ADVERTISEMENT

ಬ್ಯಾಡಗಿ | ಆಟೊ ಪಲ್ಟಿ: ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 2:25 IST
Last Updated 1 ಡಿಸೆಂಬರ್ 2025, 2:25 IST
ಬ್ಯಾಡಗಿ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದ ಬಳಿ 12ಕ್ಕೂ ಹೆಚ್ಚು ಮಕ್ಕಳನ್ನು ಕಾಗಿನೆಲೆಯಿಂದ ಕರೆತರುತ್ತಿದ್ದ ವೇಳೆ ಅಪಘಾತಕ್ಕೀಡಾದ ಆಟೊ
ಬ್ಯಾಡಗಿ ತಾಲ್ಲೂಕಿನ ಅಂಗರಗಟ್ಟಿ ಗ್ರಾಮದ ಬಳಿ 12ಕ್ಕೂ ಹೆಚ್ಚು ಮಕ್ಕಳನ್ನು ಕಾಗಿನೆಲೆಯಿಂದ ಕರೆತರುತ್ತಿದ್ದ ವೇಳೆ ಅಪಘಾತಕ್ಕೀಡಾದ ಆಟೊ   

ಬ್ಯಾಡಗಿ: ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಉರ್ದು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಗಿನೆಲೆಯಿಂದ ಕರೆ ತರುತ್ತಿದ್ದ ಆಟೊ ವಾಹನ ಅಂಗರಗಟ್ಟಿ ಗ್ರಾಮದ ಬಳಿ ಪಲ್ಟಿಯಾಗಿ ಮೂವರು ಮಕ್ಕಳು ಮತ್ತು ಪೋಷಕರೊಬ್ಬರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

12ಕ್ಕೂ ಹೆಚ್ಚು ಮಕ್ಕಳನ್ನು ಆಟೊದಲ್ಲಿ ಕರೆತರಲಾಗಿತ್ತು. ಮಕ್ಕಳೊಂದಿಗೆ ಪೋಷಕರೊಬ್ಬರನ್ನು ಹೊರತುಪಡಿಸಿ ಶಿಕ್ಷಕರಾರೂ ಇರಲಿಲ್ಲ ಎನ್ನಲಾಗಿದೆ. ಎದುರಿಗೆ ಬರುತ್ತಿದ್ದ ಬೈಕ್‌ ತಪ್ಪಿಸಲು ಹೋಗಿ ಆಟೊ ವಿದ್ಯುತ್‌ ಕಂಬಕ್ಕೆ ಬಡಿದು ನಂತರ ಪಲ್ಟಿಯಾಗಿದೆ. ತಕ್ಷಣ ಮಕ್ಕಳನ್ನು ಬೇರೊಂದು ವಾಹನದ ಮೂಲಕ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಕ್ಕಳಾದ ಇಸ್ಮೌಲ್ ಹಾವೇರಿ, ಅಹಜರತಬಿಲಾಲ ಮುಲ್ಲಾ, ಮೋದಿಹಾ ಮುಲ್ಲಾ ಹಾಗೂ ಪೋಷಕರಾದ ಕೌಸರಬಾನು ಮಣಿಗಾರ ಗಾಯಗೊಂಡವರು.ಅವರು ಈಗ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ADVERTISEMENT

ನಿರ್ಲಕ್ಷ್ಯ ಆರೋಪ : ಡಿಪಿಇಪಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಐದು ಜನ ಶಿಕ್ಷಕರಿದ್ದು, ಈ ಪೈಕಿ ಮುಖ್ಯ ಶಿಕ್ಷಕ ಸೇರಿ ಇಬ್ಬರು ರಜೆಯ ಮೇಲಿದ್ದಾರೆ. ಬ್ಯಾಡಗಿ ಪಟ್ಟಣದಲ್ಲಿ ವಾಸವಾಗಿದ್ದ ಶಿಕ್ಷಕಿ ಕಾಗಿನೆಲೆಯಿಂದ ಮಕ್ಕಳನ್ನು ಕಳುಹಿಸಿದರೆ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕರೆದುಕೊಡು ಹೋಗುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿದ್ದ ಶಿಕ್ಷಕರು ಮಕ್ಕಳನ್ನು ಒಬ್ಬ ಪೋಷಕರೊಂದಿಗೆ  ಆಟೊದಲ್ಲಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಅಪಘಾತ ನಡೆದ ತಕ್ಷಣ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬರಲಾಗಿದೆ.
ಎಸ್‌.ಜಿ.ಕೋಟಿ ಬಿಇಒ ಬ್ಯಾಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.