ಶಿಗ್ಗಾವಿ: ಹಲವು ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸಿರುವ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ವರ್ಗವಾಗಿ ಹೋದವರ ಸ್ಥಾನಕ್ಕೆ ಹೊಸಬರು ಬಂದು ಸದ್ಯ ಹಾಜರಾಗಲಿದ್ದಾರೆ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಭಾಭವನದಲ್ಲಿ ಶನಿವಾರ ತಾಲ್ಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ’ಗ್ರಾಮೀಣ ಪ್ರದೇಶದಿಂದ ಬಂದಿರುವ ಬಡ ಕೂಲಿಕಾರರಿಗೆ ಉತ್ತಮ ಚಿಕಿತ್ಸೆ ಸಿಗಬೇಕು. ಯಾರನ್ನೂ ಕಡೆಗಣಿಸಬೇಡಿ. ವೈದ್ಯರ ಸೇವೆ ಪವಿತ್ರವಾಗಿದ್ದು, ರೋಗಿಗಳನ್ನು ಸಮಾನ ಮನೋಭಾವದಿಂದ ಕಾಣುವ ಮೂಲಕ ಗುಣಮುಖರಾಗುವಂತೆ ನೋಡಿಕೊಳ್ಳಬೇಕು. ರೋಗಿಗಳ ಆರೈಕೆ ಮಾಡಿ ಅವರಿಗೆ ರಕ್ಷಣೆ ನೀಡುವಂತಾಗಲಿ’ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸೂಚಿಸಿದರು.
‘ಆಸ್ಪತ್ರೆಗೆ ಈಗಾಗಲೇ ಹೊಸದಾಗಿ ನಾಲ್ವರು ವೈದ್ಯರು ಹಾಜರಾಗಿದ್ದು, ಇನ್ನೂ ನಾಲ್ವರು ವೈದ್ಯರ ನೇಮಕಾತಿಯ ಅವಶ್ಯವಿದೆ. ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ತಕ್ಷಣ ಖಾಲಿ ವೈದ್ಯರ ಹುದ್ದೆಗೆ ನೇಮಕಾತಿ ಮಾಡುವ ಕಾರ್ಯ ಮಾಡುತ್ತೇವೆ. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರು ಶ್ರಮ ಮುಖ್ಯ. ಅವರ ಗೌರವಧನವನ್ನು ಸರಿಯಾದ ಸಮಯಕ್ಕೆ ಸಿಗುವಂತೆ ಸಂಬಂಧಪಟ್ಟ ಏಜನ್ಸಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯ ಆಸ್ತಿ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ’ ಎಂದರು.
ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (ಡಿ.ಎಚ್.ಒ) ಜಯಾನಂದ, ಟಿಎಚ್ಒ ಸತೀಶ ಸೇರಿದಂತೆ ಆಸ್ಪತ್ರೆಯ ಎಲ್ಲ ವೈದ್ಯರು, ಸಿಬ್ಬಂದಿ ಇದ್ದರು.
ಬಿಲ್ ಬಾಕಿ ಪಾವತಿಗೆ ಲಂಚದ ಬೇಡಿಕೆ: ಆರೋಪ
18 ತಿಂಗಳಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದ ರೋಗಿಗಳಿಗೆ ಇಲ್ಲಿನ ಕ್ಯಾಂಟೀನ್‌ದಿಂದ ಊಟ ಉಪಾಹಾರ ನೀಡುತ್ತ ಬಂದಿದ್ದು ಅದಕ್ಕೆ ಬಿಲ್ ₹ 6 ಲಕ್ಷ ಹಣ ಬಾಕಿ ಇದೆ. ಬಿಲ್ ಕೇಳಿದರೆ ಇಲ್ಲಿಯ ಸಿಬ್ಬಂದಿ ಲಂಚದ ಬೇಡಿಕೆ ಇಡುತ್ತಿದ್ದಾರೆ. ಒಂದು ತಿಂಗಳಲ್ಲಿ ನನ್ನ ಮಗಳ ಮದುವೆ ಇದೆ. ಏನು ಮಾಡಬೇಕು ಎಂಬುದೇ ತಿಳಿಯದಾಗಿದೆ. ಮಗನ ಬೈಕ್ ತಾಳಿ ಮಾರಿದ್ದೇನೆ. ಮಗಳ ಮದುವೆ ಹೇಗೆ ನಿಭಾಯಿಸುವುದು ಎಂಬ ಚಿಂತೆ ಕಾಡುತ್ತಿದೆ’ ಎಂದು ಕ್ಯಾಂಟೀನ್ ನಡೆಸುವ ರೇಣುಕಾ ಗಣಪತಿ ಉಪಳೆ ಶಾಸಕರ ಮುಂದೆ ಅಳಲು ತೋಡಿಕೊಂಡರು. ‘ಶೇ 10ರ ಬಡ್ಡಿ ದರದಲ್ಲಿ ಅಡುಗೆಗೆ ಬೇಕಾಗುವ ತರಕಾರಿ ಆಹಾರ ಧಾನ್ಯ ಸಾಮಗ್ರಿ ತಂದು ಮಗಳು ಮಕ್ಕಳು ಸೇರಿ ದುಡಿದಿದ್ದೇವೆ. ನಿತ್ಯ ರೋಗಿಗಳಿಗೆ ಊಟ ಉಪಾಹಾರ ನೀಡಿದ್ದೇವೆ. ಸಾಲದ ರೂಪದಲ್ಲಿ ನೀಡಿದ ಅಂಗಡಿಕಾರರು ಹಣ ನೀಡುವಂತೆ ಹೇಳುತ್ತಿದ್ದಾರೆ. ಅವರ ಹಣ ಹೇಗೆ ಮರುಪಾವತಿಸಲಿ? ಮಗಳ ಮದುವೆ ಹೇಗೆ ಮಾಡಲಿ? ಆಸ್ಪತ್ರೆ ಅಧಿಕಾರಿ ಲಿಂಗದಾಳ ಅವರಿಗೆ ಲಂಚದ ಹಣ ಹೇಗೆ ನೀಡಬೇಕು’ ಆತಂಕ ವ್ಯಕ್ತ ಪಡಿಸಿದರು. ತಕ್ಷಣ ವೈದ್ಯರನ್ನು ಕರೆಸಿದ ಶಾಸಕರು ‘ಇವರ ಬಿಲ್ ತಕ್ಷಣ ನೀಡಬೇಕು. ಇಲ್ಲವಾದರೆ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಗೌರವಧನದಲ್ಲಿ ತಾರತಮ್ಯ ಸರಿಪಡಿಸಲು ಸೂಚಿಸಲಾಗಿದೆ ಎಂದರು. ‘ಆಸ್ಪತ್ರೆಯ ಅಧಿಕಾರಿ ಸಿಬ್ಬಂದಿ ಕರೆಯಿಸಿ ತಕ್ಷಣ ಬಾಕಿ ಇರುವ ಬಿಲ್ ಸಂದಾಯ ಮಾಡುವಂತೆ ಸೂಚಿಸಿದ್ದೇನೆ. ತಕ್ಷಣ ಬಿಲ್ ನೀಡುವ ಕ್ರಮ ಕೈಗೊಳ್ಳುತ್ತೇನೆ’ ಎಂದು ಡಿಎಚ್‌ಒ ಜಯಾನಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.