ADVERTISEMENT

ರಾಣೆಬೆನ್ನೂರು: ಟಿ– 55 ಶಿವಶಕ್ತಿ ಯುದ್ಧ ಟ್ಯಾಂಕ್‌, ಪ್ರವಾಸಕ್ಕೆ ಚಾಲನೆ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 4:42 IST
Last Updated 15 ಆಗಸ್ಟ್ 2025, 4:42 IST
ಪ್ರಕಾಶ ಕೋಳಿವಾಡ
ಪ್ರಕಾಶ ಕೋಳಿವಾಡ   

ರಾಣೆಬೆನ್ನೂರು: ‘1951ರ ಭಾರತ–ಪಾಕಿಸ್ತಾನ್ ಯುದ್ಧದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ‘ಟಿ– 55 ಶಿವಶಕ್ತಿ ಯುದ್ಧ ಟ್ಯಾಂಕ್‌’ ಅನ್ನು ಆಗಸ್ಟ್ 15ರಂದು ಪ್ರತಿಷ್ಠಾಪಿಸಲಾಗುತ್ತಿದೆ. ಇದರ ಜೊತೆಯಲ್ಲಿ, ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದ ಬೆಟ್ಟದ ಮಲ್ಲಿಕಾರ್ಜುನ ಗುಡ್ಡದ ಪ್ರವಾಸಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

ನಗರದ ಮಿನಿ ವಿಧಾನಸೌಧ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಇಂಥ ಟ್ಯಾಂಕ್ ಪ್ರತಿಷ್ಠಾಪನೆಯಾಗಿಲ್ಲ. ಇಂಥ ಟ್ಯಾಂಕ್ ಪ್ರತಿಷ್ಠಾಪನೆ ಆಗುತ್ತಿರುವುದು ಇಡೀ ರಾಣೆಬೆನ್ನೂರು ಜನರಿಗೆ ಹೆಮ್ಮೆಯ ಸಂಗತಿ’ ಎಂದರು.

‘ಸ್ವತಂತ್ರ ಭಾರತದ ಗತ ವೈಭವವನ್ನು ಪ್ರತಿಬಿಂಬಿಸುವ ಹಾಗೂ ಸೇನೆಯ ಸಾಮರ್ಥ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 2 ವರ್ಷಗಳ ಪ್ರಯತ್ನದ ಫಲವಾಗಿ ಸಿದ್ಧೇಶ್ವರನಗರದ ಮಿನಿವಿಧಾನಸೌಧದ ಎದುರು ಪ್ರತಿಷ್ಠಾಪಿಸಲಾಗುತ್ತಿದೆ’ ಎಂದರು.

ADVERTISEMENT

‘ಶಾಸಕರ ಅನುದಾನದಲ್ಲಿ ₹ 15 ಲಕ್ಷ ಮತ್ತು ನಗರಸಭೆ ಅನುದಾನ ₹ 9.85 ಲಕ್ಷದ ವ್ಯಯಿಸಿ ಟ್ಯಾಂಕ್ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕೆ ವಿದ್ಯುತ್ ಅಲಂಕಾರವೂ ಇರಲಿದೆ. ಎಪಿಎಂಸಿ ಗಣೇಶ ದೇವಸ್ಥಾನದಿಂದ ಟ್ಯಾಂಕ್‌ ಮೆರವಣಿಗೆ ನಡೆಯಲಿದೆ. ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಟ್ಯಾಂಕ್‌ ಅನಾವರಣಗೊಳಿಸಲಿದ್ದಾರೆ.  ಸಚಿವ ಶಿವಾನಂದ ಪಾಟೀಲ, ಕೆ.ಬಿ. ಕೋಳಿವಾಡ  ಭಾಗವಹಿಸಲಿದ್ದಾರೆ’ ಎಂದರು.

‘ಕೊಟ್ಟೂರೇಶ್ವರನಗರದ ದೊಡ್ಡಕೆರೆಯಲ್ಲಿ ಪ್ರವಾಸಿಗರಿಗೆ ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೂ ಚಾಲನೆ ನೀಡಲಾಗುವುದು. ರಾಣೆಬೆನ್ನೂರು ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಹಲವು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ’ ಎಂದು ಹೇಳಿದರು. 

