
ಸವಣೂರ: ಚಳಿ ವಾತಾವರಣದಿಂದಾಗಿ ಸವಣೂರು ವೀಳ್ಯೆದೆಲೆ ಬೆಳೆಯಲ್ಲಿ ಬೆಂಕಿ–ಬೂದಿ ರೋಗ ಕಾಣಿಸಿಕೊಳ್ಳುತ್ತಿದ್ದು, ವೀಳ್ಯೆದೆಲೆಗಳು ಬಳ್ಳಿಯಲ್ಲಿಯೇ ಬಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸವಣೂರಿನ ವೀಳ್ಯೆದೆಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ತಿನ್ನಲು ಹಾಗೂ ಪೂಜೆಗೆ ಇಲ್ಲಿಂದಲೇ ವೀಳ್ಯೆದೆಲೆಗಳು ಹೋಗುತ್ತವೆ. ಈತ, ವೀಳ್ಯೆದೆಲೆ ಬೆಳೆಗೆ ರೋಗ ತಗುಲಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.
ಬೇಸಿಗೆ ಕಾಲ ಆರಂಭವಾಗುತ್ತಿರುವ ದಿನಗಳಲ್ಲಿಯೂ ಚಳಿಗಾಲದ ಛಾಯೆ ಕಡಿಮೆಯಾಗಿಲ್ಲ. ನಿರಂತರವಾಗಿ ಮಂಜು ಬೀಳುತ್ತಿದ್ದು, ವೀಳ್ಯೆದೆಲೆ ಬೆಳೆ ಮೇಲೆ ಪರಿಣಾಮ ಬೀರುತ್ತಿದೆ. ಇಳುವರಿಯೂ ಕಡಿಮೆಯಾಗುತ್ತಿದೆ.
ನವಾಬರ ಸಂಸ್ಥಾನ ಆಡಳಿತ ಹೊಂದಿದ್ದ ಸವಣೂರು ಪ್ರದೇಶದಲ್ಲಿ ನವಾಬರ ಸಹಕಾರದಿಂದ ಹಾಗೂ ಪ್ರೋತ್ಸಾಹದಿಂದ ವೀಳ್ಯೆದೆಲೆ ಬೆಳೆಯನ್ನು ಬೆಳೆಯಲು ಆರಂಭಿಸಿದ್ದಾರೆ.
ಸವಣೂರು ಸೇರಿದಂತೆ ತಾಲ್ಲೂಕಿನ ಕಾರಡಗಿ, ಮಾದಾಪೂರ, ಚಿಲ್ಲೂರ, ಬಡ್ನಿ, ಹೊಸಳ್ಳಿ, ಚೌಡಾಳ, ಬೇವಿನಹಳ್ಳಿ, ಶಿರಬಡಗಿ, ಜಲ್ಲಾಪೂರ, ಕಳಲಕೊಂಡ, ಹತ್ತಿಮತ್ತೂರ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ವೀಳ್ಯೆದೆಲೆ ಬೆಳೆಯುತ್ತಿದ್ದಾರೆ. ಅಂದಾಜು 500 ಹೆಕ್ಟೇರ್ ಭೂಮಿಯಲ್ಲಿ ತೋಟಗಾರಿಕೆ ಬೆಳೆಯಾಗಿ ವೀಳ್ಯೆದೆಲೆ ಬೆಳೆಯಲಾಗುತ್ತಿದೆ.
ನಿರಂತರವಾಗಿ ಎಲೆ ಬಳ್ಳಿಗಳನ್ನು ಪೋಷಣೆ ಮಾಡಿದರೆ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ರೈತರಿದ್ದರು. ಈಗ, ಚಳಿಯಿಂದ ಬೆಳೆ ಹಾನಿಯಾಗುತ್ತಿದೆ.
ತೋಟದಲ್ಲಿ ಬೆಳೆದ ವೀಳ್ಯೆದೆಲೆ ಕತ್ತರಿಸಿ ಪೆಂಡಿಗಳಲ್ಲಿ ಕಟ್ಟಲಾಗುತ್ತದೆ. ಈ ರೀತಿ ಒಂದು ಪೆಂಡಿಯಲ್ಲಿ 12 ಸಾವಿರ ಎಲೆಗಳನ್ನು ಇರಿಸಿ ಪೆಂಡಿ ಕಟ್ಟಲಾಗುತ್ತದೆ. ಎಲೆಗಳಲ್ಲಿ ಉತ್ತಮವಾದ ಬಿಳಿಯಾದ ವೀಳ್ಯೆದೆಲೆ ಇಂದು ಸುಮಾರು 18 ಸಾವಿರ ಮಾರಾಟ ಆಗುತ್ತಿದೆ. ಆದರೆ, ಚಳಿಗೆ, ಬೆಂಕಿ ರೋಗಕ್ಕೆ ಹಾಗೂ ಬೂದಿ ರೋಗಕ್ಕೆ ತುತ್ತಾದ ವೀಳ್ಯೆದೆಲೆ ಸಂಪೂರ್ಣ ಹಾಳಾಗುತ್ತಿದೆ.
