ಸವಣೂರು: ಪಟ್ಟಣದ ಮಾರುಕಟ್ಟ ಪ್ರದೇಶ ಹಾಗೂ ಪ್ರಮುಖ ರಸ್ತೆಗಳಲ್ಲಿ ಪುಟ್‍ಪಾತ್ ಅತಿಕ್ರಮಣಗೊಂಡಿದ್ದು, ಪಾದಚಾರಿಗಳು ಹಾಗೂ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ. ಶಾಲೆ–ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗಲು ರಸ್ತೆಯನ್ನೇ ಅವಲಂಬಿಸಿದ್ದು, ಅಪಘಾತದ ಭಯವೂ ಕಾಡುತ್ತಿದೆ.
ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ (ಪಾಳಾ ಬದಾಮಿ) ಹಾದು ಹೋಗಿದೆ. ರೇಣುಕಾಚಾರ್ಯ ವೃತ್ತ (ಬಂಕಾಪುರ ಕ್ರಾಸ್)ದಿಂದ ಬಸ್ ನಿಲ್ದಾಣ ಎದುರಿನಿಂದ ಅಂಬೇಡ್ಕರ ವೃತ್ತ, ಡಾ. ವಿ.ಕೃ.ಗೋಕಾಕ ವೃತ್ತದೊಂದಿಗೆ ಲಕ್ಷ್ಮೇಶ್ವರ ನಾಕಾದವರಿಗೂ ನಿರ್ಮಿಸಿರುವ ಪುಟ್‍ಪಾತ್ ವ್ಯಾಪಾರಸ್ಥರಿಂದ ಅತಿಕ್ರಮಣವಾಗಿದೆ.
ಪುಟ್‍ಪಾತ್ ಮೇಲೆ ಬೀದಿಬದಿ ವ್ಯಾಪಾರಸ್ಥರು ಹೊಟ್ಟೆಪಾಡಿಗೆ ಸಣ್ಣಪುಟ್ಟ ವ್ಯಾಪಾರ ಕೈಗೊಳ್ಳುತ್ತಿದ್ದರೆ, ಕೆಲವರು ಕುಟುಂಬಸ್ಥರ ನಿವೇಶನದಂತೆ ಜಾಗೆಯನ್ನು ಅತಿಕ್ರಮಣಗೊಳಿಸಿ ಇತರರಿಗೆ ಭೂ ಬಾಡಿಗೆ ನೀಡಿ ಹಣ ಗಳಿಕೆಯಲ್ಲಿ ತೊಡಗಿರುವ ಆರೋಪವಿದೆ.
ಅತಿಕ್ರಮಣ ಮಾಡಿದ ಪುಟ್‌ಪಾತ ಜಾಗ ಬಾಡಿಗೆ ನೀಡಿರುವುದು ಗೊತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ಮಾರುಕಟ್ಟೆಯ ಸಿಂಪಿಗಲ್ಲಿಯಿಂದ ಭರಮಲಿಂಗೇಶ್ವರ ವೃತ್ತ, ಉಪ ವಿಭಾಗಾಧಿಕಾರಿಗಳ ಕಚೇರಿ ವೃತ್ತದಿಂದ ಎಸ್‍ಬಿಐ ಬ್ಯಾಂಕ್ ವೃತ್ತದವರಿಗೆ ಪಾದಚಾರಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಕಾರಣ, ಮುಖ್ಯ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರು ತಮ್ಮ ಅಂಗಡಿ–ಕಟ್ಟಡಗಳ ವ್ಯಾಪ್ತಿ ಮೀರಿ ಪುಟ್‍ಪಾತ್ ವಿಸ್ತರಿಸಿಕೊಂಡಿದ್ದಾರೆ. ಇಂಥವರ ಮೇಲೆ ಪುರಸಭೆ ಹಾಗೂ ಪೋಲಿಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಅಷ್ಟೇ ಅಲ್ಲದೇ ಅತಿಕ್ರಮಣ ತೆರವುಗೊಳಿಸಿ ಪಾದಚಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಪಲವಾಗಿದೆ.
ಸಂಚಾರ ದಟ್ಟಣೆ: ಪಟ್ಟಣದಲ್ಲಿ ಪುಟ್‍ಪಾತ್ ಒತ್ತುವರಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಮುಖ್ಯ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಓಡಾಡುವುದು ಕಷ್ಟವಾಗಿದೆ.
ವ್ಯಾಪಾರಸ್ಥರಿಂದ ಅತಿಕ್ರಮಣ: ಮುಖ್ಯ ಮಾರುಕಟ್ಟೆಯಲ್ಲಿ ಸುಮಾರು 400 ರಿಂದ 500 ವ್ಯಾಪಾರಸ್ಥರು ಸ್ವಂತ ಕಟ್ಟಡ ಹೊಂದಿದ್ದಾರೆ. ಅದರಲ್ಲಿ ಬಹುತೇಕ ವ್ಯಾಪಾರಸ್ಥರು ಕಾನೂನು ಮೀರಿ ಪುಟ್‍ಪಾತ್‍ನೊಂದಿಗೆ ಮುಖ್ಯ ರಸ್ತೆಯವರಿಗೂ ತಗಡಿನ ಶೆಡ್ ನಿರ್ಮಿಸಿ ತಮ್ಮ ಕಟ್ಟಡವನ್ನು ವಿಸ್ತರಿಸಿಕೊಂಡಿದ್ದಾರೆ.
ಅಧಿಕಾರಿಗಳಿಗೆ ಒತ್ತಡ: ಪಟ್ಟಣದ ಎಪಿಎಂಸಿ ಮುಂಭಾಗ ಸೇರಿದಂತೆ ವಿವಿಧ ಸ್ಥಳಗಳಲ್ಲಿನ ಪುಟ್‍ಪಾತ್ ಅತಿಕ್ರಮಣ ತೆರವಿಗಾಗಿ ಮುಂದಾಗುವ ಅಧಿಕಾರಿಗಳಿಗೆ ಸ್ಥಳೀಯ ರಾಜಕೀಯ ನಾಯಕರಿಂದ ಒತ್ತಡಗಳು ಬರುತ್ತಿರುವ ಆರೋಪವಿದೆ.
ಎಸ್‍ಬಿಐ ಬ್ಯಾಂಕ್ ಎದುರಿನ ಎರಡು ಬದಿ ಪುಟ್‍ಪಾತ್ ಸಂಪೂರ್ಣ ಅತಿಕ್ರಮಣವಾಗಿದೆ. ಕೂಡಲೇ ಪುಟ್‍ಪಾತ್ ಅತಿಕ್ರಮಣ ತೆರವುಗೊಳಿಸಲು ಪುರಸಭೆ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.
ಪುಟ್‍ಪಾತ್ ಅತಿಕ್ರಮಣ ತೆರವಿಗಾಗಿ ಯೋಜನೆ ರೂಪಿಸಲಾಗಿದೆ. ಪೋಲಿಸ್ ಇಲಾಖೆ ಸಹಕಾರದೊಂದಿಗೆ ಸದ್ಯದಲ್ಲೇ ಕಾರ್ಯಾಚರಣೆ ಕೈಗೊಳ್ಳಲಾಗುವುದುನೀಲಪ್ಪ ಹಾದಿಮನಿ ಸವಣೂರ ಪುರಸಭೆ ಮುಖ್ಯಾಧಿಕಾರಿ
ಪುಟ್‍ಪಾತ್ ಅತಿಕ್ರಮಣ ತೆರವಿಗಾಗಿ ಪುರಸಭೆಗೆ ತಿಳಿಸಿಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆಆನಂದ ಒನಕುದ್ರೆ ಸವಣೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.