ADVERTISEMENT

ಸವಣೂರಲ್ಲಿ ಬೀದಿನಾಯಿಗಳ ಹಾವಳಿ: ಪುರಸಭೆಗೆ ಹಿಡಿಶಾಪ– ತಿರುಗಿ ನೋಡದ ಅಧಿಕಾರಿಗಳು

ವಿವಿಧೆಡೆ 20ಕ್ಕೂ ಹೆಚ್ಚು ಬೀದಿನಾಯಿಗಳ ಓಡಾಟ; ಭಯದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 3:14 IST
Last Updated 26 ಸೆಪ್ಟೆಂಬರ್ 2025, 3:14 IST
ಸವಣೂರು ಪಟ್ಟಣದ ಬಸ್‍ ಡಿಪೊ ಬಳಿಯ ಮುಖ್ಯರಸ್ತೆಯಲ್ಲಿ ಓಡಾಡಿದ ಬೀದಿನಾಯಿಗಳ ಹಿಂಡು 
ಸವಣೂರು ಪಟ್ಟಣದ ಬಸ್‍ ಡಿಪೊ ಬಳಿಯ ಮುಖ್ಯರಸ್ತೆಯಲ್ಲಿ ಓಡಾಡಿದ ಬೀದಿನಾಯಿಗಳ ಹಿಂಡು    

ಸವಣೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿವೆ. ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ದರು ಭಯದಲ್ಲಿಯೇ ರಸ್ತೆಯಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸವಣೂರು- ಬಂಕಾ‍ಪುರ ರಸ್ತೆ, ಅಂಬೇಡ್ಕರ ವೃತ್ತ, ಅಧ್ಯಾಪಕ ನಗರ, ಬಸ್ ನಿಲ್ದಾಣ, ವಿ.ಕೃ. ಗೋಕಾಕ ವೃತ್ತ, ಹಾವಣಗಿ ಬಡಾವಣೆ, ದಂಡಿನಪೇಟೆ, ಮುಖ್ಯ ಮಾರುಕಟ್ಟೆ, ಪೊಲೀಸ್ ಠಾಣೆ, ಬುಧವಾರ ಪೇಟೆ ಸೇರಿದಂತೆ ವಿವಿಧೆಡೆ 20ಕ್ಕೂ ಹೆಚ್ಚು ಬೀದಿನಾಯಿಗಳ ಹಿಂಡು ಓಡಾಡುತ್ತಿದೆ.

ಬೆಳಿಗ್ಗೆಯಿಂದ ರಾತ್ರಿಯವರೆಗೂ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತ ಕಚ್ಚಾಡುವ ದೃಶ್ಯಗಳು ಪಟ್ಟಣದ ಜನತೆಯಲ್ಲಿ ಭಯ ತಂದಿವೆ.

ADVERTISEMENT

ಶಾಲೆಗೆ ತೆರಳುವ ಮಕ್ಕಳು, ವಾಯು ವಿಹಾರಕ್ಕೆ ಹೋಗುವವರು, ವೃದ್ಧರು, ವಾಹನ ಸವಾರರು ಸೇರಿದಂತೆ ಸಾರ್ವಜನಿಕರ ಮೈಮೇಲೆ ನಾಯಿಗಳು ಏಕಾಏಕಿ ಎರಗಿ ಕಚ್ಚಿ ಗಾಯಗೊಳಿಸುವ ಘಟನೆಗಳುನಡೆಯುತ್ತಿವೆ. ನಸುಕಿನ ಅವಧಿಯಲ್ಲಿ ಪತ್ರಿಕೆ ಹಾಕುವವರು ಮತ್ತು ಹಾಲು ವಿತರಿಸಲು ಹೋಗುವವರ ಮೇಲೂ ನಾಯಿಗಳು ದಾಳಿ ಮಾಡುತ್ತಿವೆ.

350ಕ್ಕೂ ಹೆಚ್ಚು ಪ್ರಕರಣ : ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮಾರ್ಚ್‍ನಲ್ಲಿ 54, ಏಪ್ರಿಲ್‍ನಲ್ಲಿ 45, ಮೇನಲ್ಲಿ 56, ಜೂನ್‍ನಲ್ಲಿ 45, ಜುಲೈನಲ್ಲಿ 77 ಮತ್ತು ಆಗಸ್ಟ್‌ನಲ್ಲಿ 57, ಸೆಪ್ಟೆಂಬರ್‌ನಲ್ಲಿ 12ರವರೆಗೆ 16 ಜನ ನಾಯಿಗಳ ಕಡಿತಕ್ಕೊಳಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕೆಲವರು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದ ಉದಾಹರಣಿಗಳಿವೆ. ಒಟ್ಟಾರೆ 6 ತಿಂಗಳಿನಲ್ಲಿ 350ಕ್ಕೂ ಹೆಚ್ಚು ಜನ ಮೇಲೆ ನಾಯಿಗಳು ದಾಳಿ ಮಾಡಿವೆ. 

