ADVERTISEMENT

ಶಿಗ್ಗಾವಿ: ಬಡವರ ಸೂರಿಗಿಲ್ಲ ‘ಮೂಲ ಸೌಕರ್ಯ’

ಶಿಗ್ಗಾವಿಯಲ್ಲಿ ನಿರ್ಮಿಸಿರುವ ಜಿ+1 ಮನೆ | ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ ಕೊರತೆ | ತಾತ್ಕಾಲಿಕ ಕೊಕ್ಕೆಯಿಂದ ಬೆಳಕು

ಎಂ.ವಿ.ಗಡಾದ
Published 10 ಡಿಸೆಂಬರ್ 2025, 3:16 IST
Last Updated 10 ಡಿಸೆಂಬರ್ 2025, 3:16 IST
ಶಿಗ್ಗಾವಿ ಪಟ್ಟಣದಲ್ಲಿ ನಿರ್ಮಿಸಲಾದ ಜಿ+1 ಮನೆ ಬಳಿ ನಿಂತಿರುವ ನಿವಾಸಿಗಳು
ಶಿಗ್ಗಾವಿ ಪಟ್ಟಣದಲ್ಲಿ ನಿರ್ಮಿಸಲಾದ ಜಿ+1 ಮನೆ ಬಳಿ ನಿಂತಿರುವ ನಿವಾಸಿಗಳು   

ಶಿಗ್ಗಾವಿ: ಪಟ್ಟಣದ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಜಿ+1 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಈ ಮನೆಗಳು ಹಲವು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಅದರಲ್ಲಿ ವಾಸಿಸುತ್ತಿರುವ ಬಡವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜಿ+1 ಮನೆ ನಿರ್ಮಾಣವಾದ ನಂತರ ಅದರ ಹಂಚಿಕೆ ವಿಚಾರವಾಗಿ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಅರ್ಹ ಬಡವರು ಹೋರಾಟ ಸಹ ಮಾಡಿದ್ದರು. ಹೋರಾಟಕ್ಕೆ ಮಣಿದ ಪುರಸಭೆ ಅಧಿಕಾರಿಗಳು, ಕೆಲ ತಿಂಗಳ ಹಿಂದೆಯಷ್ಟೇ ಮನೆಗಳನ್ನು ಹಂಚಿಕೆ ಮಾಡಿದ್ದಾರೆ.

ತಮ್ಮ ಹೆಸರಿಗೆ ಹಂಚಿಕೆಯಾದ ಮನೆಗಳಲ್ಲಿ ಬಡವರು, ಮಕ್ಕಳು ಹಾಗೂ ವೃದ್ಧರ ಸಮೇತ ವಾಸವಾಗಿದ್ದಾರೆ. ಇದೀಗ, ಪ್ರತಿಯೊಂದು ಮನೆಯಲ್ಲಿಯೂ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಹಾಗೂ ಇತರೆ ಸೌಲಭ್ಯಗಳಿವೆ. ಹೆಸರಿಗಷ್ಟೇ ಜಿ+1 ಮನೆಗಳಾಗಿದ್ದು, ಅದರಲ್ಲಿ ವಾಸವಿರುವ ಜನರು ಮಾತ್ರ ಸಮಸ್ಯೆಯಿಂದ ಯಾತನೆ ಅನುಭವಿಸುತ್ತಿದ್ದಾರೆ.

ಕಳೆದ 13 ವರ್ಷಗಳ ಹಿಂದೆ ಜಿ+1 ಮನೆಗಳು ನಿರ್ಮಿಸಲಾಗಿದೆ. ಮನೆಗಳನ್ನು ಪಡೆದುಕೊಳ್ಳಲು ಅರ್ಹ ಬಡವರು, ತಲಾ ತಲಾ ₹ 40 ಸಾವಿರದಿಂದ ₹ 45 ಸಾವಿರ ಪಾವತಿಸಿದ್ದರು. ಆದರೆ, ಮನೆ ಹಂಚಿಕೆ ಮಾಡದೇ ವಿಳಂಬ ಮಾಡಲಾಗುತ್ತಿತ್ತು.

ಮನೆ ಹಂಚಿಕೆಗಾಗಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಫಲಾನುಭವಿಗಳು ಹೋರಾಟ ಮಾಡುತ್ತಿದ್ದರು. ಹೋರಾಟಕ್ಕೆ ಮಣಿದ ಪುರಸಭೆ, ಇತ್ತೀಚೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ವಿತರಣೆ ಮಾಡಿದೆ.

