ADVERTISEMENT

ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ:ಕೈ ಹಿಡಿದ ಪಕ್ಷೇತರರು;ಅಧಿಕಾರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:02 IST
Last Updated 28 ಸೆಪ್ಟೆಂಬರ್ 2025, 3:02 IST
ಹಾವೇರಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ನೂತನ 9 ಸದಸ್ಯರು (7 ಕಾಂಗ್ರೆಸ್–2 ಪಕ್ಷೇತರರು) ಮುಖಂಡರು– ಕಾರ್ಯಕರ್ತರ ಜೊತೆ ಸಾಮೂಹಿಕ ಫೋಟೊ ತೆಗೆಸಿಕೊಂಡರು
ಹಾವೇರಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯ ನೂತನ 9 ಸದಸ್ಯರು (7 ಕಾಂಗ್ರೆಸ್–2 ಪಕ್ಷೇತರರು) ಮುಖಂಡರು– ಕಾರ್ಯಕರ್ತರ ಜೊತೆ ಸಾಮೂಹಿಕ ಫೋಟೊ ತೆಗೆಸಿಕೊಂಡರು   

ಹಾವೇರಿ: ಇಲ್ಲಿಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇದೇ 30ರಂದು ಚುನಾವಣೆ ನಡೆಯಲಿದ್ದು, ಬಹುಮತಕ್ಕೆ ಅಗತ್ಯವಿರುವ ಇಬ್ಬರು ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಅಧಿಕಾರಕ್ಕಾಗಿಯೂ ಬೇಡಿಕೆ ಇರಿಸಿದ್ದಾರೆ.

ಇಲ್ಲಿಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷೇತರರನ್ನು ಸ್ವಾಗತಿಸಲಾಯಿತು.

ರಟ್ಟೀಹಳ್ಳಿಯ 15ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಲಲಿತಾ ಚನ್ನಗೌಡ್ರ ಹಾಗೂ 9ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ, ‘ರಟ್ಟೀಹಳ್ಳಿ ಪಟ್ಟಣದ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ತತ್ವ–ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆ’ ಎಂದು ಘೋಷಿಸಿದರು.

ADVERTISEMENT

ಪಕ್ಷೇತರರನ್ನು ಸ್ವಾಗತಿಸಿದ ಹಿರೇಕೆರೂರು ಶಾಸಕ ಯು.ಬಿ. ಬಣಕಾರ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ರಟ್ಟೀಹಳ್ಳಿಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ’ ಎಂದರು.

‘ರಟ್ಟೀಹಳ್ಳಿಯು ಬಿಜೆಪಿಯ ಭದ್ರಕೋಟೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ರಟ್ಟೀಹಳ್ಳಿ ಜನರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಕಾಂಗ್ರೆಸ್‌ಗೆ 7 ಸ್ಥಾನಗಳು ಬಂದಿರುವುದು ಸಾಧನೆ. ಇಬ್ಬರು ಪಕ್ಷೇತರರು ಸಹ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು, ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ’ ಎಂದು ಹೇಳಿದರು.

‘ಪಕ್ಷೇತರರ ಬೆಂಬಲದಿಂದಾಗಿ ಬಹುಮತ ಸಿಕ್ಕಿದೆ. ಸೆ. 30ರಂದು ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ಜರುಗಲಿದ್ದು, ಅಂದೇ ನಮ್ಮ ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿಸುತ್ತೇವೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ರಟ್ಟೀಹಳ್ಳಿ ಚುನಾವಣೆ ಫಲಿತಾಂಶ ಬಂದ ದಿನವೇ ಪಕ್ಷೇತರ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬರುವುದಾಗಿ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನೂ ಭೇಟಿಯಾಗಿದ್ದರು. ಈಗ ಇಬ್ಬರೂ ಪಕ್ಷೇತರರು, ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ’ ಎಂದರು.

ಮುಖಂಡರಾದ ಬಿ.ಎಚ್. ಬನ್ನಿಕೋಡ, ಎಂ.ಎಂ. ಹಿರೇಮಠ, ಕೊಟ್ರೇಶಪ್ಪ ಬಸೇಗಣ್ಣಿ, ರಮೇಶ ಮಡಿವಾಳರ ಇದ್ದರು.  

ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ: ಅಧ್ಯಕ್ಷ ಸ್ಥಾನಕ್ಕೆ ‘ಸಾಮಾನ್ಯ’ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ‘ಬಿಸಿಎ’ ಮೀಸಲಾತಿ ನಿಗದಿಪಡಿಸಲಾಗಿದೆ. ತಹಶೀಲ್ದಾರ್ ಅವರು ಚುನಾವಣಾಧಿಕಾರಿಯಾಗಿ, ಚುನಾವಣೆ ನಡೆಸಲು ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರೆ.

