
ರಾಣೆಬೆನ್ನೂರು: ಇಲ್ಲಿನ ಮಾರುತಿನಗರದ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿಯ ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ. ಒಂದು ವಾರಗಳ ಕಾಲ ನಡೆಯುವ ಚೌಡೇಶ್ವರಿ ದೇವಿಯ ಜಾತ್ರೆಯ ಅಂಗವಾಗಿ ಸೋಮವಾರ ಚೌಡೇಶ್ವರಿ ದೇವಿ ಕಮಿಟಿಯಿಂದ ಮೊದಲ ದಿನ ಏರ್ಪಡಿಸಿದ ಚೌಡೇಶ್ವರಿ ದೇವಿಯ ಶೃಂಗರಿಸಿದ ರಥದ ಉತ್ಸವದ ಮೆರವಣಿಗೆಯು ಭಕ್ತಿ ಭಾವದಿಂದ ಜರುಗಿತು.
ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಶೃಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇವಿಗೆ ಅಭಿಷೇಕ, ಮಹಾಪೂಜೆ, ಹೂ ಅಲಂಕಾರ ಮತ್ತು ವಿವಿಧ ಪೂಜಾ ವಿಧಿ ವಿಧಾನ ನಡೆದವು. ಹರಕೆ ಹೊತ್ತ ಮಹಿಳೆಯರು ಉಡಿ ತುಂಬಿದರು.
ಸಕಲ ವಾದ್ಯಗಳೊಂದಿಗೆ ಸಾವಿರಾರು ಭಕ್ತರ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಉಧೋ ಊಧೋ ಚೌಡಮ್ಮ ನಿನ್ನಾಲ್ಕು ಉಧೋ ಊಧೋ ಎನ್ನುವ ಜೈ ಘೋಷ ಎಲ್ಲಡೆ ಮೊಳಗಿತ್ತು.
ಸಿದ್ದಲಿಂಗೇಶ್ವರಸ್ವಾಮಿ ಜಾನಪದ ಕಲಾವಿರ ತಂಡ, ವೀರಭದ್ರ ಕುಣಿತ, ಡೊಳ್ಳು, ಭಾಜಾ ಭಜಂತ್ರಿ, ಸಮಾಳ, ಕೋಲಾಟ, ಮಹಿಳಾ ವೀರಗಾಸೆ, ವಿವಿಧ ನೃತ್ಯಗಳು, ಹಾಸ್ಯ ಕಲಾವಿದರು, ಗೊಂಬೆ ಕುಣಿತ, ನ್ಯೂ ಹನುಮಾನ್ ಆರ್ಕೆಸ್ಟ್ರಾ, ಭದ್ರಾವತಿ ಶಿವರಾಜ ತಂಡದವರಿಂದ ವಿವಿಧ ನೃತ್ಯಗಳು ಮೆರವಣಿಗೆಯುದ್ದಕ್ಕೂ ಮೆರುಗು ನೀಡದವು. ಅಲ್ಲಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.
ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹಾಗೂ ಗಣ್ಯರು, ಪೊಲೀಸ್ ಅಧಿಕಾರಿಗಳು ಮೆರವಣಿಗೆಗೆ ಚಾಲನೆ ನೀಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಕರಬಸಪ್ಪ ಜಾಡರ. ಈರಪ್ಪ ಮುದಿಗೊಣ್ಣನವರ, ಲಕ್ಷ್ಮಣ ಸಾಲಿ, ಕುಮಾರ ಮಡಿವಾಳರ, ದುರುಗಪ್ಪ ಹುಲಗಮ್ಮನವರ, ಶಿವಪ್ಪ ಬೆನಕನಕೊಂಡ, ಏಕಾಂತ ಮದಿಗೌಡ್ರ, ವಿರುಪಾಕ್ಷಪ್ಪ ಮರಡಿಬಣಕಾರ, ನಿಂಗಪ್ಪ ವಿಭೂತಿ, ಪ್ರಮೋದ ಕೋಪರ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ, ಮಂಜುನಾಥ ಗೌಡಶಿವಣ್ಣನವರ, ಪರಮೇಶ ಗೂಳಣ್ಣನವರ, ಡಿವೈಎಸ್‌ಪಿ ಜೆ.ಲೊಕೇಶ, ನಗರ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜಟಗಿ, ಎಂ.ಎಸ್. ಅರಕೇರಿ, ಪೂರ್ಣಿಮಾ ಕೋಳಿವಾಡ, ಮಂಗಳಗೌರಿ ಪೂಜಾರ, ಪುಟ್ಟಪ್ಪ ಮರಿಯಮ್ಮವನರ, ಬಸವರಾಜ ಲಕ್ಷ್ಮೇಶ್ವರ, ಶಿವಾನಂದ ಸಾಲಗೇರಿ, ಬಸವರಾಜ ಹೊಚಗೊಂಡರ, ಸಂತೋಷ ಐ. ಪಾಟೀಲ, ಪ್ರಕಾಶ ಪೂಜಾರ, ಉಮಾಪತಿ ಹೊನ್ನಾಳಿ, ಚೋಳಪ್ಪ ಕಸವಾಳ ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯು ಬೆಳಿಗ್ಗೆ ದೇವಿಯ ಚೌತ ಮನೆಯಿಂದ ಆರಂಭವಾಗಿ ಸಂಜೆ ಹೊತ್ತಿಗೆ ಮಾರುತಿನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.