ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ -ಮುನವಳ್ಳಿ ಗ್ರಾಮದ ಗಡಿಹದ್ದಿನಲ್ಲಿ ನಡೆಯುತ್ತಿರುವ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ದುರ್ಗಾದೇವಿ ಪಲ್ಲಕ್ಕಿ ಮಹೋತ್ಸವ ಸುತ್ತಲಿನ ಗ್ರಾಮಗಳ ಭಕ್ತ ಸಮೂಹದ ನಡುವೆ ಸಡಗರ ಸಂಭ್ರಮದಿಂದ ನಡೆಯಿತು.
ಬಂಕಾಪುರ ಪಟ್ಟಣದ ಕನೋಜ ಗಲ್ಲಿಯಲ್ಲಿರುವ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಆರಂಭವಾದ ಪಲ್ಲಕ್ಕಿ ಮಹೋತ್ಸವ ರಜಪೂತರ ಓಣಿ, ಪೇಟೆ ಮುಖ್ಯರಸ್ತೆ, ಸಿಂಪಿಗಲ್ಲಿ, ನಾಡಕಚೇರಿ, ಕೊಟ್ಟಿಗೇರಿ, ಚಿಲ್ಲೂರ ಓಣಿ, ನರೆಗಲ್ಲ ಓಣಿ, ನೇಕಾರ ಓಣಿ, ಅರಳೆಲೆಮಠದ ಓಣಿ, ಬ್ರಾಹ್ಮಣ ಓಣಿ, ಕಲಕಟ್ಟಿ, ಮಾಗಿಕೆರಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಝಾಂಜ್ ಮೇಳ, ಮಹಿಳೆಯರ ಡೊಳ್ಳು ಮೇಳ ಸೇರಿದಂತೆ ವಿವಿಧ ವಾದ್ಯವೃಂದೊಂದಿಗೆ ಸಾಗಿತು.
ದೇವಿ ಪಲ್ಲಕ್ಕಿ ಮಹೋತ್ಸವಕ್ಕೆ ಪಟ್ಟಣದ ಪ್ರತಿ ಓಣಿಗಳನ್ನು ಸ್ವಚ್ಛಗೊಳಿಸಿ ಮಾವಿನ, ಬಾಳೆಗಿಡದ ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ಪ್ರತಿ ಮನೆಗಳ ಅಂಗಳಕ್ಕೆ ಬರುವ ಪಲ್ಲಕ್ಕಿ ಉತ್ಸವಕ್ಕೆ ಮಹಿಳೆಯರು ಮಕ್ಕಳು ಆರತಿ ಮಾಡಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತ ಸಮೂಹ ಶ್ರದ್ಧಾಭಕ್ತಿ ಸಲ್ಲಿಸಿದರು.
ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಭಕ್ತ ಸಮೂಹಕ್ಕೆ ಕುಡಿಯುವ ನೀರು, ವಸತಿ ಸೌಕರ್ಯ ಕಲ್ಪಿಸುವ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರು.
ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಲಿಂಗನಗೌಡ ಪಾಟೀಲ, ಉಪಾಧ್ಯಕ್ಷ ಹನುಮೇಶ ಹಳವಳ್ಳಿ, ಕಾರ್ಯದರ್ಶಿ ಬಸವರಾಜ ಕೂಲಿ, ಉಮೇಶ ಅಂಗಡಿ, ಗದಿಗಯ್ಯ ಹಿರೇಮಠ, ಅರ್ಚಕ ಸೋಮಂತ ಪೂಜಾರ, ಹಿರಿಯ ಮುಖಂಡ ಪ್ರತಾಪಸಿಂಗ್ ಶಿವಪ್ಪನವರ, ನಾರಾಯಣಸಿಂಗ ಶಿವಪ್ಪನವರ. ಗೋಪಾಲಸಿಂಗ ಬಾಬುಸಿಂಗನವರ, ಮಾಲತೇಶ ಬಾಬುಸಿಂಗನವರ, ನಾರಾಯಣಸಿಂಗ ಕಲಘಟಗಿ, ಹರೀಶ ಭವಾನಿ, ದುಗರ್ಾಸಿಂಗ್ ಕಲಘಟಗಿ, ರಾಘವೇಂದ್ರ ಬಾಬುಸಿಂಗನವರ, ರಮೇಶ ಛವ್ವಿ, ವಿನಾಯಕ ಪೂಜಾರ ಸೇತಿದಂತೆ ಬಿಸನಳ್ಳಿ, ಮುನವಳ್ಳಿ, ಬಂಕಾಪುರ ಸೇರಿದಂತೆ ಸುತ್ತಲಿನ ಗ್ರಾಮದ ಮುಖಂಡರು, ದೇವಸ್ಥಾನ ಸೇವಾ ಸಮಿತಿ ಎಲ್ಲ ಸದಸ್ಯರು ಇದ್ದರು.
‘ಜಾತ್ರಾ ಮಹೋತ್ಸವದಲ್ಲಿ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಬೇಕು. ಸ್ಥಳೀಯ ಯುವಕರು, ಭಕ್ತ ಸಮೂಹ ವಿವಿಧ ಕಾರ್ಯಗಳನ್ನು ಹಂಚಿಕೆ ಮಾಡಿಕೊಂಡು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಬೇಕು’ ಎಂದು ದೇವಸ್ಥಾನ ಸೇವಾ ಸಮಿತಿ ಹಿರಿಯ ಮುಖಂಡ ಸೋಮನಗೌಡ್ರ ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.