ADVERTISEMENT

ರಾಣೆಬೆನ್ನೂರು: ಬಸ್‌ ಹೊಗೆ, ಹೈರಾಣಾದ ಜನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 6:41 IST
Last Updated 28 ಫೆಬ್ರುವರಿ 2026, 6:41 IST
ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಹೆಚ್ಚು ಹೊಗೆ ಉಗುಳುವ ಬಸ್‌
ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಹೆಚ್ಚು ಹೊಗೆ ಉಗುಳುವ ಬಸ್‌   

ರಾಣೆಬೆನ್ನೂರು: ಇಲ್ಲಿಯ ಕೇಂದ್ರ ನಿಲ್ದಾಣಕ್ಕೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ಸಂದರ್ಭದಲ್ಲಿ ಬಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹೊಗೆಯನ್ನು ಹೊರಗೆ ಬಿಡುತ್ತಿದ್ದು, ಕಿರಿದಾದ ನಿಲ್ದಾಣದಲ್ಲಿ ನಿಲ್ಲುವ ಪ್ರಯಾಣಿಕರು ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ.

ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ನಿಲ್ದಾಣದೊಳಗೆ ದಿನಕ್ಕೆ 1,100 ಬಸ್‌ಗಳು ಬಂದು,  ಹೊರಗೆ ಹೋಗುತ್ತವೆ. ರಾಣೆಬೆನ್ನೂರು ಘಟಕದ 135 ಬಸ್‌ಗಳೂ ಇದೇ ನಿಲ್ದಾಣದ ಮೂಲಕ ಸಂಚರಿಸುತ್ತವೆ.

ಬಸ್‌ ನಿಲ್ದಾಣ ಕಿರಿದಾಗಿದ್ದರಿಂದ ಸಂಚಾರದ ವೇಳೆ ವಿಪರೀತ ಹೊಗೆ ಉಗುಳುವ ಬಸ್‌ಗಳಿಂದ ಮಾಲಿನ್ಯ ಉಂಟಾಗುತ್ತಿದೆ. ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ADVERTISEMENT

ಬಸ್‌ ನಿಲ್ದಾಣದೊಳಗೆ ಹೊಗೆಯಿಂದ ಪ್ರಯಾಣಿಕರ ಕಣ್ಣು ಉರಿ ಬರುತ್ತಿದೆ. ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು, ಇದರ ನಡುವೆ ಹೊಗೆಯೂ ಜನರನ್ನು ಕಾಡುತ್ತಿದೆ. ಬಸ್‌ಗಳ ಹೊಗೆ ನಿಲ್ದಾಣದೊಳಗೆ ಮತ್ತು ಸುತ್ತಮುತ್ತಲಿನ ಹೊಟೇಲ್‌ ಮತ್ತು ಅಂಗಡಿಯೊಳಗೂ ಅವರಿಸಿಕೊಳ್ಳುತ್ತಿದೆ.

ಹಳೇ ಬಸ್‌ಗಳು ಪದೇ ಪದೇ ತಾಂತ್ರಿಕ‌ ದೋಷದಿಂದ ಕೆಟ್ಟು ನಿಲ್ಲುತ್ತಿವೆ. ಅಂಥ ಬಸ್‌ಗಳು ಸಂಚರಿಸುವ ಸಂದರ್ಭದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಬಿಡುತ್ತಿವೆ. ಹೊಗೆ ಮತ್ತು ಶೌಚಾಲಯದ ವಾಸನೆಯಿಂದ ನಿಲ್ದಾಣದಲ್ಲಿ ಜನರು ಮೂಗು ಮುಚ್ಚಿಕೊಂಡು ನಿಲ್ಲುವ ಸ್ಥಿತಿಯಿದೆ.

ರಾಣೆಬೆನ್ನೂರಿನಿಂದ ತುಮ್ಮಿನಕಟ್ಟಿ ಗ್ರಾಮಕ್ಕೆ ಚಲಿಸುವ ಬಸ್ ಅತೀ ಹೆಚ್ಚು ಹೊಗೆ ಉಗುಳುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ ಬಳಿ ಓಡಾಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಜನರಿಗೆ ಕಿರಿಕಿರಿಯುಂಟು ಮಾಡುತ್ತಿವೆ.

