ADVERTISEMENT

ಶರಣ ಸಂಗಮ: ಸಂಸ್ಕೃತಿಯ ಸರಳ ನಿರೂಪಣೆ ವಚನದಲ್ಲಿದೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:20 IST
Last Updated 8 ಅಕ್ಟೋಬರ್ 2024, 16:20 IST
ಹಾನಗಲ್ ವಿರಕ್ತಮಠದಲ್ಲಿ ಸೋಮವಾರ ನಡೆದ ಶರಣ ಸಂಗಮ ಕಾರ್ಯಕ್ರಮವನ್ನು ಎಂ.ಎಸ್‌.ಹುಲ್ಲೂರ ಉದ್ಘಾಟಿಸಿದರು
ಹಾನಗಲ್ ವಿರಕ್ತಮಠದಲ್ಲಿ ಸೋಮವಾರ ನಡೆದ ಶರಣ ಸಂಗಮ ಕಾರ್ಯಕ್ರಮವನ್ನು ಎಂ.ಎಸ್‌.ಹುಲ್ಲೂರ ಉದ್ಘಾಟಿಸಿದರು   

ಹಾನಗಲ್: ಆದರ್ಶ ಸಂಸ್ಕೃತಿಯ ಸರಳ ನಿರೂಪಣೆ, ಸ್ವಚ್ಛಂದ ಮಾನವೀಯ ಮೌಲ್ಯ ಬಿತ್ತಿ ಬೆಳಕು ಚೆಲ್ಲಿದ ವಚನಕಾರರು ಮಾನವನಿಗೆ ದಟ್ಟ ಅನುಭವ ನೀಡಿದ್ದಾರೆ. ಗಂಭೀರ ಸಂವಾದವೂ ಸೇರಿ ವಿಶಾಲ ತಾತ್ವಿಕ ಚಿಂತನೆ ನೀಡಿದ ಅವರ ಹಾದಿ ಮನುಕುಲಕ್ಕೆ ಸದಾ ಪ್ರೇರಣಾದಾಯಕ ಎಂದು ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಉಪಾಧ್ಯಕ್ಷ ಎಂ.ಎಸ್‌.ಹುಲ್ಲೂರ ಹೇಳಿದರು.

ಸೋಮವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕ ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಯಕ ಸಂಸ್ಕೃತಿಯ ಪ್ರತಿನಿಧಿಗಳಾಗಿ ಇಡೀ ನಾಡಿನ ತುಂಬ ಪ್ರಗತಿಪರ ಹೆಜ್ಜೆ ಗುರುತು ಮೂಡಿಸಿದ ಶರಣರ ನಡೆ-ನುಡಿಗಳು ಈ ದೇಶದ ಸಾಂಸ್ಕೃತಿಕ, ಸಾಹಿತ್ಯಕ ಇತಿಹಾಸಕ್ಕೆ ದೊಡ್ಡ ಕೊಡುಗೆ ಎಂದರು.

ADVERTISEMENT

ಶರಣರ ಸತ್ಯ ಸಂದೇಶಗಳ ಕುರಿತು ಉಪನ್ಯಾಸ ನೀಡಿದ ಅಕ್ಕಮ್ಮ ಶೆಟ್ಟರ, ಕಾಯಕಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಸ್ತ್ರೀ ವಾದದ ಸಂದರ್ಭದಲ್ಲಿ ಜಾಗೃತವಾದ ಸಂದೇಶಗಳನ್ನು ನೀಡಿದ ವಚನಕಾರರು ಸಮಾನತೆಯ ದೊಡ್ಡ ಶಕ್ತಿಯಾಗಿದ್ದರು. ಅಸಮಾನತೆಯ ನಿವಾರಣೆಗಾಗಿ ನಡೆದ ಹೋರಾಟದಲ್ಲಿ ಶರಣರು ಸಂಕಷ್ಟಗಳಿಗೆ ಗುರಿಯಾದರು. ಸಮಾಜವನ್ನು ತಿದ್ದಿ, ತೀಡಿ ಮುನ್ನಡೆಸಿದ ವಚನಕಾರರಿಗೆ ಜಾತ್ಯಾತೀತ ನಿಲುವು ಇನ್ನಷ್ಟು ಪುಷ್ಠಿ ನೀಡಿತು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಶರಣ ಸಾಹಿತ್ಯ ಪರಿಷತ್ತು ಶರಣರ ಸಂದೇಶಗಳನ್ನು ಮನೆ, ಮನೆಗೆ ತಲುಪಿಸುವ ಕ್ರಿಯಾಶೀಲ ಸಂಘಟನೆ. ಈ ಮೂಲಕ ಮಕ್ಕಳು, ಯುವಕರ ಮನಸ್ಸಿನಲ್ಲಿ ಸರಳ ಸಾತ್ವಿಕ ಜೀವನದ ಸಂದೇಶ ಪಸರಿಸುತ್ತಿದೆ ಎಂದರು.

ನಗರ ಘಟಕದ ಉಪಾಧ್ಯಕ್ಷ ಅಶೋಕ ದಾಸರ ಪ್ರಾಸ್ತಾವಿಕ ಮಾತನಾಡಿದರು. ರವಿಬಾಬು ಪೂಜಾರ, ಪ್ರವೀಣ ಬ್ಯಾತನಾಳ, ಮಾರುತಿ ಶಿಡ್ಲಾಪೂರ, ಸುಜಾತಾ ನಂದೀಶೆಟ್ಟರ, ಎಸ್.ಸಿ.ಕಲ್ಲನಗೌಡರ, ಬಿ.ಎಂ.ಸಂಗೂರ, ರೇಖಾ ಶೆಟ್ಟರ, ನಿರ್ಮಲಾ ಮಹಾರಾಜಪೇಟೆ, ಸುವರ್ಣ ಹಿರೇಗೌಡರ, ಅನಿತಾ ಕಿತ್ತೂರ, ಪಲ್ಲವಿ ಮಿರ್ಜಿ, ಸುಮಂಗಲಾ ಕಟ್ಟಿಮಠ, ಸಿದ್ದಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.