ADVERTISEMENT

ಶಿಗ್ಗಾವಿ | ಉದ್ಘಾಟನೆಯಾದರೂ ಸಿಗದ ಆಶ್ರಯ ಮನೆಗಳು; ವಸತಿಗಾಗಿ ಫಲಾನುಭವಿಗಳ ಪರದಾಟ

ಎಂ.ವಿ.ಗಡಾದ
Published 9 ಅಕ್ಟೋಬರ್ 2023, 7:18 IST
Last Updated 9 ಅಕ್ಟೋಬರ್ 2023, 7:18 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜಿ+1 ಮನೆಗಳ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಜಿ+1 ಮನೆಗಳ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಆಶ್ರಯ ಮನೆಗಳಿಗಾಗಿ 12 ವರ್ಷಗಳಿಂದ ಬಡ ಫಲಾನುಭವಿಗಳು ಪರದಾಡುವಂತಾಗಿದೆ.

ಜಿ+1 ಮನೆಗಳ ಉದ್ಘಾಟನೆಯಾಗಿ ಮೂರು ತಿಂಗಳು ಕಳೆದರೂ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯಾಗಿಲ್ಲ. 

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ಪಟ್ಟಣದಲ್ಲಿ ಕಳೆದ 2013-14ರಲ್ಲಿ ಮನೆಗಳಿಲ್ಲದ ಫಲಾನುಭವಿಗಳಿಗೆ ಸ್ಥಳೀಯ ಪುರಸಭೆ ವತಿಯಿಂದ ಮನೆ ನಿರ್ಮಾಣ ಮಾಡಿಕೊಡುವುದಾಗಿ ಪ್ರತಿ ಫಲಾನುಭವಿಗಳಿಂದ ಎರಡು ಹಂತದಲ್ಲಿ ಸುಮಾರು ₹40 ಸಾವಿರ ವಂತಿಗೆ ಹಣ ತುಂಬಿಸಿಕೊಳ್ಳಲಾಗಿದೆ. ಆದರೆ ಈವರೆಗೆ ಯಾವುದೇ ಮನೆಗಳನ್ನು ನೀಡಿಲ್ಲ. ಫಲಾನುಭವಿಗಳು ಇಂದು, ನಾಳೆ ಮನೆ ನೀಡುತ್ತಾರೆಂಬ ಭರವಸೆಯಲ್ಲಿ ಕಾಲ ಕಳೆಯುವಂತಾಗಿದೆ.

ADVERTISEMENT

‘ಬಂಕಾಪುರ ಪಟ್ಟಣದಲ್ಲಿ 604 ಮನೆಗಳನ್ನು ನಿರ್ಮಿಸಲು ಅನುಮತಿ ದೊರೆತಿದ್ದರೂ 12 ವರ್ಷಗಳಿಂದ ಸುಮಾರು 352 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಹೀಗಾಗಿ ಮನೆಗಳ ನಿರ್ಮಾಣಕ್ಕೆ 12 ವರ್ಷ ತೆಗೆದುಕೊಂಡರೆ ಮನೆ ಇಲ್ಲದ ಬಡ ಜನತೆ ಪರಿಸ್ಥಿತಿ ಏನಾಗಬೇಕು. ಈವರೆಗೆ ಮನೆಗಳ ಹಂಚಿಕೆ ಮಾಡದ ಕಾರಣ ಫಲಾನುಭವಿಗಳು ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ. ಹೀಗಾಗಿ ಬದುಕು ಸಾಗಿಸುವುದು ಕಷ್ಟವಾಗಿದೆ‘ ಎಂದು ಫಲಾನುಭವಿ ಶಿವಕ್ಕ ಮಹಾಲಿಂಗಪ್ಪ ಕೊಳಲ ಸಮಸ್ಯೆ ತೋಡಿಕೊಂಡರು. 

