
ಶಿಗ್ಗಾವಿ: ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳ ಹಲವು ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆಯಲ್ಲಿ ಸಂಚರಿಸಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಲ್ಲಿ ತಗ್ಗು– ಗುಂಡಿಗಳು ಬಿದ್ದಿದ್ದು, ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ನಿತ್ಯ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಪರದಾಡುತ್ತಿದ್ದಾರೆ. ಹದಗೆಟ್ಟ ರಸ್ತೆಗಳನ್ನು ನೋಡಿ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದಿಂದ ಸವಣೂರಿಗೆ ಹೋಗುವ ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದು ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಈ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗುತ್ತಿವೆ. ಬೈಕ್ ಸವಾರರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ.
‘ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಾಕಷ್ಟು ಸಮಸ್ಯೆಯಾಗಿದೆ. ಆದರೂ ಈವರೆಗೂ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ತಕ್ಷಣ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಕೆಎಸ್‌ಆರ್‌ಪಿ ರಸ್ತೆಯೂ ಅಧೋಗತಿ: ಶಿಗ್ಗಾವಿಯಿಂದ ಗಂಗೆಭಾವಿಗೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಈ ಮಾರ್ಗದ ಹಳ್ಳದ ಬಳಿಯ ರಸ್ತೆಯಲ್ಲಿ ತಗ್ಗುಗುಂಡಿಗಳು ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಗಂಗೆಭಾವಿ ಕೆ.ಎಸ್.ಆರ್.ಪಿ. 10ನೇ ಪಡೆ ಪೊಲೀಸ್ ಸಿಬ್ಬಂದಿ ನಿತ್ಯ ಓಡಾಡುವುದು ಸಹ ಕಷ್ಟಕರವಾಗಿದೆ. ಅಲ್ಲದೆ, ಈ ಮಾರ್ಗದಲ್ಲಿ ಬರುವ ಹೊಸೂರ, ಯತ್ನಹಳ್ಳಿ, ದುಂಡಸಿ, ಅರಟಾಳ ಸೇರಿದಂತೆ ಹಲವು ಗ್ರಾಮಗಳಿಗೆ ಹೋಗುವ ರಸ್ತೆಯೂ ಹದಗೆಟ್ಟಿದೆ.
‘ಶಿಗ್ಗಾವಿಯಿಂದ ಆಂಜನೇಯ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಸಂಚರಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದ ಭಕ್ತರು ಪರದಾಡುತ್ತಿದ್ದಾರೆ. ಆದರೆ, ಹದಗೆಟ್ಟ ರಸ್ತೆಯನ್ನು ಅಧಿಕಾರಿಗಳು ಸರಿಪಡಿಸುತ್ತಿಲ್ಲ’ ಎಂದು ಮುಖಂಡ ಸಣ್ಣಪ್ಪಗೌಡ ಪಾಟೀಲ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದ ಎದುರಿಗಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯೂ ಹೆಗೆಟ್ಟಿದೆ. ಆಳವಾದ ತಗ್ಗು–ಗುಂಡಿಗಳು ಬಿದ್ದು, ಸಂಚಾರ ಪ್ರಯಾಸ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ದೂರದಿಂದ ಬರುವ ಪ್ರಯಾಣಿಕರು, ಶಿಗ್ಗಾವಿ ಪ್ರವೇಶಿಸುತ್ತಿದ್ದಂತೆ ಗುಂಡಿ ರಸ್ತೆಯಲ್ಲಿ ಸಾಗಬೇಕಾಗಿದೆ. ಅಲ್ಲದೆ, ಅನೇಕ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಗೆ, ನ್ಯಾಯಾಲಯಕ್ಕೆ ಹೋಗುವ ರಸ್ತೆಗಳು ತೀವ್ರ ಹದಗೆಟ್ಟಿವೆ. ಈ ರಸ್ತೆ ದಾಟುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಜನರು ಸಾಗುವಂತಾಗಿದೆ ಎಂದು ನಿವಾಸಿ ಸಿದ್ದಪ್ಪ ಕಡೆಮನಿ ದೂಡಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಕ್ರಾಸ್ ಬಳಿ ಕನಕದಾಸರ ವೃತ್ತದಲ್ಲಿ ಮತ್ತು ದುರ್ಗಾದೇವಿ ದೇವಸ್ಥಾನದ ವೃತ್ತ ಮತ್ತು ಬಂಕಾಪುರದಿಂದ ಮಾಸನಕಟ್ಟಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯೂ ತಗ್ಗುಗುಂಡಿಗಳಿಂದ ಹದಗೆಟ್ಟಿದೆ. ಈ ರಸ್ತೆಗಳಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿವೆ.
‘ಬಂಕಾಪುರದಿಂದ ಸವಣೂರಿಗೆ ಹೋಗುವ ರಸ್ತೆಯೂ ಹಾಳಾಗಿದೆ. ಹೀಗಾಗಿ, ವಾಹನ ಸವಾರರು ಭಯದಲ್ಲಿ ಸಂಚರಿಸುತ್ತಿದ್ದಾರೆ. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಬಂಕಾಪುರ ನಿವಾಸಿಗಳಾದ ರುದ್ರೇಶ ಪವಾಡಿ, ಚನ್ನಪ್ಪ ಹಳವಳ್ಳಿ ಅಳಲು ತೋಡಿಕೊಂಡರು.
ಮುಖಂಡ ಬಸವರಾಜ ಹಿರೇಬೆಂಡಿಗೇರಿ, ‘ಮುಖ್ಯ ರಸ್ತೆಗಳು ಮಾತ್ರವಲ್ಲದೇ, ಗ್ರಾಮೀಣ ಪ್ರದೇಶಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿ ಕಡೆ ಗಮನ ಹರಿಸಬೇಕು. ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಪಘಾತ ತಗ್ಗಿಸಬೇಕು’ ಎಂದು ಆಗ್ರಹಿಸಿದರು.
ರಸ್ತೆಗಳ ದುರಸ್ತಿಗಾಗಿ ಈಗಾಗಲೇ ಟೆಂಡರ್ ಪ್ರಕಟಣೆಯಾಗಿದೆ. ಸದ್ಯದಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳನ್ನು ಆರಂಭಿಸಲಾಗುವುದುಬಸವರಾಜ ಡಿ.ಬಿ. ಲೋಕೋಪಯೋಗಿ ಇಲಾಖೆ ಶಿಗ್ಗಾವಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.