ADVERTISEMENT

ಶಿಗ್ಗಾವಿ: ಕುಂಟುತ್ತಾ ಸಾಗಿದ ಡಿಪೊ ಕಾಮಗಾರಿ

ಅಧಿಕಾರಿಗಳು– ಜನಪ್ರತಿನಿಧಿಗಳ ನಿರ್ಲಕ್ಷ್ಯ: ಬಸ್‌ ಸೇವೆಯಲ್ಲಿ ಜನರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 6:25 IST
Last Updated 1 ಸೆಪ್ಟೆಂಬರ್ 2024, 6:25 IST
ಶಿಗ್ಗಾವಿಯ ಗಂಗೆಬಾವಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಡಿಪೊ ಕಟ್ಟಡ
ಶಿಗ್ಗಾವಿಯ ಗಂಗೆಬಾವಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಡಿಪೊ ಕಟ್ಟಡ   

ಶಿಗ್ಗಾವಿ: ಶಿಗ್ಗಾವಿ ಪಟ್ಟಣವು ತಾಲ್ಲೂಕು ಆಗಿ ಹಲವು ವರ್ಷಗಳಾಗಿದ್ದು, ಇದುವರೆಗೂ ಸ್ವಂತ ಬಸ್ ಡಿಪೊವಿಲ್ಲ. ಪಕ್ಕದ ಸವಣೂರು ತಾಲ್ಲೂಕಿನ ಡಿಪೊ ಮೂಲಕವೇ ಶಿಗ್ಗಾವಿ ತಾಲ್ಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶಿಗ್ಗಾವಿಗೆ ಸ್ವಂತ ಡಿಪೊ ತೆರೆಯಬೇಕೆಂದು ಮೂರು ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿದ್ದು, ಇದುವರೆಗೂ ಕಾಮಗಾರಿ ಮುಗಿದಿಲ್ಲ.

ಸ್ವಂತ ಡಿಪೊ ಇಲ್ಲದಿದ್ದರಿಂದ ಶಿಗ್ಗಾವಿ ತಾಲ್ಲೂಕಿನಲ್ಲಿ ಬಸ್‌ಗಳ ಕಾರ್ಯಾಚರಣೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದಾಗಿ ಜನರಿಗೆ ಬಸ್ ಸೇವೆಯಲ್ಲಿ ತೊಂದರೆ ಉಂಟಾಗುತ್ತಿದೆ.

ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಲಭ್ಯವಿರುವ ಬಸ್‌ಗಳಲ್ಲಿಯೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪುರುಷರು, ಬಸ್‌ಗಳಲ್ಲಿ ಪ್ರಯಾಣಿಸಲು ಯಾತನೆ ಅನುಭವಿಸುತ್ತಿದ್ದಾರೆ.

ADVERTISEMENT

ಜಿಲ್ಲೆಯ ಬಹುತೇಕ ತಾಲ್ಲೂಕಿನಲ್ಲಿ ಸ್ವಂತ ಡಿ‍ಪೊ ಇದೆ. ಆದರೆ, ಶಿಗ್ಗಾವಿ ತಾಲ್ಲೂಕಿನಲ್ಲಿ ಡಿಪೊ ಇಲ್ಲ. ಸವಣೂರು ಡಿಪೊದಲ್ಲಿ ಲಭ್ಯವಿರುವ ಬಸ್‌ಗಳನ್ನೇ, ಎರಡೂ ತಾಲ್ಲೂಕಿಗೆ ಬಳಸಲಾಗುತ್ತಿದೆ. ಇದರಿಂದಾಗಿ ಶಿಗ್ಗಾವಿ ತಾಲ್ಲೂಕಿಗೆ ಅಗತ್ಯವಿರುವಷ್ಟು ಬಸ್‌ ಲಭ್ಯವಾಗುತ್ತಿಲ್ಲ. ಹೊಸ ಡಿಪೊ ಆರಂಭವಾದರೆ ಮಾತ್ರ, ಹೆಚ್ಚುವರಿ ಬಸ್‌ಗಳನ್ನು ನಿಗಮದಿಂದ ಪಡೆಯಬಹುದೆಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಡಿಪೊ ಆರಂಭವಾಗದಿದ್ದಕ್ಕೆ ಜನರೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಡಿಪೊ ಕಾಮಗಾರಿ ಮುಗಿಸದಿದ್ದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.

‘ಹೊಸ ಡಿಪೊ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿ ಮೂರು ವರ್ಷವಾಗಿದೆ. ಆದರೆ, ಇದುವರೆಗೂ ಕಾಮಗಾರಿ ಮುಗಿದಿಲ್ಲ. ಡಿಪೊ ಸಹ ಉದ್ಘಾಟನೆಯಾಗಿಲ್ಲ. ಇದರಿಂದ ಸ್ವಂತ ಡಿಪೊ ಕನಸು, ನನಸಾಗುತ್ತಿಲ್ಲ’ ಎಂದು ಸ್ಥಳೀಯರು ದೂರಿದರು.

