ADVERTISEMENT

ಹಾವೇರಿ: ಪರಿಶಿಷ್ಟರಿಗೆ ಕ್ಷೌರ ಮಾಡಲು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:55 IST
Last Updated 25 ಮೇ 2025, 14:55 IST
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್‌.ಸಿ.–ಎಸ್‌.ಟಿ ಕುಂದುಕೂರತೆ ಸಭೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು
ಹಾವೇರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್‌.ಸಿ.–ಎಸ್‌.ಟಿ ಕುಂದುಕೂರತೆ ಸಭೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು   

ಹಾವೇರಿ: ‘ರಾಣೆಬೆನ್ನೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಈ ಸಂಗತಿ ಗೊತ್ತಿದರೂ ಬೀಟ್ ಪೊಲೀಸರು ಮೌನವಾಗಿದ್ದಾರೆ’ ಎಂದು ಸಮುದಾಯದ ಮುಖಂಡರು ದೂರಿದರು.  

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಎಸ್‌.ಸಿ.–ಎಸ್‌.ಟಿ ಕುಂದುಕೂರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಲವು ಸಮಸ್ಯೆ ತೆರೆದಿಟ್ಟರು.

‘ಪ್ರತಿ ಠಾಣೆ ಮಟ್ಟದಲ್ಲಿ ನಿಗದಿಯಂತೆ ಸಭೆ ನಡೆಸಬೇಕು. ಎಸ್‌.ಸಿ.–ಎಸ್‌.ಟಿ ಸಮುದಾಯದವರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಅವರು ಪ್ರತಿ ಸಭೆಗೂ ಹಾಜರಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

ಅಹವಾಲು ಆಲಿಸಿ ಮಾತನಾಡಿದ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ, ‘ಇಲಾಖೆಗೆ ಸಂಬಂಧಿಸಿದಂತೆ ಮುಖಂಡರ ದೂರುಗಳನ್ನು ಆಲಿಸಬೇಕು. ಸಮಸ್ಯೆಗಳನ್ನು 15 ದಿನದೊಳಗೆ ಪರಿಹರಿಸಿ ವರದಿ ಸಲ್ಲಿಸುವಂತೆ ಡಿವೈಎಸ್‌ಪಿಗೂ ಸೂಚನೆ ನೀಡಲಾಗುವುದು. ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ತಿಳಿಸಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ, ಉಪವಿಭಾಗಾಧಿಕಾರಿ ಎಚ್‌.ಬಿ. ಚನ್ನಪ್ಪ ಇದ್ದರು.

‘ಗಸ್ತು ತಿರುಗದ ಪೊಲೀಸರು

‘ಜಿಲ್ಲೆಯಾದ್ಯಂತ ಮದ್ಯ ಅಕ್ರಮ ಮಾರಾಟ ಮರಳುಗಾರಿಕೆ ಮಟ್ಕಾ ಜೂಜು ಹಾವಳಿ ಹೆಚ್ಚಾಗಿದೆ. ಇದರಿಂದ ಎಸ್‌.ಸಿ. ಎಸ್‌.ಟಿ ಸಮುದಾಯದವರಿಗೆ ತೊಂದರೆ ಆಗುತ್ತಿದೆ. ಅಕ್ರಮ ಪ್ರಶ್ನಿಸುವವರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಹಲವೆಡೆ ಬೀಟ್ ಪೊಲೀಸರು ಗಸ್ತು ತಿರುಗುವುದಿಲ್ಲ. ದೇವಸ್ಥಾನಗಳು ಹಾಗೂ ಎಸ್‌.ಸಿ.–ಎಸ್‌.ಟಿ ಸಮುದಾಯದವರ ಕಾಲೊನಿಗಳಲ್ಲಿ ಬೀಟ್ ಪುಸ್ತಕ ಇರಿಸಿಲ್ಲ’ ಎಂದು ಮುಖಂಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.