ADVERTISEMENT

ಶಿಗ್ಗಾವಿ | ಅಂಗವಿಕಲರಿಗೆ ಪ್ರೋತ್ಸಾಹ ಅಗತ್ಯ: ಶಾಸಕ ಪಠಾಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:08 IST
Last Updated 3 ಡಿಸೆಂಬರ್ 2025, 6:08 IST
ಶಿಗ್ಗಾವಿ ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಉದ್ಘಾಟಿಸಿದರು
ಶಿಗ್ಗಾವಿ ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಉದ್ಘಾಟಿಸಿದರು   

ಶಿಗ್ಗಾವಿ: ‘ಅಂಗವಿಕಲ ಮಕ್ಕಳಿಗೆ ಅನುಕಂಪ ತೋರಿಸುವ ಬದಲಾಗಿ ಅವರ ಬದುಕಿನ ಉತ್ತೇಜನಕ್ಕಾಗಿ ಪ್ರೋತ್ಸಾಹ, ಬೆಂಬಲ ನೀಡುವುದು ಮುಖ್ಯ. ಅದರಿಂದ ಅವರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ’ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.

ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲ ದಿನಾಚರಣೆ, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರಲ್ಲಿ ವಿಶೇಷ ಜ್ಞಾನಶಕ್ತಿ ಅಡಗಿದೆ. ಪುಟ್ಟರಾಜ ಕವಿ ಗವಾಯಿಗಳು ಅಂಧ ಮಕ್ಕಳಿಗೆ ಬೆಳಕು ನೀಡುವ ಮೂಲಕ ಬದುಕಿಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ಆಶ್ರಮದಲ್ಲಿ ನೂರಾರು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.

ADVERTISEMENT

‘ಕ್ಷೇತ್ರದ ಅಂಗವಿಕಲ ಮಕ್ಕಳಿಗೆ ಸುಮಾರು 100 ತ್ರಿಚಕ್ರ ವಾಹನ ನೀಡುವ ಯೋಜನೆ ನಮ್ಮದಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಹೆಚ್ಚಿನ ಮಾಸಾಶನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದರು.

ಬಿಜೆಪಿ ಯುವ ಮುಖಂಡ ಭರತ ಬೊಮ್ಮಾಯಿ ಮಾತನಾಡಿ, ‘ದೇವರ ಮುಂದೆ ನಾವು ಸಾಮಾನ್ಯ ಮಕ್ಕಳು, ಅಂಗವಿಕಲರು ದೇವರ ಮಕ್ಕಳಾಗಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಅವರಿಗೆ ವಿಶೇಷ ಪ್ರವೇಶ ನೀಡಲಾಗುತ್ತಿದೆ’ ಎಂದರು.

ಅಂಗವಿಕಲರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಆಶು ನದಾಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ, ಅಂಗವಿಕಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹಾದೇವ ಎಚ್.ಡಿ, ಅಂಗವಿಕಲರ ಜಿಲ್ಲಾ ಘಟಕದ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ ಮಾತನಾಡಿದರು.

ಜಾನಪದ ಕಲಾವಿದ ಗುರುರಾಜ ಚಲವಾದಿ ಅವರಿಂದ ಸಂಗೀತ ಕಾರ್ಯಕ್ರಮ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಕ್ರೀಡಾಕೂಟಗಳು ಜರುಗಿದವು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಖಂಡರಾದ ಶಿವಾನಂದ ಮ್ಯಾಗೇರಿ, ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಮೌನೇಶ ಬಡಿಗೇರ, ಎಚ್.ಆರ್.ಶಿವಕುಮಾರ, ಎಂ.ಕೆ.ಪಾಟೀಲ, ಬಾಲಕೃಷ್ಣ, ಧರ್ಮಪ್ಪ ರಾಮಾಪುರ, ರಾಜು ಜವಳಿ, ಪಾಂಡುರಂಗ, ವೀರಯ್ಯ ಹಿರೇಮಠ, ಲಕ್ಷ್ಮೀ ಎಸ್., ಶಿಕ್ಷಕ ರಟ್ಟಿಹಳ್ಳಿ, ನಾಗಪ್ಪ ಬೆಂತೂರ, ಅಂಗವಿಕಲರ ಸಂಘದ ಎಲ್ಲ ಸದಸ್ಯರು, ಸುತ್ತಲಿನ ತಾಲ್ಲೂಕಿನ ಶಿಕ್ಷಕರು, ಪಾಲಕರು ಇದ್ದರು.

ಮಾಸಾಶನ ಹೆಚ್ಚಳಕ್ಕೆ ಒತ್ತಾಯ
‘ಅಂಗವಿಕಲರ ಮಾಸಾಶನ ತಿಂಗಳಿಗೆ ₹1400 ಮಾತ್ರ ಇದ್ದು ಹೊರ ರಾಜ್ಯಗಳಲ್ಲಿ ನೀಡುವಂತೆ ₹3 ಸಾವಿರ ಮಾಸಾಶನ ನೀಡಬೇಕು. ಬಸ್ ಸೌಲಭ್ಯ ರಾಜ್ಯವ್ಯಾಪ್ತಿ ನೀಡಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ 37 ಸಾವಿರ ಅಂಗವಿಕಲರಿದ್ದು ಅರ್ಹರಿಗೆ ನ್ಯಾಯ ನೀಡಬೇಕು’ ಎಂದು ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.