ನಾಯಿ ಹಾವಳಿಯಿಂದ ಅಪಘಾತ ಹೆಚ್ಚಳ: ಮುಖ್ಯ ರಸ್ತೆಗಳಲ್ಲಿ ಸಾಗುವಾಗ ವಾಹನ ಸವಾರರನ್ನು  ಬೀದಿ ನಾಯಿಗಳು ಬೆನ್ನಟ್ಟುತ್ತಿವೆ. ಭಯದಲ್ಲಿ ಸವಾರರು ವಾಹನಗಳಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿರುವ ಘಟನೆಗಳೂ ನಡೆಯುತ್ತಿವೆ.

‘ಸಾರ್ವಜನಿಕರು ನಾಯಿಗಳ ದಾಳಿಯಿಂದ ಬೇಸತ್ತು ಹೋಗಿದ್ದಾರೆ. ಪುರಸಭೆಯು ಬೀದಿ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ, ಬೇರೆಡೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

ಪತ್ರಿಕೆ ವಿತರಣೆಗೆ ತೊಂದರೆ: ‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಿತ್ಯವೂ ಬೆಳಿಗ್ಗೆ ಮನೆ ಮನೆಗೆ ಪತ್ರಿಕೆಗಳನ್ನು ಹಾಕಲು ಹೋದ ಸಂದರ್ಭದಲ್ಲಿ ನಾಯಿಗಳು ಬೆನ್ನಟ್ಟುತ್ತಿವೆ. ಮೈ ಮೇಲೆ ಬರುತ್ತಿವೆ. ಇದರಿಂದ ಪತ್ರಿಕೆ ಹಾಕಲು ತೊಂದರೆ ಆಗುತ್ತಿದೆ’ ಎಂದು ಪತ್ರಿಕಾ ವಿತರಕ ಈರಣ್ಣ ಮತ್ತಿಗಟ್ಟಿ ತಿಳಿಸಿದರು.

‘ಶಾಲಾ ಮಕ್ಕಳು, ವಾಯುವಿಹಾರಿಗಳು, ಮಹಿಳೆಯರು, ವೃದ್ಧರು ಸಹ ಬೀದಿನಾಯಿಗಳಿಂದ ತೊಂದರೆ ಆಗುತ್ತಿದೆ. ಪುರಸಭೆಯವರು ನಾಯಿಗಳನ್ನು ಹಿಡಿದು ಸಂತಾನಹರಣ ಮಾಡಬೇಕು’ ಎಂದು ಆಗ್ರಹಿಸಿದರು.

ಬೀದಿನಾಯಿ ಹಾವಳಿ ನಿಯಂತ್ರಿಸುವಂತೆ ಸ್ಥಳೀಯರು ವಿವಿಧ ಸಂಘಟನೆಯವರು ಮನವಿ ಸಲ್ಲಿಸಿದ್ದಾರೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು

–ನೀಲಪ್ಪ ಹಾದಿಮನಿ ಸವಣೂರು ಪುರಸಭೆ ಮುಖ್ಯಾಧಿಕಾರಿ

‘ನಾಯಿ ಕಡಿತಕ್ಕೆ ಚಿಕಿತ್ಸೆ’

‘ಸವಣೂರಿನಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿವೆ. ನಾಯಿ ಕಡಿತಕ್ಕೆ ಒಳಗಾದವರಿಗೆ ರೇಬಿಸ್ ಚುಚ್ಚುಮದ್ದು ನೀಡಿ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಸವಣೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ತಿಳಿಸಿದರು. ‘ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಇದುವರೆಗೂ ರೇಬಿಸ್ ಪ್ರಕರಣಗಳು ವರದಿಯಾಗಿಲ್ಲ. ಬೀದಿ ನಾಯಿಗಳ ಹಾವಳಿಗೆ ಪುರಸಭೆ ಮುನ್ನೆಚ್ಚರಿಗೆ ತೆಗೆದುಕೊಂಡು ಕಡಿವಾಣ ಹಾಕಿದರೆ ನಾಯಿ ಕಡಿತದ ಪ್ರಕರಣಗಳ ಹತೋಟಿ ಮಾಡಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.