ಮನೆ ತಮ್ಮದಾಯಿತು ಎಂಬ ಸಂತಸದಲ್ಲಿರುವ ಜನರು, ಇದೀಗ ಮೂಲ ಸೌಕರ್ಯವಿಲ್ಲದೇ ಪರದಾಡುತ್ತಿದ್ದಾರೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹಾಗೂ ಸರಿಯಾದ ಶೌಚಾಲಯವಿಲ್ಳ. ಹೀಗಾಗಿ, ಇಲ್ಲಿನ ನಿವಾಸಿಗಳು ನಿತ್ಯವೂ ಕತ್ತಲಿನಲ್ಲಿ ದಿನ ಕಳೆಯುತ್ತಿದ್ದಾರೆ. 

ಮಹಿಳೆಯರು, ಮಕ್ಕಳು ರಾತ್ರಿಯಾದರೆ ಸಾಕು ಮನೆ ಬಿಟ್ಟು ಹೊರಗೆ ಹೋಗದಂತಾಗಿದೆ. ಮಕ್ಕಳಿಗೆ ಓದಲು ಮನೆಯಲ್ಲಿ ದೀಪವಿಲ್ಲ. ಮಕ್ಕಳು ಶಾಲೆಯಲ್ಲಿನ ಓದು, ಬರಹವನ್ನು ಮನೆಯಲ್ಲಿ ಮಾಡಲು ಆಗುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳು ಓದಿನಲ್ಲಿ ಹಿಂದುಳಿಯುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

‘ರಾತ್ರಿ ವೇಳೆ ಹಾವು, ಚೇಳುಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ, ಭಯದ ವಾತಾವರಣದಲ್ಲಿ ಜನ ಓಡಾಡುವಂತಾಗಿದೆ. ವಿದ್ಯುತ್ ಕಂಬಗಳಿಗೆ ತಾತ್ಕಾಲಿಕವಾಗಿ ತಂತಿಯಿಂದ ಕೊಕ್ಕೆ ಹಾಕಿ ವಿದ್ಯುತ್ ಪಡೆಯಲಾಗುತ್ತಿದೆ.  ಮಕ್ಕಳು ನಿತ್ಯ ಕಂಬಗಳ ಕೆಳಗೆ ಓಡಾಡುತ್ತಿದ್ದಾರೆ.  ತಾತ್ಕಾಲಿಕವಾಗಿ ಹಾಕಿರುವ ಕೊಕ್ಕೆ ಬಿದ್ದು ಯಾವಾಗ ? ಏನಾಗುತ್ತದೆ? ಎಂಬ ಭಯವೂ ಇದೆ’ ಎಂದು ನಿವಾಸಿ ಶಾಂತವ್ವ ಗಡ್ಡಿ ಆತಂಕ ವ್ಯಕ್ತಪಡಿಸಿದರು.

ಶಿಗ್ಗಾವಿ ಪಟ್ಟಣದಲ್ಲಿರುವ ಜಿ+1 ಮನೆ ಬಳಿಯ ಚರಂಡಿ ದುಸ್ಥಿತಿ

‘ಮನೆ ಸುತ್ತಲು ಸರಿಯಾದ ಚರಂಡಿಗಳಿಲ್ಲ. ಇದ್ದ ಚರಂಡಿಗಳ ಎರಡು ಬದಿಗೆ ಕಸ ಬೆಳೆದು ನಿಂತಿವೆ. ಕಸ, ತ್ಯಾಜ್ಯ ವಸ್ತುಗಳು ಚರಂಡಿಯಲ್ಲಿ ಬಿದ್ದು ತುಂಬಿ ಹೋಗಿವೆ. ಈ ವರೆಗೆ ಯಾರು ಬಂದು ಸ್ವಚ್ಚತೆಗೆ ಮುಂದಾಗಿಲ್ಲ. ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಕೊಳಚೆ ನೀರಿನ ದುರ್ನಾಸನೆ ತಡೆಯದಂತಾಗಿದೆ’ ಎಂದರು.

