ADVERTISEMENT

ಬ್ಯಾಂಕ್ ವ್ಯವಸ್ಥಾಪಕಿ ದುರ್ನಡತೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:48 IST
Last Updated 30 ಸೆಪ್ಟೆಂಬರ್ 2025, 6:48 IST
ರಾಣೆಬೆನ್ನೂರಿನ ಯೂನಿಯನ್‌ ಬ್ಯಾಂಕ್ ವ್ಯವಸ್ಥಾಪಕಿ ರುಚಿ ಅವರ ದುರ್ನಡತೆಯನ್ನು ವಿರೋಧಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದವು
ರಾಣೆಬೆನ್ನೂರಿನ ಯೂನಿಯನ್‌ ಬ್ಯಾಂಕ್ ವ್ಯವಸ್ಥಾಪಕಿ ರುಚಿ ಅವರ ದುರ್ನಡತೆಯನ್ನು ವಿರೋಧಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದವು   

ರಾಣೆಬೆನ್ನೂರು: ಇಲ್ಲಿನ ಹಲಗೇರಿ ರಸ್ತೆಯ ಯುನಿಯನ್‌ ಬ್ಯಾಂಕ್ ವ್ಯವಸ್ಥಾಪಕಿ ರುಚಿ ಅವರ ಕನ್ನಡ ವಿರೋಧಿ ನೀತಿ ಮತ್ತು ರೈತರು, ಬ್ಯಾಂಕಿನ ಗ್ರಾಹಕರು, ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತನೆ ಮಾಡದಿರುವುದನ್ನು ವಿರೋಧಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ‘ಯುನಿಯನ್‌ ಬ್ಯಾಂಕಿನ ವ್ಯವಸ್ಥಾಪಕಿ ಕನ್ನಡ ವಿರೋಧ ನೀತಿ ಸರಿಯಲ್ಲ. ಕನ್ನಡಕ್ಕೆ ಅವಮಾನ ಮತ್ತು ಕನ್ನಡ ಭಾಷೆ ಮತ್ತು ಕನ್ನಡದಲ್ಲಿ ವ್ಯವಹಾರ ಮಾಡದೆ ಯಾರಾದರೂ ಶಾಖೆಗೆ ಭೇಟಿ ಕೊಟ್ಟರೆ ಅವರಿಗೆ ಸರಿಯಾಗಿ ಸ್ಪಂದಿಸದೆ ಹೊರಗೆ ಹೋಗಿ ಎಂದು ಅವಮಾನ ಮಾಡುವುದು ಸರಿಯಾದ ಕ್ರಮವಲ್ಲ’ ಎಂದು ದೂರಿದರು.

‘ಶಾಖಾ ವ್ಯವಸ್ಥಾಪಕಿ ರುಚಿ ಅವರು ದುರ್ವತನೆಯಿಂದ ಬೇಸರ ಮೂಡಿಸಿದೆ. ರೈತರು ಸಾಲ ಕಟ್ಟಿ ಆಧಾರ ಖುಲಾಷೆ ಪತ್ರಕ್ಕೆ ಸಹಿ ಮಾಡದೆ ರೈತರನ್ನು ಅವಮಾನ ಮಾಡುವುದು, ಯಾರಾದರೂ ಹೇಳಲು ಹೋದರೆ ನೀವು ಯಾರು ನಿಮ್ಮನ್ನು ಯಾರು ಕರೆಸಿದ್ದಾರೆ. ನಿಮ್ಮ ಮೇಲೆ ದೂರು ಕೊಡಲಾಗವುದು ಎಂದು ಇಂಗ್ಲಿಷ್‌ ಮತ್ತು ತಮ್ಮ ಭಾಷೆಯಲ್ಲಿಯೇ ಅವಮಾನಿಸುತ್ತಾರೆ. ಇದು ಸೂಕ್ತವಲ್ಲ’ ಎಂದು ದೂರಿದರು.

‘ಹುಬ್ಬಳ್ಳಿ ಪ್ರಾದೇಶಿಕ ಶಾಖಾಧಿಕಾರಿಗಳು ಕನ್ನಡಕ್ಕೆ ಮತ್ತು ರೈತರಿಗೂ ಹಾಗೂ ಸಾರ್ವಜನಿಕರಿಗೆ ಅವಮಾನ ಮಾಡಿದ್ದಕ್ಕೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಈ ಶಾಖೆಗೆ ಕನ್ನಡದಲ್ಲಿ ಸರಿಯಾಗಿ ವ್ಯವಹಾರ ಮಾಡುವಂತಹ ಹಾಗೂ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವ ವ್ಯವಸ್ಥಾಪಕರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಂದೆ ರೈತರು ಹಾಗೂ ವಿವಿಧ ಕನ್ನಡ ಸಂಘಟನೆಗಳು ಹಾಗೂ ಸಾರ್ವಜನಿಕರು ಕೂಡಿಕೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರೇಮಾ ಲಮಾಣಿ, ರಾಜಶೇಖರ ದೂದಿಹಳ್ಳಿ, ಮಂಜು ಸಂಶಿ, ಮಾಲತೇಶ ಮಡಿವಾಳರ, ರಾಜೇಶ ಅಂಗಡಿ, ಮಂಜುನಾಥ ಸಾಂಬೋಜಿ, ಬಸವರಾಜ ಮೇಗಳಮನಿ, ಶೈಲಾ ಹರನಗಿರಿ, ಮಾಲತೇಶ ಏಳಕುರಿ, ಕಿರಣ ಗುಳೇದ, ಹನುಮಂತಪ್ಪ ಹೊಳಿಯಪ್ಪನವರ, ರಮೇಶ ಮಾಕನೂರ, ಶಂಕರ ಬಾರ್ಕಿ, ಸಿದ್ದಪ್ಪ ಗುಡಿಹಿಂದ್ಲವರ, ಸಿದ್ದಪ್ಪ ಮುದ್ದಿ, ಹಜರತ ಎಲಿಗಾರ, ಮುನ್ನಾಸಾಬ ಮಣಕೂರ, ಹುಚ್ಚಪ್ಪ ಮುದ್ದಿ, ಫಕ್ಕೀರಪ್ಪ ತಳವಾರ, ರತ್ಮಮ್ಮ ಎರೇಶಿಮಿ, ನಂದಿತಾ ದುರಗಪ್ಪಳವರ, ನಾಗಮ್ಮ ತಳವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.