‘ಶಿಗ್ಗಾವಿ ಸವಣೂರು ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಗ್ಗಾವಿಗೆ ಪ್ರತ್ಯೇಕ ಡಿಪೊ ಮಂಜೂರಾತಿ ಮಾಡಿದ್ದರು. ಅನುದಾನ ಸಹ ಬಿಡುಗಡೆ ಮಾಡಿದ್ದರು. ಡಿಪೊಗೆ 50 ಬಸ್‌ಗಳನ್ನು ಹೆಚ್ಚುವರಿಯಾಗಿ ನೀಡಲೂ ಅನುಮತಿ ನೀಡಿದ್ದರು’ ಎಂದು ಹೇಳಿದರು.

‘ಬಸ್‌ ಮೆಕ್ಯಾನಿಕ್ ಆಗುವ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕೇಂದ್ರ ನಿರ್ಮಾಣಕ್ಕೂ ಅನುಮತಿ ನೀಡಲಾಗಿತ್ತು. ಡಿಪೊ ಪಕ್ಕದಲ್ಲೇ ತರಬೇತಿ ಕೇಂದ್ರದ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ಅದು ಸಹ ಇನ್ನೂ ಮುಗಿದಿಲ್ಲ. ಎರಡೂ ಕಾಮಗಾರಿಗಳು ಕುಂಟುತ್ತ ಸಾಗಿವೆ’ ಎಂದು ಸ್ಥಳೀಯರು ದೂರಿದರು.

‘ಡಿಪೊ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ನೂತನ ಡಿಪೊ ಉದ್ಘಾಟನೆ ಮಾಡಿ, ಬಸ್‌ಗಳ ಮೇಲೆ ‘ಶಿಗ್ಗಾವಿ ಡಿಪೊ’ ಮುದ್ರೆ ಹಾಕಬೇಕು. ತಾಲ್ಲೂಕಿನಲ್ಲಿ ಬಸ್ ಸೇವೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ಶಿಗ್ಗಾವಿ ಗಂಗೆಬಾವಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಡಿಪೊ ಬಳಿ ಹದಗೆಟ್ಟಿರುವ ರಸ್ತೆ

ಹದಗೆಟ್ಟ ರಸ್ತೆ:‌ ಗಂಗೆಬಾವಿ ರಸ್ತೆಯಿಂದ ಡಿಪೊಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಿಪೊ ಕಟ್ಟಡ  ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿ ತರುವ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ.

ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇದು ಸಹ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ರಸ್ತೆ ದುರಸ್ತಿ ಮಾಡಿಸಿ ಕಟ್ಟಡದ ಕಾಮಗಾರಿ ಮುಗಿಸಲು ಅವಕಾಶ ಕಲ್ಪಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಶಿಗ್ಗಾವಿ ಪಟ್ಟಣದ ಗಂಗೆಬಾವಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಡಿಪೋ ತರಬೇತಿ ಕೇಂದ್ರದ ಕಟ್ಟಡ
ಶಿಗ್ಗಾವಿ ಡಿಪೊ ಹಾಗೂ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಉದ್ಘಾಟನೆ ಮಾತ್ರ ಬಾಕಿ ಇದೆ
ಶಶಿಧರ ಕುಂಬಾರ ಕೆಎಸ್‌ಆರ್‌ಟಿಸಿ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ
‘52 ಮಾರ್ಗದಲ್ಲಿ ಬಸ್ ಸಂಚಾರ’
‘ಸವಣೂರು ಬಸ್ ಡಿಪೊದಲ್ಲಿ ಸುಮಾರು 59 ಬಸ್‌ಗಳಿವೆ. ಶಿಗ್ಗಾವಿ ಸವಣೂರ ತಾಲ್ಲೂಕಿನ ಹಳ್ಳಿಗಳು ಹಾಗೂ ಹೊರ ಜಿಲ್ಲೆ ಹೊರ ರಾಜ್ಯಗಳ 52 ಮಾರ್ಗಗಳಲ್ಲಿ ಬಸ್ ಸಂಚರಿಸುತ್ತಿವೆ’ ಎಂದು ಸವಣೂರು ಡಿಪೊ ಮ್ಯಾನೇಜರ್ ವಿಷ್ಣು ಕಲಾಲ ಹೇಳಿದರು. ‘ಮಳೆಗಾಲದಲ್ಲಿ ರಸ್ತೆ ಹದಗೆಟ್ಟಿರುವ ಕಾರಣ ಬಸ್‌ಗಳು ಆಗಾಗ ದುರಸ್ತಿಗೆ ಬರುತ್ತಿವೆ. ನಿಗದಿತ ವೇಗದಲ್ಲಿ ಚಲಿಸಲು ಸಾಧ್ಯವಿಲ್ಲದಂತಾಗಿದೆ. ನಿತ್ಯ ಸಂಚರಿಸುವ ಮಾರ್ಗದಲ್ಲಿ ಕೆಲ ಸಲ ಅಡೆತಡೆಗಳು ಉಂಟಾಗುತ್ತಿವೆ. ಅದರಿಂದಾಗಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ವ್ಯಾಪಾರಸ್ಥರಿಗೆ ಸಮಯಕ್ಕೆ ಸರಿಯಾಗಿ ಬಸ್ ಲಭ್ಯವಾಗುತ್ತಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.