‘ಕಟ್ಟಡದ 2ನೇ ಮಹಡಿಯಲ್ಲಿರುವ ಮನೆಗಳಲ್ಲಿ ಶೌಚಾಲಯಗಳನ್ನು ಸರಿಯಾಗಿ ನಿರ್ಮಿಸಿಲ್ಲ. ಅವುಗಳಿಗೆ ಸರಿಯಾದ ಪೈಪ್‌ಗಳಿಲ್ಲ. ಅದರಿಂದಾಗಿ, ಕೆಳ ಕಟ್ಟಡದಲ್ಲಿರುವ ಮನೆಗಳಲ್ಲಿ ಶೌಚಾಲಯದ ನೀರು ಸೋರುತ್ತಿದೆ. ಇದರ ದುರ್ವಾಸನೆ ಹೆಚ್ಚಾಗಿದೆ. ಶೌಚಾಲಯದ ನೀರು ಸೋರುವುದನ್ನಾದರೂ ತ್ವರಿತವಾಗಿ ಸರಿಪಡಿಸಬೇಕು’ ಎಂದು ನಿವಾಸಿ ಈರಣ್ಣ ಗಡ್ಡಿ, ಶಿವಾನಂದ ಹರಿಗೊಂಡ, ರುದ್ರಪ್ಪ ಗೌರಾಪುರ ಆಗ್ರಹಿಸಿದರು.

ರುದ್ರಪ್ಪ ಗೌರಾಪುರ
ಕಟ್ಟಡದ ಮೇಲಿನ ಮನೆಯ ಶೌಚಾಲಯಗಳಿಂದ ಕೆಳಗಿನ ಮನೆಗೆ ನೀರು ಸೋರುತ್ತಿದ್ದು ದುರ್ವಾಸನೆ ಬೀರುತ್ತಿದೆ. ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ನೀರು ಸೋರುವ ವಿಚಾರವಾಗಿ ಜಗಳವೂ ಆಗುತ್ತಿದೆ. ಈ ಸಮಸ್ಯೆ ಬೇಗನೇ ಪರಿಹರಿಸಿ
ರುದ್ರಪ್ಪ ಗೌರಾಪುರ ಜಿ+1 ಮನೆ ನಿವಾಸಿ
ಶಿವಾನಂದ ಹರಿಗೊಂಡ
ಹಲವು ವರ್ಷಗಳ ಹೋರಾಟದಿಂದ ಮನೆಗಳು ಸಿಕ್ಕಿವೆ. ಈಗ ಮೂಲ ಸೌಕರ್ಯವಿಲ್ಲದೇ ಕಾಡಿನ ಜನರಂತೆ ವಾಸಿಸುತ್ತಿದ್ದೇವೆ. ಕೂಡಲೇ ಮೂಲ ಸೌಕರ್ಯ ನೀಡಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು
ಶಿವಾನಂದ ಹರಿಗೊಂಡ ಜಿ+1 ಮನೆ ನಿವಾಸಿ
ಜಿ+1 ಮನೆಗಳಿಗೆ ತಿಂಗಳ ಒಳಗಾಗಿ ಕುಡಿಯುವ ನೀರು ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಶೌಚಾಲಯ ಸಮಸ್ಯೆಯನ್ನು ಸರಿಪಡಿಸಲಾಗುವುದು
ಮಲ್ಲೇಶಪ್ಪ ಆರ್. ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ 
‘ಪ್ರತಿಭಟನೆ ನಡೆಸಿದ್ದ ನಿವಾಸಿಗಳು’
‘ಜಿ+1 ಮನೆಗಳಲ್ಲಿ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ಪುರಸಭೆ ಎದುರು ನಿವಾಸಿಗಳು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನಗರ ಸಮಿತಿ ಹಾಗೂ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ‘ಹೋರಾಟದ ಫಲವಾಗಿ ಜೂನ್ ತಿಂಗಳಿನಲ್ಲಿ ಶಾಸಕರ ನೇತೃತ್ವದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ನಿರ್ಮಿತಿ ಕೇಂದ್ರದವರು ಹಾಗೂ ಪುರಸಭೆ ಅಧಿಕಾರಿಗಳು, ಇಂದಿಗೂ ಮೂಲ ಸೌಕರ್ಯ ಕಲ್ಪಿಸಿಲ್ಲ’ ಎಂದು ನಿವಾಸಿಗಳು ದೂರಿದ್ದರು. ಮೂಲ ಸೌಕರ್ಯ ಕಲ್ಪಿಸದಿದ್ದರೂ ಗಂಭೀರ ಸ್ವರೂಪದ ಹೋರಾಟ ನಡೆಸುವುದಾಗಿಯೂ ಘೋಷಿಸಿದ್ದಾರೆ.