ಕಳಪೆ ಕಾಮಗಾರಿ– ಆರೋಪ: ನಿರ್ಮಾಣವಾದ ಕೆಲವು ಮನೆಗಳ ಕಿಟಕಿಗಳು ಹಾಳಾಗಿವೆ. ಕೆಲವು ಮನೆಗಳ ಗೋಡೆಗಳು ಈಗಾಗಲೇ ಬಿರುಕು ಬಿಟ್ಟಿವೆ. ಅವುಗಳಿಗೆ ಬಣ್ಣ ತುಂಬಿ ಕಾಣದಂತೆ ಮಾಡಲಾಗಿದೆ. ಕಳಪೆ ಕಾಮಗಾರಿ ನಡೆಸಿದ ಪರಿಣಾಮ ಮನೆಗಳು ಉದ್ಘಾಟನೆ ವೇಳೆಯೇ ಬಿರುಕು ಬಿಟ್ಟಿವೆ ಎನ್ನಲಾಗುತ್ತಿದೆ.

ವಿದ್ಯುತ್ ತಂತಿಗಳು ತುಂಡಾಗಿ ಹೋಗಿವೆ. ಮನೆಗಳು ಸುತ್ತಲಿನ ಚರಂಡಿಗಳಲ್ಲಿನ ಕೊಳಚೆ ನೀರು ಹರಿದು ಹೋಗಲಾರದ ಸ್ಥಿತಿಯಲ್ಲಿದೆ. ಹೀಗಾಗಿ ದುರ್ವಾಸನೆ ಹರಡಿ ರೋಗ–ರುಜಿನಗಳು ಹರಡುವ ಸ್ಥಿತಿ ಈಗಾಗಲೇ ಉಂಟಾಗಿದೆ. ಹೀಗಾಗಿ ಜನ ವಾಸಿಸಲು ಭಯಪಡುವಂತಾಗಿದೆ ಎಂದು ಸಾರ್ವಜನಿಕರು, ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಅಂದಿನ ವಸತಿ ಸಚಿವ ವಿ.ಸೋಮಣ್ಣ ಅವರ ಮುಂದೆ ಆರೋಪ ಮಾಡಿದ್ದರು.

ಅನೈತಿಕ ಚಟುವಟಿಕೆಗಳ ತಾಣ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾದ ಮನೆಗಳು ಪಾಳುಬಿದ್ದಿದ್ದು, ಅನೈತಿಕ ಚಟವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಪುಂಡ ಪೋಕರಿಗಳು ರಾತ್ರಿ ವೇಳೆ ಮದ್ಯಪಾನ ಮಾಡುತ್ತಾ ಗಲಾಟೆ ಮಾಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಈಗಾಗಲೇ ನಿರ್ಮಾಣವಾದ ಮನೆಗಳು ಕಳಪೆ ಕಾಮಗಾರಿಯಾಗಿವೆ. ಎಲ್ಲ ಮನೆಗಳನ್ನು ತೆರವುಗೊಳಿಸಿ ಮರು ನಿರ್ಮಾಣ ಮಾಡಬೇಕು ಎಂದು ಪುರಸಭೆ ಸದಸ್ಯರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಆರೋಪಿಸಿದ್ದರು. ಬಡವರ ಸಮಾಧಿ ಮೇಲೆ ಮನೆ ಕಟ್ಟುವುದು ಬೇಡ ಎಂದು ಗುತ್ತಿಗೆದಾರರ ಮತ್ತು ಎಂಜಿನಿಯರ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. 

