ADVERTISEMENT

ಕೋರಂ ಅಭಾವ: ನಡೆಯದ ನಗರಸಭೆ ಸಾಮಾನ್ಯ ಸಭೆ

35 ಸದಸ್ಯರ ಪೈಕಿ 7 ಜನ ಮಾತ್ರ ಹಾಜರು: ಬಿಜೆಪಿ ಕಚೇರಿಗೆ ನಿವೇಶನ ವಿವಾದ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:20 IST
Last Updated 19 ಅಕ್ಟೋಬರ್ 2025, 7:20 IST
ರಾಣೆಬೆನ್ನೂರಿನ ನಗರಸಭೆ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಪೋರಂ ಇಲ್ಲದ ಕಾರಣ ಮುಂದೂಡಿದರು.
ರಾಣೆಬೆನ್ನೂರಿನ ನಗರಸಭೆ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಪೋರಂ ಇಲ್ಲದ ಕಾರಣ ಮುಂದೂಡಿದರು.   

ರಾಣೆಬೆನ್ನೂರು: ಇಲ್ಲಿನ ನಗರಸಭೆಯ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶನಿವಾರ 11 ಗಂಟೆಗೆ ನಡೆದ ಸಾಮಾನ್ಯ ಸಭೆಗೆ 35 ಸದಸ್ಯರ ಪೈಕಿ 7 ಜನ ಹಾಜರಾಗಿದ್ದು, ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಗೈರು ಹಾಜರಾದ ಕಾರಣ ಸಭೆಯನ್ನು ಮೊದಲು ಒಂದು ತಾಸಿನವರೆಗೆ ಮುಂದೂಡಲಾಯಿತು.

ನಂತರ ಒಂದು ತಾಸಿನ ನಂತರ ಅಧ್ಯಕ್ಷೆ ಸಭೆ ಕರೆದಾಗ ಮತ್ತು 7 ಜನ ಸದಸ್ಯರು ಸಭೆಗೆ ಹಾಜರಾಗದ ಕಾರಣ ಕೆಲ ಹೊತ್ತು ಕಾದು ಪೋರಂ ಭರ್ತಿಯಾಗದ ಕಾರಣ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಚಂಪಕಾ ರಮೇಶ ಬಿಲಹಳ್ಳಿ ತಿಳಿಸಿದರು.

ಉಪಾಧ್ಯಕ್ಷ ನಾಗೇಂದ್ರಸಾ ಪವಾರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರೆಡೆಮ್ಮನವರ ಸ್ಥಾನಗಳು ಖಾಲಿ ಉಳಿದಿದ್ದವು. ಪೌರಾಯುಕ್ತ ಎಫ್‌.ವೈ.ಇಂಗಳಗಿ ಇದ್ದರು. ಮೂರು ಜನ ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು.

ADVERTISEMENT

ಅಧ್ಯಕ್ಷೆ ಬಿಸಲಹಳ್ಳಿ ಸೇರಿದಂತೆ ಪುಟ್ಟಪ್ಪ ಮರಿಯಮ್ಮನವರ, ಸುಮಾ ಹುಚಗೊಂಡರ, ಶಶಿಧರ ಬಸೆನಾಯಕ, ಸುವರ್ಣಾ ಸುರಳಿಕೇರಿಮಠ, ಶೇಖಪ್ಪ ಹೊಸಗೌಡ್ರ ಮತ್ತು ಮೆಹಬೂಬಸಾಬ ಮುಲ್ಲಾ ಅವರು ಮಾತ್ರ ಸಭೆಯಲ್ಲಿ ಹಾಜರಿದ್ದರು.

ನಂತರ ಅಧ್ಯಕ್ಷರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು, ನಗರದ ಅಭಿವೃದ್ದಿ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿತ ಸದಸ್ಯರೊಂದಿಗೆ ಬಿಜೆಪಿ ಕೆಲ ಸದಸ್ಯರು ಮತ್ತು ಪಕ್ಷೇತರ ಸದಸ್ಯರ ಬೆಂಬಲ ಪಡೆದು ಆಡಳಿತದ ಚುಕ್ಕಾಣಿ ಹಿಡಿಯಲಾಗಿತ್ತು. ಇನ್ನೇನು ನಮ್ಮ ಅವಧಿ 15 ದಿನ ಉಳಿದಿದೆ. 35 ವಾರ್ಡ್‌ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡಿ ₹ 25 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇಂದು ಸದಸ್ಯರು ಸಭೆಗೆ ಗೈರಾಗಿದ್ದು ನಮಗೆ ಬೇಸರ ತಂದಿದೆ ಎಂದರು.