Cut-off box - ಫೋಟೊ ತೆರವಿಗೆ ಬಿಜೆಪಿ ಆಗ್ರಹ ‘ಯುದ್ಧ ಟ್ಯಾಂಕ್‌ ಪ್ರತಿಷ್ಠಾಪನಾ ಕಟ್ಟೆಯ ಮೇಲಿರುವ ಶಾಸಕ ಪ್ರಕಾಶ ಕೋಳಿವಾಡ ಫೋಟೊ ಹಾಗೂ ಪಿಕೆಕೆ ಲಾಂಛನ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ ಆರ್‌.ಎಚ್‌. ಭಾಗವಾನ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ‘ಟ್ಯಾಂಕ್ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ ಶಾಸಕ ಬಿಜೆಪಿಯ ಕಾರ್ಯಕರ್ತರು ಅಡ್ಡಿಪಡಿಸುತ್ತಿರುವುದಾಗಿ ಹೇಳಿದ್ದಾರೆ. ತಪ್ಪು ಮಾಹಿತಿ ನೀಡಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಶಾಸಕರು ಬಿಜೆಪಿ ಕಾರ್ಯಕರ್ತರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು. ‘ಟ್ಯಾಂಕ್ ಕಟ್ಟೆ ನಿರ್ಮಾಣಕ್ಕಾಗಿ ನಿರ್ಮಿತಿ ಕೇಂದ್ರದಿಂದ ₹ 9.95 ಲಕ್ಷ ಹಾಗೂ ಶಾಸಕ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 15 ಲಕ್ಷ ಅನುದಾನ ಬಂದಿದೆ. ರಾಣೆಬೆನ್ನೂರು ಜನತೆಯಾಗಲಿ ಅಥವಾ ಬಿಜೆಪಿ ಕಾರ್ಯಕರ್ತರಾಗಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ’ ಎಂದು ಹೇಳಿದರು. ‘ಶಾಸಕ ಕೋಳಿವಾಡ ಕಲ್ಲಿನಲ್ಲಿ ತಮ್ಮ ಭಾವಚಿತ್ರದ ಹೆಸರು ಮತ್ತು ಪಿಕೆಕೆ ಸಂಸ್ಥೆಯ ಲಾಂಛನ ಅಳವಡಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಇದನ್ನು ಕೂಡಲೇ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು. ಶಾಸಕರ ಸ್ಪಷ್ಟನೆ; ‘ಅಧಿವೇಶನದ ಒತ್ತಡದಿಂದ ಹಾಗೂ ಸೂಕ್ತ ಮಾಹಿತಿ ಪಡೆಯದೇ ತಪ್ಪು ಗ್ರಹಿಕೆ ಮಾಡಿಕೊಂಡು ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆಂದು ಸದನದಲ್ಲಿ ಮಾತನಾಡಿರುವುದಕ್ಕೆ ವಿಷಾದಿತ್ತೇನೆ’ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ‘ಅಧಿವೇಶನ ನಡೆಯುವಾಗ ಬಹಳ ಕರೆಗಳು ಬಂದಿದ್ದರಿಂದ ಸ್ವೀಕರಿಸಲು ಆಗಲಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಗಂಟೆಯ ನಂತರ ಹೊರಗಡೆ ಬಂದು ಅಧಿಕಾರಿಗಳಿಗೆ ಕರೆ ಮಾಡಿದಾಗ ಟ್ಯಾಂಕ್‌ ಕಟ್ಟೆಯ ಫೋಟೊ ಹಾಗೂ ಲಾಂಛನ ತೆಗೆಯದಿದ್ದರೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುವುದಾಗಿ ಅವರು ಹೇಳಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡು ಸದನದಲ್ಲಿ ಮಾತನಾಡಿದೆ. ಇದು ನನಗೂ ನೋವುಂಟಾಗಿದೆ’ ಎಂದರು. ‘ಶಿಷ್ಟಾಚಾರ ಪ್ರಕಾರವೇ ಕಾರ್ಯಕ್ರಮ ನಡೆಯುತ್ತಿದೆ. ಪಿಕೆಕೆ (ಪ್ರಕಾಶ ಕೃಷ್ಣಪ್ಪ ಕೋಳಿವಾಡ) ನನ್ನ ಹೆಸರು. ಅದನ್ನೇ ಲಾಂಛನ ಮಾಡಿರುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು. 

‘ಯುದ್ಧ ಟ್ಯಾಂಕ್; ಬಿಜೆಪಿಯವರಿಂದ ಅಡ್ಡಿ’

ರಾಣೆಬೆನ್ನೂರಿನ ಯುದ್ಧ ಟ್ಯಾಂಕ್ ಪ್ರತಿಷ್ಠಾಪನೆ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಪ್ರಸ್ತಾಪಿಸಿದ ಶಾಸಕ ಪ್ರಕಾಶ ಕೋಳಿವಾಡ ‘ರಾಣೆಬೆನ್ನೂರಿನ ಜನತೆಯಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಶಾಸಕರ ಅನುದಾನ ಖರ್ಚು ಮಾಡಿ ಯುದ್ಧ ಟ್ಯಾಂಕ್ ಪ್ರತಿಷ್ಠಾಪಿಸಲಾಗುತ್ತಿದೆ. ಕಟ್ಟೆಯ ಮೇಲೆ ನನ್ನ ಫೋಟೊ ಹಾಗೂ ಪಿಕೆಕೆ ಲಾಂಛನ ಹಾಕಿಕೊಂಡಿದ್ದೇನೆ. ಆದರೆ ಬಿಜೆಪಿಯವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದರು. ‘ತಮ್ಮ ಅವಧಿಯ ಕೆಲಸಕ್ಕೆ ಹಲವರು ಫೋಟೊ ಹಾಕಿಕೊಂಡಿದ್ದಾರೆ. ನಾನು ಹಾಕಿದ್ದಕ್ಕೆ ಏಕೆ ವಿರೋಧ’ ಎಂದು ಪ್ರಶ್ನಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ‘ನೀವು ಮಾಡಿರುವುದು ಜನರಿಗೆ ಗೊತ್ತಿರುತ್ತದೆ. ಯುದ್ಧ ಟ್ಯಾಂಕ್ ಇರುವವರೆಗೂ ಜನರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ಅಧಿಕಾರಿಗಳನ್ನು ಕೇಳಿ ಮುಂದುವರಿಯಿರಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.