ದರ ಹೆಚ್ಚಳ: ವೀಳ್ಯೆದೆಲೆ ಇಳುವರಿ ಕಡಿಮೆಯಾಗಿದ್ದು, ಲಭ್ಯವಿರುವ ವೀಳ್ಯೆದೆಲೆಯ ದರ ಮಾರುಕಟ್ಟೆಯಲ್ಲಿ ಹೆಚ್ಚಳವಾಗಿದೆ. ಈ ಮೊದಲು ₹ 6 ಸಾವಿರದಿಂದ ₹12 ಸಾವಿರಕ್ಕೆ ಒಂದು ಅಂಡಿಗೆ ಮಾರಾಟ ಆಗುತ್ತಿತ್ತು. ಇಂದು, ಒಂದು ಅಂಡಿಗೆ ₹ 18 ಸಾವಿರ ಬೆಲೆಯಾಗಿದೆ.
ಸವಣೂರು ಎಪಿಎಂಸಿ ವ್ಯಾಪ್ತಿಯಲ್ಲಿ ಹಾಗೂ ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ವಾರದ ಮೂರು ದಿನ ವೀಳ್ಯೆದೆಲೆ ಮಾರುಕಟ್ಟೆ ನಡೆಯುತ್ತದೆ. ಈ ಮಾರುಕಟ್ಟೆಗೆ ರಾಣೆಬೆನ್ನೂರು, ಹಾವೇರಿ, ಹರಿಹರ, ದಾವಣಗೇರಿ ಸೇರಿ ವಿವಿಧ ಕಡೆಗಳಿಂದ ವ್ಯಾಪಾರಸ್ಥರು ಬಂದು ವೀಳ್ಯೆದೆಲೆ ಖರೀದಿಸುತ್ತಿದ್ದಾರೆ. ಚಳಿಯಿಂದ ವೀಳ್ಯೆದೆಲೆ ಇಳುವರಿ ಇಲ್ಲ. ಹೀಗಾಗಿ, ಖರೀದಿದಾರರು ರೈತರಿಗೆ ಸೂಕ್ತ ದರ ನೀಡುತ್ತಿಲ್ಲ.
‘ವೀಳ್ಯೆದೆಲೆಗೆ ತಗಲುತ್ತಿರುವ ಬೂದಿ ರೋಗಕ್ಕೆ, ಬೆಂಕಿ ರೋಗಕ್ಕೆ ರೈತರು ಚಳಿಗಾಲ ಆರಂಭಕ್ಕೂ ಮುನ್ನ ಮುಂಜಾಗ್ರತಾ ಕ್ರಮ ವಹಿಸುವುದು ಅವಶ್ಯ. ಆದರೆ, ಸವಣೂರು ರೈತರು ಬೆಳೆಗೆ ಕೇವಲ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿ, ಮೃದು ವೀಳ್ಯೆದೆಲೆ ಬೆಳೆಗೆ ಮುಂದಾಗುತ್ತಿದ್ದಾರೆ. ಅದಕ್ಕೂ ಸಹ ಬೇವಿನ ಎಣ್ಣೆ, ತಿಪ್ಪೆ ಗೊಬ್ಬರ ಸಿಂಪಡಿಸಿದ್ದಲ್ಲಿ ಬೂದಿರೋಗ ತಡೆಯ ಬಹುದಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
ಚಳಿ ಸಂದರ್ಭದಲ್ಲಿ ವೀಳ್ಯೆದೆಲೆಗೆ ಸಮಸ್ಯೆಯಾಗುತ್ತದೆ. ಕೇಂದ್ರ ಸರ್ಕಾರದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸಮೀಕ್ಷೆ ಕೈಗೊಂಡು ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುತ್ತದೆಎಸ್.ಎನ್. ಶಾಮಣ್ಣ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಚಳಿಗೆ ವೀಳ್ಯೆದೆಲೆ ಬೆಳೆ ಸಂಪೂರ್ಣ ಹಾಳಾಗುತ್ತಿದ್ದು ಇಳುವರಿ ಬರುತ್ತಿಲ್ಲ. ರೈತರು ಹಾಗೂ ವ್ಯಾಪಾರಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆಮುಸ್ತಾಕ್ಅಹ್ಮದ್ ಕೋಯ್ತೆವಾಲೆ ವೀಳ್ಯೆದೆಲೆ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.