ADVERTISEMENT

ಇಲಾಖಾವಾರು ಸಿಗಬೇಕಾದ ಸೌಲಭ್ಯ ಕಲ್ಪಿಸಿ

ಕುಂದುಕೊರತೆ ಸಭೆ: ಅಧಿಕಾರಿಗಳಿಗೆ ತಹಶೀಲ್ದಾರ್ ಯಲ್ಲಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:52 IST
Last Updated 30 ಸೆಪ್ಟೆಂಬರ್ 2025, 6:52 IST
ಶಿಗ್ಗಾವಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿದರು
ಶಿಗ್ಗಾವಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿದರು   

ಶಿಗ್ಗಾವಿ: ‘ಪ್ರತಿ ಇಲಾಖೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಶೇಕಡಾವಾರು ಸೌಲಭ್ಯಗಳನ್ನು ನೀಡಿವೆ. ಆಯಾ ಇಲಾಖೆಗಳ ಮುಖ್ಯಸ್ಥರು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು’ ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಮುತ್ತಳ್ಳಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿರುವ ಜಮೀನನ್ನು ರೈತರ ಹೆಸರಿನಲ್ಲಿ ನೋಂದಣಿ ಮಾಡಿಕೊಡಬೇಕೆಂದು ರೈತ ಫಕ್ಕೀರಪ್ಪ ಬಾರಕೆರ ಸಭೆಯಲ್ಲಿ ಮನವಿ ಮಾಡಿದರು. ಸರ್ಕಾರಿ ಪಡಾ ಜಮೀನು ಇದ್ದರೆ ನೀಡಬಹುದು. ಬಗರ್ ಹುಕುಂನಲ್ಲಿ ನೀಡಬಹುದು. ಆದರೆ ಇದು ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾರಣ ನೀಡಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

‘ನಿವೃತ್ತ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರಿ ಜಮೀನು ನೀಡಬಹುದು. ನಮ್ಮ ಕ್ಷೇತ್ರದಿಂದ 4 ಅರ್ಜಿಗಳು ಬಂದಿವೆ. ಆದರೆ ನಮ್ಮ ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಜಮೀನು ಇಲ್ಲದಿರುವ ಕಾರಣ ನೀಡಿಲ್ಲ. ತಾಲ್ಲೂಕು, ಜಿಲ್ಲೆ ವ್ಯಾಪ್ತಿಯಲ್ಲಿ ಜಮೀನು ಸಿಕ್ಕರೆ ಜಮೀನು ನೀಡಲಾಗುವುದು. ಅಥವಾ ಸ್ಥಳೀಯವಾಗಿ ಮನೆ ಕಟ್ಟಿಕೊಳ್ಳಲು ಖಾಲಿ ನಿವೇಶನಗಳನ್ನು ನೀಡಬಹುದಾಗಿದೆ’ ಎಂದರು.

‘ತಿಮ್ಮಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದಲ್ಲಿ ಮದ್ಯ ಅಕ್ರಮ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಎಸ್.ಸಿ, ಎಸ್.ಟಿ ಕಾಲೊನಿಯಲ್ಲಿ ಹೆಚ್ಚಿನ ಮಾರಾಟ ಕಂಡು ಬರುತ್ತಿದೆ. ಆದರೂ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಜನಾಂಗದವರು ಕುಡಿತದ ಚಟಕ್ಕೆ ಅಂಟಿಕೊಂಡಿದ್ದಾರೆ. ಮದ್ಯ ಅಕ್ರಮ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

‘ಮಟ್ಕಾ, ಒಸಿ ಅಡ್ಡಿಗಳ ಮೇಲೆ ದಾಳಿ ಮಾಡಿ ಸುಮಾರು 12 ಪ್ರಕರಣಗಳನ್ನು ದಾಖಲಿಸಿಕೊಂಡು ಅದರಲ್ಲಿ ಭಾಗಿಯಾದ ಸುಮಾರು 60 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಪಿಐ ವೀರಭದ್ರಯ್ಯ ಹಿರೇಮಠ ಸಭೆಗೆ ತಿಳಿಸಿದರು.

‘ಎಸ್.ಸಿ, ಎಸ್.ಟಿ ಕಾಲೊನಿನಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಿಗ್ಗಾವಿ, ಬಂಕಾಪುರ ಪಟ್ಟಣದಲ್ಲಿ ಪುರಸಭೆ ಕಸ ವಿಲೇವಾರಿ ವಾಹನಗಳು ನಿತ್ಯ ಓಡಾಡಬೇಕು’ ಎಂದು ಚಲವಾದಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಮೋದ ಚಲವಾದಿ ಸಭೆಗೆ ತಿಳಿಸಿದರು. ಸಮುದಾಯದ ಜನರ ಒಪ್ಪಿಗೆ ಇದ್ದರೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ತಹಶೀಲ್ದಾರ್ ಯಲ್ಲಪ್ಪ ತಿಳಿಸಿದರು.

ಮಡ್ಲಿ ಮತ್ತು ವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿನ ಶೇ 15ರ ಹಣಕಾಸಿನ ಯೋಜನೆಯಲ್ಲಿ ಅಕ್ರಮವಾಗಿದೆ. ಆದರೆ ಅಧಿಕಾರಿಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು. ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮುಖಂಡ ಮಹೇಶ ತಳವಾರ ಸಭೆಗೆ ತಿಳಿಸಿದರು. ತಕ್ಷಣ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳತ್ತೇವೆ ಎಂದು ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ ಸಾಳೊಂಕಿ ಹೇಳಿದರು.

ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಮೀಸಲಾತಿ ಪ್ರಕಾರ ಗುತ್ತಿಗೆ ಕೆಲಸಗಾರರನ್ನು ನೇಮಿಸಬೇಕು. ಹಿರೇಮಣಕಟ್ಟಿ ಎಸ್.ಸಿ ಕಾಲೊನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾದ ₹20 ಲಕ್ಷ ಅನುದಾನ ಕಳೆದ 3 ವರ್ಷಗಳ ಹಿಂದೆ ಮಂಜುರಾಗಿದೆ. ಲೋಕೋಪಯೋಗಿ ಇಲಾಖೆ ಈ ಕುರಿತು ಗಮನ ಹರಿಸುತ್ತಿಲ್ಲ. ಎಸ್.ಸಿ ಕಾಲೊನಿಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಮಾಡುವಂತೆ ಒತ್ತಾಯಿಸಲಾಯಿತು.

ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ ಸಾಳೊಂಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸರಸ್ವತಿ ಗಜಕೋಶ, ಮುಖಂಡರಾದ ಎಸ್.ಎಫ್.ಮಣಕಟ್ಟಿ, ಅಶೋಕ ಕಾಳೆ, ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ಮಂಜುನಾಥ ಮಲ್ಲಾಡದ, ಗದಿಗೆಪ್ಪ, ಹನುಮಂತ ಬಂಡಿವಡ್ಡರ, ನೀಲಮ್ಮ ಕಾಗವಾಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.