ಹಿಂದಿನ ಸಾಧಾರಣ ಸಭೆಯ ನಡವಳಿಗಳನ್ನು ಮತ್ತು ಸ್ಥಾಯಿ ಸಮಿತಿ ಸಭೆಗಳ ನಡವಳಿಗಳನ್ನು ಓದಿ ಸ್ವೀಕರಿಸುವುದು, ಮೇ, ಜೂನ್‌, ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಜಮಾ ಖರ್ಚಿನ ಮಂಜೂರಿ ನೀಡುವುದನ್ನು ಸಭೆಯಲ್ಲಿ ಪೆಂಡಿಂಗ್‌ ಉಳಿದಂತಾಗಿದೆ.

ಬಿಜೆಪಿ ಕಚೇರಿ ನಿವೇಶನದ ಕುರಿತು ನೋಟಿಸ್‌ ಬಂದಿದ್ದರಿಂದ ಬೆಜೆಪಿ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ನಗರಸಭೆಯಿಂದ ಯಾವುದೇ ನೋಟಿಸ್‌ ಹೋಗಿಲ್ಲ. ಬಿಜೆಪಿ ಕಚೇರಿ ಬಗ್ಗೆ ಕೋರ್ಟಿನಲ್ಲಿ ಕೇಸು ನಡೆಯುತ್ತಿದೆ. ಹಾಗಾಗಿ ಆ ವಿಷಯ ಸಭೆಗೆ ತಂದಿಲ್ಲ ಎಂದರು.

ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೆನಾಯಕ, ಶೇಖಪ್ಪ ಹೊಸಗೌಡ್ರ ಮತ್ತು ಕಾಂಗ್ರೆಸ್‌ ಪಕ್ಷದ ಶೇರ್‌ ಖಾನ್‌ ಕಾಬೂಲಿ, ಮಧು ಕೋಳಿವಾಡ, ರಾಜು ಸುರಳಿಕೇರಿಮಠ, ವಿರೇಶ ಬಾಳೆಹಳ್ಳಿಮಠ, ಮಲ್ಲೇಶ ಮದ್ಲೇರ ಇದ್ದರು.

ಬಾಕಿ ಉಳಿದ ಕೆಲಸ

ನಗರದ ಪ್ರಮುಖ ವೃತ್ತಗಳಿಗೆ ವಿವಿಧ ಮಹನೀಯರ ಹೆಸರು ನಾಮಕರಣ ಮಾಡುವುದು. ಭೀಮ್‌ ಆರ್ಮಿ ಕರ್ನಾಟಕ ಏಕತಾ ಮಿಷನ್‌ ವಾಲ್ಮೀಕಿ ನಾಯಕ ಮಹಾಸಭಾ ನೇಕಾರ ಸಮುದಾಯ ಗಂಗಾಮತ ತಾಲ್ಲೂಕು ಕುಂಬಾರ ಅಂಜುಮನ್‌–ಎ–ಇಸ್ಲಾಂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಮಾಜಿ ಸೈನಿಕರ ಸಂಘ ಕೈಮಗ್ಗ ನೇಕಾರ ಕಾರ್ಮಿಕರ ಸಂಘ ಸ್ವಾಭಿಮಾನಿ ಕರವೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕ ಪ್ರಾದೇಶಿಕ ಕುರುಬರ ಸಂಘ ವಿವಿಧ ಸಮಾಜಗಳಿಗೆ ನಿವೇಶನ ಮಂಜೂರು ಮಾಡುವುದು ಎಲ್ಲವೂ ಹಾಗೆ ಉಳಿದಿವೆ ಎಂದು ದೂರಿದರು.

ನಮ್ಮ ಆಡಳಿತ ಅವಧಿ ಇನ್ನು 15 ದಿನ ಬಾಕಿ ಉಳಿದಿದೆ. ಅದರಲ್ಲಿ ಒಂದು ವಾರ ಸಾಲು ಸಾಲು ಹಬ್ಬದ ರಜೆ ಇದೆ. ಯಾವ ಉದ್ದೇಶಕ್ಕಾಗಿ ಸದಸ್ಯರು ಸಭೆಗೆ ಗೈರು ಆಗಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.