ತಪ್ಪೊಪ್ಪಿಕೊಂಡಿದ್ದ ಎಂಜಿನಿಯರ್‌: ಹಿಂದೆ ಮನೆಗಳ ಹಂಚಿಕೆ ಕುರಿತು ನಡೆದ ಪುರಸಭೆ ಸದಸ್ಯರ ಸಭೆಯಲ್ಲಿ ಎಂಜಿನಿಯರ್‌ ಮಂಜುನಾಥ ಅವರು ಕಳಪೆ ಕಾಮಗಾರಿ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. ಒಂದೇ ಮನೆ ಕಳಪೆಯಾಗಿದೆ ಅದನ್ನು ಸರಿಪಡಿಸುತ್ತೇನೆ ಎಂದು ಸಬೂಬು ಹೇಳಿದ್ದರು. ಕಾಮಗಾರಿ ಪೂರ್ಣ ಕಳಪೆಯಾಗಿದ್ದು, ಎಲ್ಲ ಮನೆಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿದ್ದರು. 

ಬಂಕಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಜಿ+1 ಮನೆಗಳ ಆವರಣದಲ್ಲಿ ಕಸ ಹರಡಿದ್ದು ಅವ್ಯವಸ್ಥೆ ತಾಣವಾಗಿದೆ
ಬಂಕಾಪುರ ಪಟ್ಟಣದಲ್ಲಿ ಜಿ+1ಮನೆಗಳ ನಿರ್ಮಾಣವಾದ ಮನೆಗಳ ಮುಂದಿನ ಚರಂಡಿಗಳು ಅವೈಜ್ಞಾನಿವಾಗಿದ್ದು ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ
ಬಂಕಾಪುರ ಪಟ್ಟಣದಲ್ಲಿ ಜಿ+1ಮನೆಗಳ ನಿರ್ಮಾಣಗೊಂಡ ಮನೆಗಳು ಆರಂಭಿಕ ಹಂತದಲ್ಲೇ ಬಿರುಕು ಬಿಟ್ಟಿರುವುದು
20 ವರ್ಷಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿದ್ದು ಪ್ರತಿ ವರ್ಷ ಯೋಜನಾ ಗಾತ್ರ ಹೆಚ್ಚಾಗುತ್ತಿದೆ. ಆದರೆ ಮನೆಗಳ ಹಂಚಿಕೆ ಮಾತ್ರ ನಡೆದಿಲ್ಲ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ
ಮಂಜುನಾಥ ಕೂಲಿ ಸಮಾಜ ಸೇವಕ ಬಂಕಾಪುರ
ನಿರ್ಮಾಣಗೊಂಡಿರುವ ಮನೆಗಳ ಉದ್ಘಾಟನೆಯಾಗಿದ್ದು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಅವುಗಳ ದುರಸ್ತಿ ಕಾರ್ಯ ಮುಗಿದ ತಕ್ಷಣ ಮನೆಗಳ ಹಂಚಿಕೆ ಮಾಡಲಾಗುವುದು
– ಶಿವಪ್ಪ ಎ ಪುರಸಭೆ ಮುಖ್ಯಾಧಿಕಾರಿ ಬಂಕಾಪುರ
ಮಾಂಗಲ್ಯ ಮಾರಿ ಹಣ ತುಂಬಿದ್ದೇನೆ!
‘ಮಾಂಗಲ್ಯ ಸರ(ತಾಳಿ) ಮಾರಿಕೊಂಡು ಹಣ ತುಂಬಿದ್ದೇನೆ. ಕೊರಳಲ್ಲಿ ಬಂಗಾರದ ತಾಳಿ ಬದಲಾಗಿ ಅರಿಸಿನ ಬೇರು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದೇನೆ. ಮನೆಗಳನ್ನು ಬೇಗ ನೀಡಿರಿ ಎಂದು ಕಂಡ ಕಂಡ ಅಧಿಕಾರಿಗಳ ಕಾಲುಮುಗಿದೆ. ಆದರೂ ಈವರೆಗೆ ಮನೆ ಸಿಕ್ಕಿಲ್ಲ. ಹೀಗಾಗಿ ಚಹಾದಂಗಡಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಸಾಕಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ’ ಎಂದು ಫಲಾನುಭವಿ ರೇಣುಕಾ ಪೂಪಳೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.