ಶಿಗ್ಗಾವಿ: ‘ಮಕ್ಕಳಿಗೆ ಹಬ್ಬ ಹರಿದಿನಗಳ ಮಹತ್ವ ತಿಳಿಸುವುದು ಮುಖ್ಯ. ಪಾಶ್ಚಿಮಾತ್ಯ ಸಂಸ್ಕಾರಗಳು ದೂರಾಗುವ ಮೂಲಕ ನಾಡಿನ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ತಿಳಿಯಲು ಸಾಧ್ಯವಿದೆ. ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ನಾಮದೇವ ಸಿಂಪಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೇದಾರೆಪ್ಪ ಬಗಾಡೆ ಹೇಳಿದರು.
ಪಟ್ಟಣದ ವಿಠ್ಠಲ್-ರುಕ್ಮಿಣಿ ದೇವಸ್ಥಾನದಲ್ಲಿ ದಸರಾ ಅಂಗವಾಗಿ ಸೋಮವಾರ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ‘ಮೊಬೈಲ್ ಹಾವಳಿಯಿಂದ ಮಕ್ಕಳು ದೂರಾಗಬೇಕು. ನಮ್ಮ ನೆಲದ ಮೂಲ ಆಟಗಳ ಬಗ್ಗೆ ತಿಳಿಯಬೇಕು. ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಬೇಕು. ಹೀಗಾಗಿ ಸಮಾಜದ ಮಹಿಳಾ ಮಂಡಳಿ ಉತ್ತಮ ಕಾರ್ಯ ರೂಪಿಸಿದೆ. ತಾಯಿ ಮಕ್ಕಳಿಗೆ ನೀಡುವ ಸಂಸ್ಕಾರಗಳು ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿವೆ. ಹಬ್ಬಹರಿದಿನಗಳ ಹಿನ್ನೆಲೆಯನ್ನು ತಾಯಂದಿರು ತಿಳಿಸುವ ಕಾರ್ಯ ಮಾಡಬೇಕು’ ಎಂದರು.
ದೇವಸ್ಥಾನದಲ್ಲಿ ಮಹಿಳಾ ಮಡಳಿಯ ಸದಸ್ಯರಿಂದ ಆರತಿ, ಭಜನೆ, ಹರಿಪಠಗಳು, ಬಾಲಕನ್ನೆಯರ ಪಾದಪೂಜೆ, ಮಹಿಳೆಯರಿಗೆ ಉಡಿ ತುಂಬುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಮಕ್ಕಳಿಂದ ಸಾಮೂಹಿಕ ನೃತ್ಯ, ಭಕ್ತಿಹಾಡುಗಳ ಸ್ಪರ್ಧೆ ಜರುಗಿತು. ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಸಮಾಜದ ಉಪಾಧ್ಯಕ್ಷ ಕೃಷ್ಣ ಮೂಳೆ, ಏಕನಾಥ ಮಳವಾದೆ, ದಾಮೋದರ ಮಾಳವಾದೆ, ಮುರಳೀದರ ಮಳವಾದೆ, ಪರಶುರಾಮ ಮಳವಾದೆ, ಪ್ರಕಾಶ ಔದಕರ, ಮಹಿಳಾ ಮಂಡಳದ ಅಧ್ಯಕ್ಷೆ ರೂಪಾ ಬಗಾಡೆ, ಉಪಧ್ಯಕ್ಷೆ ಅಶ್ವಿನಿ ಗಂಜೀಗಟ್ಟಿ, ಮಮತಾ ಮಳವಾದೆ, ರೂಪಾ ಮಾಳವಾದೆ, ಅನುರಾಧಾ ಗಂಜೀಗಟ್ಟಿ, ಕಾವ್ಯಾ ಬಗಾಡೆ, ಗೀತಾ ಬಗಾಡೆ, ಶಾಂತಾಬಾಯಿ ಮಾಲವಾದೆ, ರೇಣುಕಾ ಗಂಜೀಗಟ್ಟಿ, ರಂಜನಾ ಔದಕರ, ಶ್ವೇತಾ ಕೊಪರ್ಡೆ, ಸುಧಾ ಕೊಪರ್ಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.