
ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಚಿಕ್ಕ ಕಬ್ಬಾರ ಗ್ರಾಮದ ಜಮೀನೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 1 ಎಕರೆ 30 ಗುಂಟೆಯಲ್ಲಿದ್ದ ಅಡಿಕೆ ಸಸಿಗಳು ಬೆಂಕಿಗಾಹುತಿಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜಮೀನಿನಲ್ಲಿ ಇತ್ತೀಚೆಗೆ ನಡೆದಿರುವ ಬೆಂಕಿ ಅವಘಡದ ಬಗ್ಗೆ ರೈತ ಹಾಲೇಶಪ್ಪ ನಿಂಗಪ್ಪ ಕತಗಿ (79) ಅವರು ದೂರು ನೀಡಿದ್ದಾರೆ. ₹ 3 ಲಕ್ಷ ಮೌಲ್ಯದ ಅಡಿಕೆ ಸಸಿಗಳು ಸುಟ್ಟಿರುವುದಾಗಿ ದೂರಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ರಟ್ಟೀಹಳ್ಳಿ ಪೊಲೀಸರು ತಿಳಿಸಿದರು.
‘ದೂರುದಾರರ 3 ಎಕರೆ 35 ಗುಂಟೆ ಜಮೀನಿನಲ್ಲಿ ಅಡಿಕೆ ಸಸಿ ಹಚ್ಚಲಾಗಿತ್ತು. ಮಳೆಗಾಲದಲ್ಲಿ ಅಡಿಕೆ ಸಸಿಗಳ ನಡುವೆ ಮೆಕ್ಕೆಜೋಳ ಬೆಳೆಯಲಾಗಿತ್ತು. ಮೆಕ್ಕೆಜೋಳ ಫಸಲು ಬಂದಿದ್ದರಿಂದ, ತೆನೆಗಳನ್ನು ತೆಗೆಯಲಾಗಿತ್ತು. ಮೆಕ್ಕೆಜೋಳದ ಒಣ ಗಿಡಗಳು ಜಮೀನಿನಲ್ಲೇ ಇದ್ದವು. ರಸ್ತೆ ಪಕ್ಕದಲ್ಲೇ ಜಮೀನಿದ್ದು, ಯಾರೂ ಕಿಡಿಗೇಡಿಗಳು ಬೆಂಕಿ ಕಿಡಿ ಹೊತ್ತಿಸಿರುವ ಅನುಮಾನವಿದೆ. ಇದರಿಂದಾಗಿ ಮೆಕ್ಕೆಜೋಳಕ್ಕೆ ಬೆಂಕಿ ತಗುಲಿ ಸುಟ್ಟಿದೆ. 1 ಎಕರೆ 30 ಗುಂಟೆಯಲ್ಲಿ ಬೆಳೆದಿದ್ದ ಅಡಿಕೆ ಸಸಿಗಳು ಸಹ ಸುಟ್ಟು ಹೋಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.