
ಶಿಗ್ಗಾವಿ: ಪಟ್ಟಣದಲ್ಲಿ ನಿರ್ಮಾಣವಾದ ಜಿ+1 ಮನೆ ಫಲಾನುಭವಿಗಳಿಗೆ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ನೀಡುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನಗರ ಸಮಿತಿ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ಹಲವು ವರ್ಷಗಳ ಹೋರಾಟದ ಫಲವಾಗಿ ಕಳೆದ ಜೂನ್ ತಿಂಗಳಲ್ಲಿ ಶಾಸಕರ ನೇತೃತ್ವದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ನಿರ್ಮಿತಿ ಕೇಂದ್ರ ಹಾಗೂ ಪುರಸಭೆ ಅಧಿಕಾರಿಗಳು ವಿದ್ಯುತ್ (ಕರೆಂಟ್) ಸಂಪರ್ಕ ಕೊಟ್ಟು ಮೀಟರ್ ಅಳವಡಿಸದಿರುವ ಹಾಗೂ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮನೆಗಳಿಗೆ ನಿಗದಿತ ಅವಧಿಯೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸದಿದ್ದರೆ ನಿರ್ಮಿತಿ ಕೇಂದ್ರದ ಎದುರುಗಡೆ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಈಗಾಗಲೇ ಜಿ+ 1 ಮನೆಗಾಗಿ ಅರ್ಜಿ ಹಾಕಿ ಪುರಸಭೆಗೆ ಫಲಾನುಭವಿ ವಂತಿಗೆ ಹಣ ತುಂಬಿರುವ ನಿವೇಶನ, ಮನೆ ರಹಿತ ಹಲವಾರು ಜನ ಫಲಾನುಭವಿಗಳಿಗೆ ಮನೆ ದೊರೆತಿಲ್ಲ. ಪುರಸಭೆಗೆ ಫಲಾನುಭವಿ ವಂತಿಗೆ ಕಟ್ಟಿ ಅರ್ಜಿ ಹಾಕಿರುವ ಬಡ ಜನರಿಗೆ (ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿ) ವಸತಿ ಸೌಲಭ್ಯ ಕಲ್ಪಿಸಬೇಕು. ಹಾಗೂ ಮಾರುತಿ ನಗರ, ಬಸವನಗರ, ಸಾಲಗೇರಿ ಓಣಿ ದ್ಯಾಮವ್ವನ ಪಾದಗಟ್ಟಿ ಸೇರಿದಂತೆ ಪುರಸಭೆಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ರಹಿತ ಬಡಜನರಿಗೆ ಹಿತ್ತಲು ಸಹಿತ ಮನೆ, ನಿವೇಶನ ಸೌಲಭ್ಯ ಕಲ್ಪಿಸಬೇಕು’ ಎಂದರು.
ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಸದಸ್ಯ ವೀರಣ್ಣ ಗಡ್ಡಿ ಮಾತನಾಡಿ, ‘ನಾವು ವಾಸಿಸುವ ಪ್ರದೇಶದಲ್ಲಿ ಬೀದಿ ದೀಪಗಳನ್ನು ಹಾಕಿಸಬೇಕು. ಕುಡಿಯುವ ನೀರಿನ ಸಮರ್ಪಕ ಸೌಲಭ್ಯಕ್ಕಾಗಿ ಪ್ರತಿ ಜಿ+ ಮನೆಗಳಿಗೆ ನೀರಿನ ನಲ್ಲಿ ಅಳವಡಿಸಿ, ಕುಟುಂಬಗಳಿಗೆ ಅಗತ್ಯವಿರುವಷ್ಟು ನೀರು ನಿರಂತರವಾಗಿ ದೊರೆಯುವಂತೆ ಮಾಡಬೇಕು. ಜಿ+ ಮನೆ ಆವರಣದಲ್ಲಿ ಸಮುದಾಯ ಭವನ ಹಾಗೂ ಅಂಗನವಾಡಿ ಮಂಜೂರು ಮಾಡಬೇಕು’ ಎಂದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿ ರಮೇಶಗೌಡ ಅವರು ಮನವಿ ಸ್ವೀಕರಿಸಿ, ‘ಒಂದು ತಿಂಗಳ ಒಳಗಾಗಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಡಿವೈಎಫ್ಐ ನಗರ ಸಮಿತಿ ಅಧ್ಯಕ್ಷ ಮೌಲಾಲಿ ನವಲಗುಂದ, ಕಾರ್ಯದರ್ಶಿ ಕಿಶೋರ್ ದೋತ್ರರೆ, ಮಕಬುಲ್ ಯಲ್ಲಾಪೂರ, ಗುರುನಗೌಡ ದುಂಡಿಗೌಡ್ರ, ಕಸ್ತೂರಿ ಜಿ. ವಡ್ಡರ, ಮಂಜುಳಾ ತಡಸ, ಸುಮಿತ್ರಾ ಶಿರಹಟ್ಟಿ, ರಾಧಾ ಆಲೂರು, ಅಸ್ಮಾ ದೇವಸೂರು, ಸಾವಿತ್ರಿ ಚೌಹಾಣ, ಬಸೀರಾಬಾನು ಖುರ್ಷಾಪುರ, ಮಾಲಾನಬಿ ಬಡಿಗೇರ, ಕೃಷ್ಣಪ್ಪ ಗದಗ, ಗಣೇಶ ತೋಟಿಗೆರ, ರುದ್ರೇಶ ಗೌರಣ್ಣನವರ, ಶಂಭು ಗಾಟೆನವರ, ಅಮಿತ್ ಬಿಂಡಲಗಿ, ಕಾಶಮ್ಮ ತಿಟ್ಟೇನವರ, ಜಯಮ್ಮ ಅಂಗಡಿ, ಜಿ+1 ಮನೆ ಫಲಾನುಭವಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.