ADVERTISEMENT

ಸಾರಿಗೆ ಬಸ್‌ ಸೌಲಭ್ಯಕ್ಕೆ ಮನವಿ

ಶಿಗ್ಗಾವಿ ತಾಲ್ಲೂಕು ಕೇಂದ್ರದಲ್ಲಿ ಡಿಪೊ ನಿರ್ಮಾಣಕ್ಕೆ ಎಸ್‌ಎಫ್‌ಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 13:39 IST
Last Updated 3 ನವೆಂಬರ್ 2021, 13:39 IST
ಶಿಗ್ಗಾವಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಎಸ್‌ಎಫ್‌ಐ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌.ಜಗದೀಶ ಅವರಿಗೆ ಮನವಿ ಸಲ್ಲಿಸಲಾಯಿತು 
ಶಿಗ್ಗಾವಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಎಸ್‌ಎಫ್‌ಐ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್‌.ಜಗದೀಶ ಅವರಿಗೆ ಮನವಿ ಸಲ್ಲಿಸಲಾಯಿತು    

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಸಾರಿಗೆ ಬಸ್‌ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಡಿಪೊ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿಗ್ಗಾವಿ ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶಿಗ್ಗಾವಿ ನಗರಕ್ಕೆ ನೂರಾರು ಹಳ್ಳಿಗಳಿಂದ ದಿನನಿತ್ಯ ವ್ಯಾಪಾರ, ವಹಿವಾಟು, ವಿದ್ಯಾಭ್ಯಾಸ, ಉದ್ಯೋಗ, ಕೂಲಿ ಕೆಲಸಗಳಿಗೆ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಸರ್ಕಾರಿ ನೌಕರರು, ವ್ಯಾಪಾರಸ್ಥರು ಸೇರಿದಂತೆ ಅನೇಕ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲದೆ ಖಾಸಗಿ ವಾಹನಗಳಲ್ಲಿ ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅನೇಕ ವರ್ಷಗಳಿಂದ ಶಿಗ್ಗಾವಿ ತಾಲ್ಲೂಕಿಗೊಂದು ಡಿಪೊ ಮಂಜೂರಾತಿಗಾಗಿ ಎಸ್ಎಫ್ಐ ನಿರಂತರ ಹೋರಾಟ ಮಾಡಿ ಸರ್ಕಾರಿ ಜಾಗವನ್ನು ಉಳಿಸಿಕೊಂಡು ಬಂದಿದೆ. ಸ್ಥಳೀಯ ಶಾಸಕರು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಡಿಪೊ ಮಂಜೂರಾತಿ ನನೆಗುದಿಗೆ ಬಿದ್ದಿದೆ. ಇದರಿಂದಸಾರಿಗೆ ಸಮಸ್ಯೆ ತೀವ್ರವಾಗಿದೆ. ಖುರ್ಷಪುರ, ಕಲ್ಯಾಣ, ಚಾಕಾಪುರ, ಶೀಲವಂತಸೋಮಪುರ, ಮಾಕಪುರ, ಮಡ್ಲಿ, ಹುಲಸೋಗಿ, ಚಂದಾಪುರ, ಮಂಚಪುರ, ಮುಗಳಕಟ್ಟಿ, ಹುನಗುಂದ ಸೇರಿದಂತೆ ಅನೇಕ ಗ್ರಾಮಗಳಿಗೆ ಇದುವರೆಗೂ ಬಸ್ ಸಂಚಾರವಿಲ್ಲ.

ADVERTISEMENT

ತಡಸ, ಹೊಸೂರು, ಹಿರೇಬೆಂಡಿಗೇರಿ, ಕಬನೂರ, ಮುಗಳಿ, ಮನಹಳ್ಳಿ, ಬಮ್ಮನಹಳ್ಳಿ, ಕೋಣನಕೇರಿ, ಕಡಳ್ಳಿ, ನೀರಲಗಿ, ದುಂಡಶಿ, ಮಲ್ಲೂರ, ಮಂತ್ರೋಡಿ, ಸೇರಿದಂತೆ ಅನೇಕ ಹಳ್ಳಿಗಳಿಗೆ ಬಸ್‌ಗಳು ಇದ್ದರೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ಆದ್ದರಿಂದ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಹೆಚ್ಚುವರಿ ಬಸ್ ಗಳನ್ನು ಬಿಡುವುದರ ಜೊತೆಗೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಗಳನ್ನು ಬಿಡಬೇಕು ಎಂದು ಮನವಿ ಮಾಡಿದರು.

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಶಿಗ್ಗಾವಿ ತಾಲ್ಲೂಕು ಮುಖಂಡರಾದ ರವಿ ಬಂಕಾಪುರ, ವಿಜಯ ದಾಸರು, ಪುನೀತ್ ಮಲ್ಲೂರ, ಅರಿಹಂತ ವೈಗುಡ್ಡಿ, ನಾಗೇಶ್ ಬಾರ್ಕಿ, ದರ್ಶನ ವೈ.ಎಚ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.