಥೆ ಮಾಡಬೇಕು’ ಎಂದರು.
ವಾಕರಸಾಸಂ ಅಧಿಕಾರಿಗಳಿಂದ ನಮಗೆ ಕಟ್ಟಡ ಹಸ್ತಾಂತರವಾಗಿಲ್ಲ. ಸೆನ್ಸಾರ್ ಅಳವಡಿಸುವುದು ಸೇರಿದಂತೆ ಕೆಲ ಕೆಲಸಗಳು ಬಾಕಿಯಿವೆ. ಅವು ಮುಗಿದ ಕೂಡಲೇ ನಮಗೆ ಕಟ್ಟಡ ಹಸ್ತಾಂತರವಾಗಲಿದೆಸುಬ್ರಾರಾಯ ಎಸ್. ಹೆಗಡೆ ಎಆರ್‌ಟಿಒ ರಾಣೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.