ದಾವಣಗೆರೆ - ರಾಣೆಬೆನ್ನೂರು, ಹಾವೇರಿ - ರಾಣೆಬೆನ್ನೂರು ಮತ್ತು ತುಮ್ಮಿನಕಟ್ಟಿ, ಮೇಡ್ಲೇರಿ, ಗುತ್ತಲ ಈ ಮಾರ್ಗದಲ್ಲಿ ಓಡಾಡುವ ಹಲವು ಬಸ್‌ಗಳು, ವಿಪರೀತ ಹೊಗೆ ಬಿಟ್ಟು ಮಾಲಿನ್ಯವನ್ನುಂಟು ಮಾಡುತ್ತಿವೆ. ಈ ಬಗ್ಗೆ ಪ್ರಯಾಣಿಕರು ಡಿಪೊ ವ್ಯವಸ್ಥಾಪಕರಿಗೆ ಹಲವು ಬಾರಿ ದೂರು ನೀಡಿದ್ದಾರೆ. ಹೊಗೆ ಪ್ರಮಾಣ ತಗ್ಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿ ವ್ಯವಸ್ಥಾಪಕರು ಮೌನವಾಗುತ್ತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

‘ರಸ್ತೆಯಲ್ಲಿ ಓಡಾಡುವ ಪ್ರತಿ ವಾಹನಕ್ಕೂ ಹೊಗೆ ತಪಾಸಣೆ ಕಡ್ಡಾಯ ಮಾಡಲಾಗಿದೆ. ನಿಗದಿಪಡಿಸಿದ ಪ್ರಮಾಣಕ್ಕಿಂತ ಅಧಿಕ ಹೊಗೆಯುಗುಳುವ ಬಸ್‌ಗಳಿಗೆ ಪ್ರಮಾಣ ಪತ್ರ ಹೇಗೆ ಸಿಗುತ್ತಿದೆ. ಪ್ರಮಾಣಪತ್ರ ನೀಡುವವರ ಮೇಲೆಯೇ ಅನುಮಾನ ಮೂಡುತ್ತಿದೆ’ ಎಂದು ಜನರು ಹೇಳಿದರು.

ಬಸ್ ಚಾಲಕರೊಬ್ಬರು ಮಾತನಾಡಿ, ‘ಪ್ರತಿ ತಿಂಗಳು ಡಿಪೊದಲ್ಲಿ 1ರಿಂದ 10ನೇ ತಾರೀಖಿನೊಳಗೆ ಬಸ್‌ಗಳ ಹೊಗೆ ತಪಾಸಣೆ ನಡೆಯುತ್ತದೆ. ಅದರ ನಡುವೆಯೇ ಕೆಲ ತಾಂತ್ರಿಕ ಸಮಸ್ಯೆಗಳು ಉಂಟಾಗಿ, ಹೊಗೆ ಪ್ರಮಾಣ ಹೆಚ್ಚಾಗುತ್ತದೆ. ಇದು ನಮಗೆ ಗೊತ್ತೇ ಆಗುವುದಿಲ್ಲ’ ಎಂದರು.

‘ರಾಣೆಬೆನ್ನೂರಿನಲ್ಲಿ 15 ಲಕ್ಷ ಕಿಲೊ ಮೀಟರ್ ಕ್ರಮಿಸಿ ಅವಧಿ ಮುಗಿದ ಸುಮಾರು 10 ಬಸ್‌ಗಳಿವೆ. ಹೊಸ ಬಸ್‌ಗಳು ಇಲ್ಲದಿದ್ದರಿಂದ, ಹಳೇ ಬಸ್‌ಗಳನ್ನೇ ಓಡಿಸಲಾಗುತ್ತಿದೆ. ವೇಗದ ಮಿತಿ ಲಾಕ್ ಮಾಡಲಾಗಿದೆ. ಹೆಚ್ಚು ವೇಗದಲ್ಲಿ ಹೋಗಲು ಪ್ರಯತ್ನಿಸಿದಾಗ, ಹೆಚ್ಚು ಹೊಗೆ ಬರುತ್ತಿದೆ ಎಂದು ತಿಳಿಸಿದರು.

ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಹೆಚ್ಚು ಹೊಗೆ ಉಗುಳುವ ಬಸ್‌
ವಾಕರಸಾಸಂ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಬಸ್‌ಗಳು ಹೊಗೆ ಉಗುಳುವ ಮೂಲಕ ಪರಿಸರಕ್ಕೆ ಮಾರಕವಾಗುತ್ತಿರುವುದು ವಿಪರ್ಯಾಸ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯ. ಪ್ರಾಣಿ ಪಕ್ಷಿ ಮನುಷ್ಯನಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಬೇಕು
ಎಚ್‌.ಎಫ್‌. ಅಕ್ಕಿ ನೀಡ್ಸ್‌ ಸಂಸ್ಥೆ 
ಬಸ್‌ಗಳ ಹೊಗೆ ಪ್ರಮಾಣವನ್ನು ಸಮರ್ಪಕವಾಗಿ ಪರಿಶೀಲಿಸಲಾಗುವುದು.  ಹೆಚ್ಚಿನ ಹೊಗೆ ಬಿಡುವ ಬಸ್‌ಗಳು ಕಂಡುಬಂದರೆ ಅವುಗಳ ಮಾರ್ಗದಲ್ಲಿ ಬದಲಿ ಬಸ್‌ ವ್ಯವಸ್ಥೆ ಮಾಡಲಾಗುವುದು
ಆರ್. ಸಿ. ಪಾಟೀಲ ರಾಣೆಬೆನ್ನೂರು ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.