‘ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ನೀಡಿದರೆ, ಪಟ್ಟಣದ ಅಭಿವೃದ್ಧಿ ಕೆಲಸಕ್ಕೆ ಶ್ರಮಿಸುತ್ತೇವೆ’ ಎಂದು ಶಿವಕುಮಾರ ಉಪ್ಪಾರ ಹಾಗೂ ಲಲಿತಾ ಚನ್ನಗೌಡ್ರ ಬೇಡಿಕೆ ಇರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಸಹ, ತಮಗೆ ಅವಕಾಶ ನೀಡುವಂತೆ ಕೋರುತ್ತಿರುವುದಾಗಿ ತಿಳಿದುಬಂದಿದೆ.

ಬಹುಮತಕ್ಕೆ ಪಕ್ಷೇತರರ ಅನಿವಾರ್ಯತೆ ಇರುವುದರಿಂದ, ಅವರ ಮಾತಿಗೆ ಕಾಂಗ್ರೆಸ್ ಮುಖಂಡರು ಒಪ್ಪಿಗೆ ನೀಡುವ ಪ್ರಮಾಣವೇ ಹೆಚ್ಚಿದೆ. ಆಕಸ್ಮಾತ್ ಒಪ್ಪದಿದ್ದರೆ, ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಯತ್ತ ಹೋಗಬಹುದೆಂಬ ಭಯವೂ ಇದೆ.

ಬಿಜೆಪಿಯಲ್ಲಿದ್ದ ಪಕ್ಷೇತರರು:

ಬಿಜೆಪಿಯಲ್ಲಿದ್ದುಕೊಂಡು ರಟ್ಟೀಹಳ್ಳಿ ಭಾಗದಲ್ಲಿ ಪಕ್ಷವನ್ನು ಬಲಪಡಿಸಿದ್ದ ಶಂಕರಗೌಡ ಚನ್ನಗೌಡ್ರ, ಪಕ್ಷದಲ್ಲಿನ ಕೆಲ ಬೆಳವಣಿಗೆಯಿಂದಾಗಿ ನೊಂದಿದ್ದರು. ಹೀಗಾಗಿ, ತಮ್ಮ ತಾಯಿ ಲಲಿತಾ ಚನ್ನಗೌಡ್ರ ಅವರನ್ನು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ 15ನೇ ವಾರ್ಡ್‌ನಿಂದ ಕಣಕ್ಕೆ ಇಳಿಸಿ ಗೆದ್ದಿದ್ದಾರೆ.

ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಶಿವಕುಮಾರ ಉಪ್ಪಾರ (ವಾರ್ಡ್ 9) ಸಹ ಬಿಜೆಪಿಯಲ್ಲಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕೆಲ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಚುನಾವಣೆಗೆ ಟಿಕೆಟ್ ನೀಡುವಂತೆ ಬಿಜೆಪಿ ಮುಖಂಡರನ್ನು ಕೋರಿದ್ದರು. ಆದರೆ, ಟಿಕೆಟ್ ಕೊಟ್ಟಿರಲಿಲ್ಲ. ಬೇಸತ್ತ ಶಿವಕುಮಾರ, ಪಕ್ಷೇತರರಾಗಿ ನಿಂತು ಕಾಂಗ್ರೆಸ್–ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಜಯಶಾಲಿಯಾಗಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಶಂಕರಗೌಡ ಪಾಟೀಲ, ‘ರಟ್ಟೀಹಳ್ಳಿ ಭಾಗದಲ್ಲಿ ಬಿಜೆಪಿ ಬಲಪಡಿಸಲು ಶ್ರಮಿಸಿದ್ದೆ. ಎಪಿಎಂಸಿ ಅಧ್ಯಕ್ಷನಾಗಿ, ರಟ್ಟೀಹಳ್ಳಿ ಗ್ರಾ.ಪಂ. ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಯ ಕೆಲ ಬೆಳವಣಿಗೆಗಳಿಂದ ನೋವಾಗಿತ್ತು. ಹೀಗಾಗಿ, ತಾಯಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿದ್ದೇನೆ’ ಎಂದರು.

ಶಿವಕುಮಾರ ಉಪ್ಪಾರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅದೇ ಪಕ್ಷ ಅಧಿಕಾರಕ್ಕೆ ಬಂದರೆ, ರಟ್ಟೀಹಳ್ಳಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುತ್ತದೆ. ಹೀಗಾಗಿ, ಕಾಂಗ್ರೆಸ್ ಸೇರಿದ್ದೇನೆ. ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನ ನೀಡುವಂತೆಯೂ ಬೇಡಿಕೆ ಇರಿಸಿದ್ದೇನೆ. ಮುಖಂಡರ ಮೇಲೆ ನಂಬಿಕೆಯಿದ್ದು, 30ರವರೆಗೂ ಕಾಯುತ್ತಿದ್ದೇನೆ’ ಎಂದು ಹೇಳಿದರು.

ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪಕ್ಷದ 7 ಸದಸ್ಯರು ಇಬ್ಬರು ಪಕ್ಷೇತರರಿಗೆ ವಿಪ್ ಜಾರಿಗೊಳಿಸಲಾಗುವುದು
ಸಂಜೀವಕುಮಾರ ನೀರಲಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.